ಅಂದು ಆದ ಗಾಯವನ್ನೆಂದೂ ಭಾರತ ಮರೆಯದು: ಸಂವಿಧಾನ ದಿನದಂದು ಮುಂಬೈ ದಾಳಿ ನೆನಪಿಸಿಕೊಂಡ ಪ್ರಧಾನಿ
2008ರ ಈ ದಿನ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸರು, ಯೋಧರು, ದೇಶ-ವಿದೇಶದ ನಾಗರಿಕರು ಮೃತಪಟ್ಟಿದ್ದರು. ಅವರಿಗೆ ನಾನಿಂದು ಗೌರವ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.
ದೆಹಲಿ: 2008ರ ಈ ದಿನ ಮುಂಬೈ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂವಿಧಾನ ದಿನದ ನಿಮಿತ್ತ ಗುಜರಾತ್ನ ಕೇವಾಡಿಯಾದಲ್ಲಿ ಆಯೋಜಿಸಿರುವ ಎರಡು ದಿನಗಳ ಸ್ಟೀಕರ್ಗಳ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 2008ರ ಈ ದಿನ ಮುಂಬೈ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸರು, ಯೋಧರು, ದೇಶ-ವಿದೇಶದ ನಾಗರಿಕರು ಮೃತರಾಗಿದ್ದಾರೆ. ಅವರಿಗೆ ನಾನಿಂದು ಗೌರವ ಸಲ್ಲಿಸುತ್ತೇನೆ ಎಂದರು.
ಆ ಗಾಯವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ನಾವಿಂದು ಹೊಸ ನೀತಿ-ಯೋಜನೆಗಳೊಂದಿಗೆ ಉಗ್ರರ ವಿರುದ್ಧ ಹೋರಾಡುತ್ತಿದ್ದೇವೆ. ಉಗ್ರರ ವಿರುದ್ಧ ಹೋರಾಡುತ್ತಿರುವ ಭದ್ರತಾ ಪಡೆಗಳಿಗೆ ನಾನು ತಲೆಬಾಗಿ ನಮಿಸುತ್ತೇನೆ ಎಂದು ಹೇಳಿದರು.
ನಮ್ಮ ಸಂವಿಧಾನವು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಅದರಲ್ಲೂ ಕರ್ತವ್ಯಗಳಿಗೆ ಇರುವ ಪ್ರಾಮುಖ್ಯತೆ ವಿಶೇಷವಾದದ್ದು. ಗಾಂಧೀಜಿಯವರು ಕರ್ತವ್ಯಗಳಿಗೆ ಜಾಸ್ತಿ ಒತ್ತು ಕಕೊಟ್ಟಿದ್ದರು. ಹಕ್ಕು ಮತ್ತು ಕರ್ತವ್ಯಗಳು ಒಂದಕ್ಕೊಂದು ಹೇಗೆ ತಳುಕು ಹಾಕಿಕೊಂಡಿವೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದರು. ಯಾರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾರ, .ಅವರ ಹಕ್ಕುಗಳು ತನ್ನಿಂದ ತಾನೇ ಸಂರಕ್ಷಿಸಲ್ಪಡುತ್ತವೆ ಎಂಬುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು ಎಂದು ಮೋದಿ ತಿಳಿಸಿದರು.
ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ಸಂವಿಧಾನದ ಪ್ರಮುಖ ಮೂರು ಭಾಗಗಳಾದ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಪಾತ್ರಗಳನ್ನು ಸಂವಿಧಾನದಲ್ಲಿಯೇ ಸವಿಸ್ತಾರವಾಗಿ ವಿವರಿಸಲಾಗಿದೆ. ಅಧಿಕಾರ ಪ್ರತ್ಯೇಕತೆಯ ಘನತೆಯನ್ನು ಕುಗ್ಗಿಸುವ ಪ್ರಯತ್ನಗಳು 70ರ ದಶಕದಲ್ಲಿ ನಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ ಸಂವಿಧಾನದಿಂದ ಈ ದೇಶ ಎಲ್ಲದಕ್ಕೂ ಉತ್ತರ ಕಂಡುಕೊಂಡಿದೆ ಎಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಂಡರು. ಹಾಗೇ ದೇಶದ ಪ್ರತಿ ವ್ಯಕ್ತಿಯೂ ಸಂವಿಧಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ನಾವು, ಭಾರತದ ಜನರು ಈ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ. ಆದ್ದರಿಂದ, ಇದರ ಅಡಿಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಕಾನೂನುಗಳು ಪ್ರತಿಯೊಬ್ಬ ನಾಗರಿಕನಿಗೂ ನೇರ ಸಂಪರ್ಕ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಬಲಪಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
Published On - 3:23 pm, Thu, 26 November 20