West Bengal Assembly Elections 2021: ಧೈರ್ಯದಿಂದಲೇ ಹೋರಾಟ ಮುಂದುವರಿಸುವೆ, ನಾವು ಹೇಡಿಗಳ ಮುಂದೆ ತಲೆಬಾಗಲ್ಲ: ಮಮತಾ ಬ್ಯಾನರ್ಜಿ

Mamata Banerjee: ಬಂಗಾಳ ವಿರೋಧಿ ಶಕ್ತಿಗಳೆದುರು ಹೋರಾಡಿ ಹುತಾತ್ಮರಾದ ಕುಟುಂಬಗಳ ಸದಸ್ಯರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಲಭಿಸಿದ ದೊಡ್ಡ ಗೌರವ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

West Bengal Assembly Elections 2021: ಧೈರ್ಯದಿಂದಲೇ ಹೋರಾಟ ಮುಂದುವರಿಸುವೆ, ನಾವು ಹೇಡಿಗಳ ಮುಂದೆ ತಲೆಬಾಗಲ್ಲ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 14, 2021 | 2:07 PM

ನಂದಿಗ್ರಾಮ: 2007ರಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಚಳವಳಿಗಾರರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವುದಕ್ಕಾಗಿ ನಾನು ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ನಂದಿಗ್ರಾಮದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಗೌರವ ಸಲ್ಲಿಸಿ ನಾನು ಈ ಐತಿಹಾಸಿಕ ಕ್ಷೇತ್ರದಿಂದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಬಂಗಾಳ ವಿರೋಧಿ ಶಕ್ತಿಗಳೆದುರು ಹೋರಾಡಿ ಹುತಾತ್ಮರಾದ ಕುಟುಂಬಗಳ ಸದಸ್ಯರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಲಭಿಸಿದ ದೊಡ್ಡ ಗೌರವ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

2007ರಲ್ಲಿ ಇದೇ ದಿನ ನಂದಿಗ್ರಾಮದ ಮುಗ್ಧ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಹಲವರ ಮೃತದೇಹಗಳು ಸಿಗಲೇ ಇಲ್ಲ. ರಾಜ್ಯದ ಇತಿಹಾಸದಲ್ಲಿ ಇದು ಕರಾಳ ಅಧ್ಯಾಯ. ಪ್ರಾಣ ಕಳೆದುಕೊಂವರಿಗೆ ಶ್ರದ್ಧಾಂಜಲಿ. ನಂದಿಗ್ರಾಮದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 14ನ್ನು ಕೃಷಕ್ ದಿವಸ್ (ಕೃಷಿಕರ ದಿನ) ಆಗಿ ಆಚರಿಸುತ್ತಿದ್ದು, ಕೃಷಿಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರೈತರು ನಮ್ಮ ಹೆಮ್ಮೆ. ನಮ್ಮ ಸರ್ಕಾರ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ಮಾಡುತ್ತಿದೆ ಎಂದಿದ್ದಾರೆ ಮಮತಾ.

ಧೈರ್ಯದಿಂದಲೇ ಹೋರಾಟ ಮುಂದುವರಿಸುತ್ತೇನೆ: ಮಮತಾ ಬ್ಯಾನರ್ಜಿ

ನನಗೆ ಇನ್ನೂ ನೋವಾಗುತ್ತಿದೆ, ನನ್ನ ಜನರ ನೋವು ಅದಕ್ಕಿಂತ ದೊಡ್ಡ ನೋವು ಎಂಬುದು ನನಗರ್ಥವಾಗುತ್ತಿದೆ. ನಮ್ಮ ಭೂಮಿಯನ್ನು ರಕ್ಷಿಸಲು ನಾವು ತುಂಬಾ ಕಷ್ಟಪಟ್ಟಿದ್ದೇವೆ. ಇನ್ನೂ ಕಷ್ಟಪಡಲಿದ್ದೇವೆ. ಆದರೆ ನಾವು ಯಾವತ್ತೂ ಹೇಡಿಗಳ ಮುಂದೆ ತಲೆಬಾಗಲ್ಲ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಏನಿದು ನಂದಿಗ್ರಾಮ ಪ್ರಕರಣ? 2007ರಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ ವಿರೋಧಿಸಿ ನಡೆದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು 14 ಮಂದಿ ಪೊಲೀಸರ ಗುಂಡಿಗೆ ಪ್ರಾಣ ಕಳೆದುಕೊಂಡಿದ್ದರು. ಗ್ರಾಮೀಣ ಮತ್ತು ನಗರ ಪ್ರದೇಶವನ್ನೊಳಗೊಂಡ ನಂದಿಗ್ರಾಮದಲ್ಲಿ 2007ರಲ್ಲಿ ಹೋರಾಟ ಆರಂಭವಾಗಿದ್ದು, ತೊಮರ್ ನಾಮ್, ಅಮರ್ ನಾಮ್, ನಂದಿ ಗ್ರಾಮ್, ನಂದಿ ಗ್ರಾಮ್ (ನಿನ್ನ ಹೆಸರು, ನನ್ನ ಹೆಸರು, ನಂದಿಗ್ರಾಮ್ ನಂದಿಗ್ರಾಮ್) ಎಂಬ ಘೋಷಣೆ ಇಲ್ಲಿ ಮೊಳಗಿತ್ತು.  ವಿಶೇಷ ಆರ್ಥಿಕ ವಲಯ (SEZ) ಸ್ಥಾಪಿಸುವ ಎಡರಂಗ ಸರ್ಕಾರದ ವಿರುದ್ಧ ಮಮತಾ ದನಿಯೆತ್ತಿದ್ದರು. ವಿಶೇಷ ಆರ್ಥಿಕ ವಲಯದಲ್ಲಿ ಇಂಡೋನೇಷ್ಯಾದ ಸಲಿಂ ಸಮೂಹ ಸ್ಥಾಪಿಸಲು ಉದ್ದೇಶಿಸಿದ  ಕೆಮಿಕಲ್ ಹಬ್ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಮತಾ ನಡೆಸಿದ್ದರು. ಆಗ ಈ ಚಳವಳಿಗೆ ಮಮತಾ ಜತೆ ಸಾಥ್ ನೀಡಿದ್ದು ಟಿಎಂಸಿಯ ಹಿರಿಯ ನಾಯಕ ಸುವೇಂದು ಅಧಿಕಾರಿ. ಸುವೇಂದು ಅಧಿಕಾರಿ ಈಗ ಬಿಜೆಪಿ ಸೇರಿ, ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ನಂದಿಗ್ರಾಮದಲ್ಲಿನ ರೈತರ 10,000 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ಬಂದಾಗ ಭೂಮಿ ರಕ್ಷಾ ಕಮಿಟಿಯ ನೇತೃತ್ವದಲ್ಲಿ ರೈತರು ಒಗ್ಗೂಡಿದರು. ಈ ಸಮಿತಿಗೆ ಮಾವೊವಾದಿಗಳ ಬೆಂಬಲವಿತ್ತು. ರೈತರ ಹೋರಾಟದ ವೇಳೆ ಪೊಲೀಸರ ನಡುವೆ ಸಂಘರ್ಷವೇರ್ಪಟ್ಟು ನಂದಿಗ್ರಾಮಕ್ಕೆ ನುಗ್ಗಿದ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು, ಇದರಲ್ಲಿ 14 ಮಂದಿ ಸಾವಿಗೀಡಾಗಿದ್ದು 70 ಮಂದಿಗೆ ಗಾಯವಾಗಿತ್ತು.

2007 ಜನವರಿಯಿಂದ ಮಾರ್ಚ್ ತಿಂಗಳವರೆಗೆ ಭೂಮಿ ಉಚ್ಚೇದ್ ಪ್ರತಿರೋಧ್ ಸಮಿತಿ (ಬಿಯುಪಿಸಿ) ನಂದಿಗ್ರಾಮಕ್ಕಿರುವ ರಸ್ತೆಗೆ ತಡೆಯೊಡ್ಡಿತು. ಈ ವೇಳೆ ದಂಗೆ, ಲೂಟಿ ಆರೋಪದಲ್ಲಿ ನಂದಿಗ್ರಾಮ ಮತ್ತ ಖೆಜುರಿ ಪೊಲೀಸ್ ಠಾಣೆಯಲ್ಲಿ ಹಲವಾರು ಮಂದಿ ಮೇಲೆ ಎಫ್​ಐಆರ್ ದಾಖಲಾಗಿತ್ತು.

ಗಾಲಿಕುರ್ಚಿಯಲ್ಲೇ ಪ್ರಚಾರ

ಮಾರ್ಚ್ 9ರಂದು  ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ  ಗಾಲಿಕುರ್ಚಿಯಲ್ಲಿ ಕುಳಿತು  ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಾರ್ಚ್ 9ರಂದು ನಡೆದ ಘಟನೆಯಲ್ಲಿ ಅವರಿಗೆ ಗಾಯವಾದ ನಂತರ ಇದೇ ಮೊದಲ ಬಾರಿಗೆ ದೀದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಾಂಧಿ ಮೂರ್ತಿ ಪ್ರದೇಶದಿಂದ ಹಜ್ರಾಕ್ಕೆ ಸಾರ್ವಜನಿಕ ಪ್ರಚಾರ ಮೆರವಣಿಗೆಯಲ್ಲಿ ಅವರು ತೆರಳಲಿದ್ದಾರೆ ಎಂದು ಟಿಎಂಸಿ ಪಕ್ಷದ ಮೂಲಗಳು ತಿಳಿಸಿವೆ. ಮೆರವಣಿಗೆಯ ನಂತರ ಹಜ್ರಾದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ  ಮಾಡಲಿದ್ದಾರೆ.

ನಂದಿಗ್ರಾಮ್  ದಿವಸ್ ಆಚರಿಸುವ ಹಕ್ಕು ಇಲ್ಲ:  ಸುವೇಂದು ಅಧಿಕಾರಿ

ಪೊಲೀಸರು ಗುಂಡಿನ ದಾಳಿ ನಡೆಸಲು ಕಾರಣರಾದ ಅಧಿಕಾರಿಗಳಿಗೆ ಬಡ್ತಿ ನೀಡಿದವರಿಗೆ ನಂದಿಗ್ರಾಮ್ ದಿವಸ್ ಆಚರಿಸುವ ಹಕ್ಕಿಲ್ಲ. ಇಲ್ಲಿಯವರೆಗೆ ನಂದಿಗ್ರಾಮವನ್ನು ಮರೆತಿದ್ದವರು ಮತಯಾಚನೆಗಾಗಿ ಈಗ ಬರುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: West Bengal Elections 2021: ಗಾಲಿಕುರ್ಚಿಯ ಮೇಲೆ ಕುಳಿತೇ ಪ್ರಚಾರ ಮಾಡಲು ನಿರ್ಧರಿಸಿದ ಮಮತಾ ಬ್ಯಾನರ್ಜಿ

West Bengal Elections 2021| ಬಿಜೆಪಿ ಜನರ ಧ್ವನಿ ಹತ್ತಿಕ್ಕುತ್ತಿದೆ; ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆರೋಪ

Published On - 2:04 pm, Sun, 14 March 21