ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಷ ಶನಿವಾರ ದೂರವಾಣಿ ಮಾತುಕತೆ ಮೂಲಕ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ. ಕೋವಿಡ್-19ರ ಸವಾಲು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ಹಿರಿಯ ಅಧಿಕಾರಿಗಳ ನಡುವೆ ನಿಯಮಿತ ಸಂಪರ್ಕ ಸಾಧ್ಯವಾಗುವಂತೆ ಮಾಡುವ ವ್ಯವಸ್ಥೆ ರೂಪಿಸಲು ಈ ವೇಳೆ ಇಬ್ಬರೂ ನಾಯಕರು ಸಮ್ಮತಿಸಿದರು ಎಂದು ಪ್ರಧಾನಿ ಕಾರ್ಯಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಎರಡೂ ದೇಶಗಳ ನಡುವಣ ಸಂಬಂಧಗಳಲ್ಲಿ ಈಚೆಗೆ ನಡೆದ ಪ್ರಮುಖ ಬೆಳವಣಿಗೆಳು ಮತ್ತು ಹಾಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆಯೂ ಎರಡೂ ದೇಶಗಳ ಮುಖ್ಯಸ್ಥರು ಮಾತನಾಡಿದರು ಎಂದು ಹೇಳಿಕೆ ತಿಳಿಸಿದೆ. ‘ಶ್ರೀಲಂಕಾದ ಅಧ್ಯಕ್ಷ ಗೊಟಬಾಯ ಅವರೊಂದಿಗೆ ದೂರವಾಣಿ ಸಂಭಾಷಣೆ ಮೂಲಕ ಕೋವಿಡ್-19ರ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರ ಬಗ್ಗೆ ಚರ್ಚಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ಎಂಬ ಭಾರತದ ನೀತಿಗೆ ಶ್ರೀಲಂಕಾ ಎಷ್ಟು ಮುಖ್ಯ ಎಂಬ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭ ಶ್ರೀಲಂಕಾ ಅಧ್ಯಕ್ಷರಿಗೆ ವಿವರಿಸಿದರು ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಚೀನಾ ಮತ್ತು ಭಾರತದ ಸಂಬಂಧಗಳು ಬದಲಾದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಉಳಿಸಿಕೊಳ್ಳಲು ಎರಡೂ ದೇಶಗಳು ಶ್ರೀಲಂಕಾವನ್ನು ಓಲೈಸುತ್ತಿವೆ. ಶ್ರೀಲಂಕಾಕ್ಕೆ ಚೀನಾ ದೊಡ್ಡಮೊತ್ತದ ಸಾಲ ನೀಡಿ ಒಂದು ಬಂದರನ್ನು ಗುತ್ತಿಗೆಗೆ ಪಡೆದುಕೊಂಡಿದೆ. ಭಾರತವೂ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಪಡಿಸುತ್ತಿದೆ.
ಚೀನಾದ ಪಾರಮ್ಯಕ್ಕೆ ಕಡಿವಾಣ ಹಾಕಲೆಂದು ಭಾರತ, ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೆರಿಕ ದೇಶಗಳು ಜತೆಗೂಡಿ ರಚಿಸಿಕೊಂಡಿರುವ ಕ್ವಾಡ್ ಒಕ್ಕೂಟದ ಹಲವು ಚಟುವಟಿಕೆಗಳಿಗೂ ಹಿಂದೂ ಮಹಾಸಾಗರವು ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷ ನಡುವೆ ನಡೆದ ಸಂಭಾಷಣೆ ಮಹತ್ವ ಪಡೆದುಕೊಂಡಿದೆ.
Had a telephone conversation with President @GotabayaR. We discussed issues relevant to our bilateral and multilateral cooperation, including in the context of COVID-19.
— Narendra Modi (@narendramodi) March 13, 2021
Published On - 2:54 pm, Sun, 14 March 21