ದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind) ಅವರು ಗಣರಾಜ್ಯೋತ್ಸವ (Republic Day) ಮುನ್ನಾದಿನವಾದ ಮಂಗಳವಾರ (ಜ.25) ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಸಂಜೆ 7 ಗಂಟೆಗೆ ಭಾಷಣ ಆರಂಭವಾಯಿತು. ಮೊದಲು ಹಿಂದಿ, ನಂತರ ಇಂಗ್ಲಿಷ್ ಭಾಷೆಯಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು. ‘ಇದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯಬೇಕಾದ ದಿನ. ಕೋಟ್ಯಂತರ ಜನರ ತ್ಯಾಗ ಮತ್ತು ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ಸಂವಿಧಾನದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮ್ಮ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದರು’ ಎಂದು ಹೇಳಿದರು.
ಸಂವಿಧಾನವು ಪ್ರತಿಪಾದಿಸುವ ಜೀವನಮೌಲ್ಯಗಳನ್ನು ನಾವೆಲ್ಲರೂ ಪಾಲಿಸಬೇಕು. ಅಧಿಕಾರ ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ನಾವೆಲ್ಲರೂ ಅರಿತುಕೊಳ್ಳಬೇಕು. ಸಂವಿಧಾನವು ಸೂಚಿಸುವ ಕರ್ತವ್ಯ ಪಾಲಿಸುವುದು ನಮ್ಮ ಹೊಣೆಗಾರಿಕೆಯೂ ಆಗಿದೆ. ದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಸಹ ಎಲ್ಲ ನಾಗರಿಕರ ಕರ್ತವ್ಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಮಾನವ ಸಮುದಾಯವು ಈಗ ಒಬ್ಬರಿಗೆ ಮತ್ತೊಬ್ಬರು ಆಸರೆ ಒದಗಿಸಬೇಕಾದ ಅನಿವಾರ್ಯತೆ ಬಂದಿದೆ. ಪಿಡುಗು ಆರಂಭವಾಗಿ ಎರಡು ವರ್ಷಗಳಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ದೇಶ, ವಿಶ್ವದ ಆರ್ಥಿಕತೆಗಳು ಮೊದಲಿನ ಸ್ಥಿತಿಗೆ ಬಂದಿದೆ. ಮಹಾಮಾರಿಯನ್ನು ಎದುರಿಸುವುದು ಭಾರತಕ್ಕೆ ಬಹುದೊಡ್ಡ ಸವಾಲಾಗಿತ್ತು. ನಮ್ಮ ಜನಸಂಖ್ಯೆ ದೊಡ್ಡದು, ಆರ್ಥಿಕತೆಯೂ ಇನ್ನೂ ವಿಕಸಿತಗೊಳ್ಳುತ್ತಿದೆ. ನಮ್ಮ ಬಳಿ ಹೆಚ್ಚು ಸಂಪನ್ಮೂಲಗಳೂ ಇರಲಿಲ್ಲ. ಆದರೂ ನಾವು ಈ ಪಿಡುಗನ್ನು ಅಸಾಧಾರಣ ದೃಢಸಂಕಲ್ಪ ಮತ್ತು ಕಾರ್ಯಕ್ಷಮತೆಯಿಂದ ಹೋರಾಡಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.
ನಮ್ಮಲ್ಲಿ ಸ್ವದೇಶಿ ನಿರ್ಮಿತ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಈ ಸಂಕಟದ ಪರಿಸ್ಥಿತಿ ನಿವಾರಣೆಯಾಗಿಲ್ಲ ಎನ್ನುವುದು ದೌರ್ಭಾಗ್ಯದ ಸಂಗತಿ. ನಾವು ಅನುಭವಿಸಿದ ಸಂಕಷ್ಟವನ್ನು ವಿವರಿಸಲು ನನ್ನ ಬಳಿ ಶಬ್ದವೇ ಇಲ್ಲ. ಆದರೆ ಸಾಕಷ್ಟು ಜನರ ಜೀವ ಉಳಿಸಲು ನಮ್ಮಿಂದ ಸಾಧ್ಯವಾಯಿತು ಎನ್ನುವುದನ್ನು ನಾನು ಹೇಳಬಲ್ಲೆ ಎಂದು ವಿವರಿಸಿದರು.
ಕೊವಿಡ್ ಶಿಷ್ಟಾಚಾರಗಳನ್ನು ನಾವೇಲ್ಲರೂ ತಪ್ಪದೆ ಪಾಲಿಸಬೇಕು. ಇದು ರಾಷ್ಟ್ರಧರ್ಮ ಆಗಿದೆ. ಈ ಸಂಕಟದ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಹಕಾರದ ಬಾಳ್ವೆ ಮಾಡಬೇಕು. ಕಠಿಣ ಪರಿಸ್ಥಿತಿಯಲ್ಲಿ ಸುದೀರ್ಘ ಅವಧಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾಡಿದ ಸೇವೆಯ ಬಗ್ಗೆ ಕೃತಜ್ಞತೆ ಇದೆ. ಹಲವು ಹಂತಗಳಲ್ಲಿ ಹಲವರು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ತುಂಡರಿಸದಂತೆ ಶ್ರಮಿಸಲು ಸಾಧ್ಯವಾಯಿತು ಎಂದು ಹೇಳಿದರು.
ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ನಮ್ಮೆದುರು ಇರುವ ದೊಡ್ಡ ಸವಾಲು. ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಉದ್ಯಮಿಗಳು ಈ ಅವಧಿಯಲ್ಲಿ ಹತ್ತಾರು ರೀತಿಯಲ್ಲಿ ಜನರಿಗೆ ಉಪಯುಕ್ತವಾಗುವಂಥ ವಸ್ತುಗಳನ್ನು ಆವಿಷ್ಕಾರ ಮಾಡಿದರು. ಆರ್ಥಿಕತೆ ಈಗ ಮತ್ತೆ ಹಳಿಗೆ ಮರಳುತ್ತಿದೆ. ಆದರೆ ಆಗಬೇಕಿರುವ ಕೆಲಸಗಳು ಇನ್ನೂ ಸಾಕಷ್ಟು ಇವೆ ಎಂದು ನೆನಪಿಸಿಕೊಂಡರು.
ಕಳೆದ ವರ್ಷ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ನಲ್ಲಿ ಮಹತ್ವದ ಸಾಧನೆ ಮಾಡಿದರು. ಇದು ದೇಶದ ಯುವಜನರಿಗೆ ಪ್ರೇರಣಾದಾಯಕವಾಗುವ ಹಲವು ಉದಾಹರಣೆಗಳನ್ನು ನೀಡಬಹುದು. ಆತ್ಮನಿರ್ಭರ್ ಭಾರತ್ ಉಪಕ್ರಮದಲ್ಲಿಯೂ ನಮ್ಮ ಸಾಧನೆ ವಿಶೇಷವಾಗಿದೆ. ಕೊಚಿನ್ ಸಿಪ್ಯಾರ್ಡ್ನಿಂದ ನಿರ್ಮಾಣವಾದ ಐಎನ್ಎಸ್ ವಿರಾಟ್ ಹಡಗು ಹೊಸ ಮೈಲಿಗಲ್ಲು ಸ್ಥಾಪಿಸಿತು ಎಂದು ಹೇಳಿದರು.
ಹೊಸ ಭಾರತ, ಸಶಕ್ತ ಭಾರತ, ಸಂವೇದನಾಶೀಲ ಭಾರತ ವಿಕಸಿತವಾಗುತ್ತಿದೆ. ಎಲ್ಲ ವಿದ್ಯಾವಂತರು, ಭಾರತೀಯರು ತಮ್ಮ ದೇಶಗಳ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಇದು ಶ್ಲಾಘನೀಯ ಸಂಗತಿ ಎಂದರು. ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಉನ್ನತಿ ಸಾಧಿಸಿರುವ ಎಲ್ಲರೂ ತಮ್ಮ ಊರು, ಹಳ್ಳಿಗಳನ್ನು ಮರೆಯಬಾರದು. ಅವುಗಳ ಅಭಿವೃದ್ಧಿಗೆ ಸದಾ ಶ್ರಮಿಸಬೇಕು. ಆಗ ಮಾತ್ರ ನಮ್ಮ ದೇಶ ಸಂಪೂರ್ಣ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.
ನಮ್ಮ ಸೈನಿಕರು ಸಿಯಾಚಿನ್ನ ಚಳಿಯಲ್ಲಿ, ರಾಜಸ್ಥಾನದ ಮರುಭೂಮಿಯ ಬಿಸಿಲಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದ ಯಾವುದೇ ಸೈನಿಕ ಹುತಾತ್ಮನಾದರೂ ದೇಶ ಕಣ್ಣೀರು ಹಾಕುತ್ತದೆ. ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಸೇನಾನಿ ಜನರಲ್ ಬಿಪಿನ್ ರಾವತ್ ಹುತಾತ್ಮರಾದರು. ಎಲ್ಲ ಭಾರತೀಯರು ಈ ದುರಂತಕ್ಕೆ ದುಃಖ ವ್ಯಕ್ತಪಡಿಸಿದರು ಎಂದು ಹೇಳಿದರು.
ರಾಷ್ಟ್ರ ನಿರ್ಮಾಣವು ನಾವು ನಿರಂತರ ಶ್ರಮಿಸಬೇಕಾದ ಸುದೀರ್ಘ ಅಭಿಯಾನ. ನಾವು ಸ್ವಾತಂತ್ರ್ಯ ಸಾಧಿಸಿದಾಗ ನಮ್ಮಲ್ಲಿ ಬಡತನವಿತ್ತು. ಆದರೆ ನಂತರದ 75 ವರ್ಷಗಳಲ್ಲಿ ನಾವು ಅಭಿವೃದ್ಧಿಯತ್ತ ದಾಪುಗಾಲು ಹಾಕಿದೆವು. ಇನ್ನಷ್ಟು ಅಭಿವೃದ್ಧಿ ಸಾಧಿಸಲು ನಮಗೆ ನಮ್ಮ ಹಿರಿಯರ ತ್ಯಾಗ, ಬಲಿದಾನಗಳು ಪ್ರೇರಣೆ ಒದಗಿಸಬೇಕು. ನಾನು ಎಲ್ಲ ದೇಶವಾಸಿಗಳಿಗೂ ಮತ್ತೊಮ್ಮೆ ಗಣರಾಜ್ಯೋತ್ಸವ ಶುಭಾಶಯ ಕೋರುತ್ತೇನೆ ಎಂದು ಭಾಷಣ ಮುಗಿಸಿದರು.
ಸಾಮಾಜಿಕ ಅಂತರದ ಸಮಯವು ನಾವು ಪರಸ್ಪರ ಎಷ್ಟು ಅವಲಂಬಿತರು ಎನ್ನುವುದನ್ನು ಸಾರಿ ಹೇಳಿದೆ. ಅಕಾಲದಲ್ಲಿ ನೆರವು ಕೊಡಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಶ್ರಮಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲದಲ್ಲಿ ಸರಿಯಾದ ಕ್ರಮ ತೆಗೆದುಕೊಂಡವು. ಇಂಥ ಕ್ರಮಗಳ ಕಾರಣದಿಂದಲೇ ಭಾರತದ ಆರ್ಥಿಕತೆಯು ಮತ್ತೆ ಚೇತರಿಸಿಕೊಂಡಿತು ಎಂದರು.
ನಮ್ಮ ಯುವ ರೈತರು ಉತ್ಸಾಹದಿಂದ ನಿಸರ್ಗ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಹೊಸ ತಲೆಮಾರಿನ ಉದ್ಯಮಿಗಳು ಯಶಸ್ಸಿನ ಹೊಸ ಮಾನದಂಡವನ್ನೇ ಸ್ಥಾಪಿಸಿದ್ದಾರೆ. ಈಗ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಇದೂ ಸಹ ಗಮನಾರ್ಹ ಸಾಧನೆ ಎಂದು ತಿಳಿಸಿದರು.
ಇದನ್ನೂ ಓದಿ:
Election Commissioner: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ಅಧಿಕಾರ ಸ್ವೀಕಾರ
Published On - 7:02 pm, Tue, 25 January 22