ಗೋವಾದ ಎಲ್ಲ ಅರ್ಹ ವ್ಯಕ್ತಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ; ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಪ್ರಧಾನಿ ಮೆಚ್ಚುಗೆ

| Updated By: shivaprasad.hs

Updated on: Sep 18, 2021 | 12:27 PM

ಪ್ರಧಾನಿ ಗೋವಾದ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಅವರು ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ್ಧಾರೆ. ಜೊತೆಗೆ ಪ್ರವಾಸೋದ್ಯಮದ ಕುರಿತೂ ಮಾತನಾಡಿದ್ದಾರೆ.

ಗೋವಾದ ಎಲ್ಲ ಅರ್ಹ ವ್ಯಕ್ತಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ; ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಪ್ರಧಾನಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ಇಂದು ಗೋವಾದ ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ಲಸಿಕೆ ಪಡೆದ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ್ದಾರೆ. ‘ಗೋವಾದ ಪ್ರತಿ ಅರ್ಹ ವ್ಯಕ್ತಿಗೂ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಗೆಲುವಾಗಿದೆ. ಇತ್ತೀಚೆಗೆ ಗೋವಾ ವಿಪರೀತ ಮಳೆ, ಪ್ರವಾಹ, ಸೈಕ್ಲೋನ್​ಗಳಿಂದ ನಲುಗಿದೆ. ಅದಾಗ್ಯೂ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ಕೊರೊನಾ ಲಸಿಕೆ ನೀಡುವಿಕೆ ತ್ವರಿತವಾಗಿ ಸಾಗಿದೆ. ಇದಕ್ಕಾಗಿ ಗೋವಾದ ಜನರನ್ನು, ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ’ ಎಂದು ನುಡಿದಿದ್ದಾರೆ.

ಸಂವಾದದ ವೇಳೆ ದೇಶದಲ್ಲಿ ನಿನ್ನೆ ನಡೆದ ಬೃಹತ್ ಲಸಿಕಾ ಮೇಳದ ಕುರಿತು ಪ್ರಧಾನಿ ಮಾತನಾಡಿದ್ದಾರೆ. ‘‘ದೇಶದಲ್ಲಿ ನಿನ್ನೆ 2.5 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಇದಕ್ಕೆ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಪ್ರತಿಯೊಬ್ಬರ ಪರಿಶ್ರಮದಿಂದ ಇದು ಸಾಧ್ಯವಾಯಿತು ಎಂದಿದ್ದಾರೆ. ನಿನ್ನೆ ಜನ್ಮದಿನಾಚರಣೆ ಕುರಿತು ಮಾತನಾಡಿದ ಮೋದಿ, ‘‘ಜನ್ಮದಿನಗಳು ಬರುತ್ತವೆ, ಹೋಗುತ್ತವೆ. ಆದರೆ ನಾನು ಇದರಿಂದ ದೂರ ಉಳಿದಿದ್ದೇನೆ. ಅದಾಗ್ಯೂ ನನ್ನ ವಯಸ್ಸಿಗೆ ನಿನ್ನೆಯ ದಿನ ಬಹಳ ಭಾವಪೂರ್ಣವಾಗಿತ್ತು’’ ಎಂದು ನುಡಿದಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಕ್ರಮ ಘೋಷಿಸಿದ ಪ್ರಧಾನಿ:
ಸಂವಾದದ ವೇಳೆ ಮೋದಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಸ್ಥಳಗಳಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯ ಆಧಾರದಲ್ಲಿ ನೀಡಲು ಸರ್ಕಾರ ಬಹಳಷ್ಟು ಶ್ರಮಿಸಿದೆ ಎಂದಿದ್ದಾರೆ. ಮೊದಲಿಗೆ ಇದೂ ರಾಜಕೀಯ ಎಂಬ ಟೀಕೆ ಬರಬಹುದು ಎಂದುಕೊಂಡಿದ್ದೆವು. ಆದರೆ ಪ್ರವಾಸೋದ್ಯಮದ ಸ್ಥಳಗಳು ಆದಷ್ಟು ತ್ವರಿತವಾಗಿ ಮುಕ್ತವಾಗುವುದು ಬಹಳ ಮುಖ್ಯವಾಗಿತ್ತು ಎಂದು ಅವರು ವಿವರಿಸಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ವಿದೇಶಿಗರನ್ನು ಸೆಳೆಯಲು 5 ಲಕ್ಷ ಮುಕ್ತ ವೀಸಾ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂವಾದದ ವೇಳೆ ಪ್ರತಿಪಕ್ಷಗಳನ್ನು ಕುಟುಕಿದ ಪ್ರಧಾನಿ:
ನಿನ್ನೆ ನಡೆದ ಲಸಿಕಾ ಉತ್ಸವದ ಕುರಿತು ಮಾತನಾಡುತ್ತಾ ಪ್ರಧಾನಿ ಪ್ರತಿಪಕ್ಷಗಳ ವಿರುದ್ಧ ಟೀಕಿಸಿದ್ದಾರೆ. ಲಸಿಕೆ ಪಡೆದ ನಂತರ ಅಡ್ಡಪರಿಣಾಮ ಸಹಜ ಎಂದು ಅವರು ಕುಟುಕಿದ್ದಾರೆ. ‘‘ರಾಜಕೀಯ ಪಕ್ಷವೊಂದಕ್ಕೆ 12 ಗಂಟೆ ಬಳಿಕ ಜ್ವರ ಬಂದಿದೆ. ಅದು ಇಡೀ ರಾತ್ರಿ ಜ್ವರದಿಂದ ಬಳಲಿದೆ. ಇದು ಹೇಗೆ ಸಾಧ್ಯ?’’ ಎಂದು ಪ್ರಧಾನಿ ವೈದ್ಯರನ್ನು ಪ್ರಶ್ನಿಸಿದ್ಧಾರೆ. ವೈದ್ಯರ ಜತೆ ಸಂವಾದದ ವೇಳೆ ರಾಜಕೀಯ ಎಳೆದುತಂದಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ಮೋದಿ ಸಂವಾದ ನಡೆಸಿರುವ ಸಂಪೂರ್ಣ ವಿಡಿಯೊ ಇಲ್ಲಿದೆ:

ಗೋವಾದ ಆರೋಗ್ಯ ಕಾರ್ಯಕರ್ತರೊಂದಿಗೆ ಪ್ರಧಾನಿಗಳ ಸಂವಾದವು 10.30ಕ್ಕೆ ಪ್ರಾರಂಭವಾಗಿತ್ತು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ಭಾಗವಹಿಸಿದ್ದರು.

ಇದನ್ನೂ ಓದಿ:

‘ಅಫ್ಘಾನ್​ಗೆ ನೆರವು ನೀಡುವುದನ್ನು ನಿಲ್ಲಿಸುವ ಮುನ್ನ ಯೋಚಿಸಿ..‘ -ಪಾಕ್​ ಪ್ರಧಾನಿ ಇಮ್ರಾನ್ ಖಾನ್​

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು..

(Prime Minister interacts with Goa Health Care Workers and appreciate their effort on vaccination drive)