Presidential Election 2022 : ನನ್ನ ಆತ್ಮಸಾಕ್ಷಿ ಹೇಳಿದವರಿಗೆ ಮತ ಹಾಕಿದ್ದೇನೆ; ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್
ಭಾರತದ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸಂಸತ್ತು ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಭಾರತದ 15 ನೇ ರಾಷ್ಟ್ರಪತಿಯನ್ನು(President of India) ಆಯ್ಕೆ ಮಾಡಲು ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಇಂದು ಜುಲೈ 18 ರಂದು ಮತ ಚಲಾಯಿಸಲಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು (Droupadi Murmu) ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ (Yashwant Sinha) ಕಣದಲ್ಲಿದ್ದಾರೆ. ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದೆ. ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.
LIVE NEWS & UPDATES
-
ಕೇರಳದಲ್ಲಿ ಮತ ಚಲಾಯಿಸಿದ ಉತ್ತರ ಪ್ರದೇಶದ ಶಾಸಕ
ಉತ್ತರ ಪ್ರದೇಶದ ಬಿಜೆಪಿ ಶಾಸಕ ನೀಲ್ ರತನ್ ಸಿಂಗ್ ಪಟೇಲ್ ಕೇರಳದ ತಿರುವನಂತಪುರಂನಲ್ಲಿ ಮತ ಚಲಾಯಿಸಿದರು. ಪ್ರಸ್ತುತ ಉತ್ತರ ಪಾಲಕ್ಕಾಡ್ ಜಿಲ್ಲೆಯಲ್ಲಿ ಅವರು ಆಯುರ್ವೇದಿಕ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
-
ಗಾಲಿಕುರ್ಚಿಯಲ್ಲಿ ಬಂದ ಮುಲಾಯಂ ಸಿಂಗ್ ಯಾದವ್
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಗಾಲಿ ಕುರ್ಚಿಯಲ್ಲಿ ಬಂದು ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು. ಇದೀಗ 82ರ ಹರೆಯಲ್ಲಿರುವ ಮುಲಾಯಂ ಸಿಂಗ್ ಯಾದವ್ ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು.
Samajwadi Party patriarch #MulayamSinghYadav casts his vote for the Presidential Election. pic.twitter.com/lVi8snGToQ
— All India Radio News (@airnewsalerts) July 18, 2022
-
ನನ್ನ ಆತ್ಮಸಾಕ್ಷಿ ಹೇಳಿದವರಿಗೆ ಮತ ಹಾಕಿದ್ದೇನೆ: ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್
ರಾಷ್ಟ್ರಪತಿ ಚುನಾವಣೆಯಲ್ಲಿ ನನ್ನ ಆತ್ಮಸಾಕ್ಷಿಹೇಳಿದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ್ದೇನೆ ಎಂದು ಹರಿಯಾಣದ ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ಹೇಳಿದ್ದಾರೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಇವರು ಅಡ್ಡ ಮತದಾನ ಮಾಡಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ ಚಲಾವಣೆ
ರಾಷ್ಟ್ರಪತಿ ಚುನಾವಣೆ ಪ್ರಯುಕ್ತ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಸಂಸದ ಮನಮೋಹನ್ ಸಿಂಗ್ ಸಹ ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಗಾಲಿ ಕುರ್ಚಿಯಲ್ಲಿ ಕರೆತರಲಾಗಿತ್ತು.
Former Prime Minister of India and Congress MP Manmohan Singh, after casting his vote in the election being held for the post of President of India in Parliament pic.twitter.com/pm4Bihza1Z
— ANI (@ANI) July 18, 2022
ದ್ರೌಪದಿ ಮುರ್ಮು ಗೆಲುವು ಖಚಿತ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಖಚಿತ ಎಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಎನ್‌ಡಿಎ ಅಭ್ಯರ್ಥಿ ದ್ರೌಪದಿಗೆ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲವಿದೆ. ಬುಡಕಟ್ಟು ಸಮುದಾಯದ ಮಹಿಳೆ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎಂದರು.
ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್ನಿಂದ ಅವಮಾನ: ಸಿ.ಟಿ.ರವಿ
ಬೆಂಗಳೂರು: ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೂ ಅವರಿಗೆ ರಬ್ಬರ್ ಸ್ಟ್ಯಾಂಪ್ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಅವಮಾನ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ರಾಷ್ಟ್ರದ ಕ್ಷಮೆ ಕೇಳಬೇಕು. ಆದಿವಾಸಿ ಮಹಿಳೆಯನ್ನು ವಿರೋಧಿಸಿದ್ದರಿಂದ ಅವರ ಮುಖವಾಡ ಕಳಚಿದಂತೆ ಆಗಿದೆ. ಸಿದ್ದರಾಮಯ್ಯನವರೇ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯ್ತು? ಅಲ್ಪಸಂಖ್ಯಾತ, ಆದಿವಾಸಿ, ದಲಿತರ ಪರ ಅಂತಾ ಹೇಳಿಕೊಂಡಿದ್ದ ಸಿದ್ದರಾಮಯ್ಯ ಅವರ ಮುಖವಾಡವೂ ಕಳಚಿದೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿಯೇ ಸಂಸದ ಶ್ರೀನಿವಾಸ್ ಪ್ರಸಾದ್ ಮತದಾನ
ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಂಸದ ಶ್ರೀನಿವಾಸ ಪ್ರಸಾದ್ ಬೆಂಗಳೂರಿನಲ್ಲಿಯೇ ಮತ ಚಲಾಯಿಸಲಿದ್ದಾರೆ. ಉಳಿದಂತೆ 27 ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು ಬೆಂಗಳೂರಿನಲ್ಲಿ ಮತದಾನ ಮಾಡಲಿದ್ದಾರೆ. ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುತ್ತಿದೆ.
ಲಖನೌದಲ್ಲಿ ಯೋಗಿ ಆದಿತ್ಯನಾಥ್ ಮತದಾನ
ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ ಚಲಾಯಿಸಿದರು. ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ ಪಾತ್ರ ನಿರ್ಣಾಯಕವಾಗಿದೆ.
#WATCH Uttar Pradesh CM Yogi Adityanath casts vote to elect new President, in Lucknow#PresidentialElection pic.twitter.com/VDJ4WZIPp7
— ANI UP/Uttarakhand (@ANINewsUP) July 18, 2022
ಸಂಜೆ 5 ಗಂಟೆಯವರೆಗೆ ಮತದಾನ
ದೆಹಲಿ: ಸಂಸತ್ ಭವನ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ವಿಧಾನಸೌಧಗಳಲ್ಲಿ ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಅನುವಾಗುವಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆಗೆ ಅವಕಾಶವಿದೆ. ಸಂಸದರು ಮತ್ತು ಶಾಸಕರು ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು
ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ನಗರದ ಖಾಸಗಿ ಹೊಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಮತ್ತು ಸಚಿವರು ಒಟ್ಟಾಗಿಯೇ ವಿಧಾನಸೌಧಕ್ಕೆ ಬಂದರು. ಸಿಟಿ ರವಿ, ಸಿಸಿ ಪಾಟೀಲ್, ಹಾಲಪ್ಪ ಆಚಾರ್, ಪ್ರಭು ಚೌಹಾಣ್, ಎಂಪಿ ಕುಮಾರಸ್ವಾಮಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಬಸ್ನಲ್ಲಿ ವಿಧಾನಸೌಧದ ಆವರಣ ಪ್ರವೇಶಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಸಹ ಬಸ್ನಲ್ಲಿಯೇ ಬಂದಿದ್ದು ಎಲ್ಲರ ಗಮನ ಸೆಳೆಯಿತು.
ಮತ ಹಾಕಿದ ನರೇಂದ್ರ ಮೋದಿ
ದೆಹಲಿ: ಮುಂದಿನ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ನವದೆಹಲಿಯಲ್ಲಿ ಸಂಸತ್ ಭವನದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದರು. ಹಲವು ಹಿರಿಯ ಸಚಿವರು ಮತ್ತು ಸಂಸದರು ಸಹ ಸಂಸತ್ ಭವನದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
#WATCH Prime Minister Narendra Modi votes to elect new President, in Delhi#PresidentialElection pic.twitter.com/pm9fstL46T
— ANI (@ANI) July 18, 2022
ಸಂಸದರೊಂದಿಗೆ ಅಮಿತ್ ಶಾ ಭೋಜನಕೂಟ
ದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಎಲ್ಲ ಸಂಸದರನ್ನು ಭಾನುವಾರ ರಾತ್ರಿ ಊಟಕ್ಕೆ ಕರೆದಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು ಎಂದು ಸೂಚಿಸಿದರು. ಅಧಿವೇಶನದಲ್ಲಿಯೂ ಎಲ್ಲರೂ ಉಪಸ್ಥಿತರಿರಬೇಕು. ಅನಗತ್ಯವಾಗಿ ಗೈರು ಹಾಜರಿ ಆಗಬಾರದು ಎಂದು ನಡ್ಡಾ ಇದೇ ವೇಳೆ ತಾಕೀತು ಮಾಡಿದರು.
ಚುನಾವಣೆಗೂ ಮೊದಲು ಬೆಂಗಳೂರು ಹೊಟೆಲ್ಗೆ ಬಿಜೆಪಿ ಶಾಸಕರು
ಬೆಂಗಳೂರು: ಹೈಕಮಾಂಡ್ ಸೂಚನೆಯ ಮೇರೆಗೆ ಬಿಜೆಪಿಯ ಎಲ್ಲ ಶಾಸಕರು ನಿನ್ನೆಯೇ ಖಾಸಗಿ ಹೊಟೆಲ್ ಒಂದಕ್ಕೆ ಬಂದಿದ್ದರು. ಬಿಜೆಪಿಯ ಮುಖ್ಯ ಸಚೇತಕ ಎಂ.ಸತೀಶ್ ರೆಡ್ಡಿ ಎಲ್ಲ ಶಾಸಕರಿಗೂ ಸೋಮವಾರದವರೆಗೆ ಹೊಟೆಲ್ನಲ್ಲಿ ಇರುವಂತೆ ಸೂಚಿಸಿದ್ದರು. ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆಯ ಅಭ್ಯಾಸಕ್ಕಾಗಿ ಅಣಕು ಮತದಾನದ ತರಬೇತಿಯನ್ನೂ ನೀಡಲಾಯಿತು.
ಬೆಂಗಳೂರಿನಲ್ಲಿ ಒಗ್ಗಟ್ಟು ಕಾಯ್ದುಕೊಂಡ ಬಿಜೆಪಿ
ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದು, ಒಗ್ಗಟ್ಟು ಕಾಯ್ದುಕೊಂಡಿದ್ದಾರೆ. ಆರ್.ಟಿ.ನಗರ ನಿವಾಸದಿಂದ ಇಂದು ಮುಂಜಾನೆ ಶಾಸಕರ ಭೇಟಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕರೊಂದಿಗೆ ಮತದಾನ ಮಾಡಲು ವಿಧಾನಸೌಧಕ್ಕೆ ತೆರಳಲಿದ್ದಾರೆ.
ದ್ರೌಪದಿ ಮುರ್ಮು ಆಯ್ಕೆಯಾದರೆ ಹೊಸ ದಾಖಲೆ
ಒಂದು ವೇಳೆ ಒಡಿಶಾದ ಮಾಜಿ ಸಚಿವೆ ದ್ರೌಪದಿ ಮುರ್ಮು ಆಯ್ಕೆಯಾದರೆ ಅವರು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.
ರಾಜ್ಯದಿಂದ ರಾಜ್ಯಕ್ಕೆ ಮತಗಳ ಮೌಲ್ಯ ಬದಲಾವಣೆ
ರಾಜ್ಯಗಳಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ. ಉತ್ತರ ಪ್ರದೇಶದಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು 208 ರಷ್ಟಿದೆ. ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ 176, ಮಹಾರಾಷ್ಟ್ರದಲ್ಲಿ ಇದು 175 ಆಗಿದೆ. ಸಿಕ್ಕಿಂನಲ್ಲಿ ಪ್ರತಿ ಶಾಸಕರ ಮತದ ಮೌಲ್ಯ ಏಳು ಆಗಿದ್ದರೆ, ನಾಗಾಲ್ಯಾಂಡ್‌ನಲ್ಲಿ 9 ಮತ್ತು ಮಿಜೋರಾಂನಲ್ಲಿ 8 ಆಗಿದೆ.
ಜಮ್ಮು ಕಾಶ್ಮೀರದ ಪ್ರಭಾವ
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕಾಂಗ ಸಭೆ ಇಲ್ಲದ ಕಾರಣ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರ ಮತದ ಮೌಲ್ಯ 708 ರಿಂದ 700 ಕ್ಕೆ ಇಳಿದಿದೆ.
ಅನುಪಾತ ಪ್ರಾತಿನಿಧ್ಯ: ಯಾರಿಗೆಲ್ಲಾ ಮತದಾನದ ಹಕ್ಕು
ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಎಲೆಕ್ಟೋರಲ್ ಕಾಲೇಜ್ ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರನ್ನು ಒಳಗೊಂಡಿರುತ್ತದೆ. ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.
ದ್ರೌಪದಿ ಮುರ್ಮು ಮುನ್ನಡೆ ನಿರೀಕ್ಷಿತ
ಬಿಜೆಡಿ, ವೈಎಸ್ಆರ್-ಸಿಪಿ, ಬಿಎಸ್ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ ಮತ್ತು ಶಿವಸೇನಾದಂಥಾ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಪಡೆದ ನಂತರ, ದ್ರೌಪದಿ ಮುರ್ಮು ಅವರ ಮತಗಳ ಪ್ರಮಾಣವು ಈಗಾಗಲೇ ಶೇ 60 ದಾಟಿದೆ.
Published On - Jul 18,2022 8:41 AM