ಇಂದು ಈ ಮಹಾತ್ಮನನ್ನು ಸ್ಮರಿಸುವ ದಿನ! ಯಾರದು, ಏಕೆ, ಏನು ವಿಷಯ?
ಮುಂಬೈನಲ್ಲಿ ಉಗ್ರರನ್ನು ಅಡ್ಡಗಟ್ಟಿದ ಸಂದರ್ಭದಲ್ಲಿ ತುಕಾರಾಂ ಓಂಬ್ಲೆ ಅವರು ಮುನ್ನುಗ್ಗಿ ಉಗ್ರ ಕಸಬ್ ಬಳಿಯಿದ್ದ ರೈಫಲ್ ಹಿಡಿದು ಎಳೆದಿದ್ದಾರೆ. ಆದರೆ, ಕಸಬ್ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಇವರ ದೇಹದ ಒಳಹೊಕ್ಕು ಹುತಾತ್ಮರಾದರು. ಈ ವೇಳೆ ಇನ್ನೊಬ್ಬ ಉಗ್ರ ಪೊಲೀಸರ ಗುಂಡಿಗೆ ಬಲಿಯಾದರೆ ಕಸಬ್ ಜೀವಂತವಾಗಿ ಸೆರೆಯಾಗುತ್ತಾನೆ!
ಮುಂಬೈ: 26/11.. ಸರಿಯಾಗಿ 12 ವರ್ಷಗಳ ಹಿಂದೆ ಈ ದಿನ ಭಾರತೀಯರು ಬೆಚ್ಚಿಬಿದ್ದಿದ್ದರು. ಅಂದು ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರ ಕಣ್ಣು ಬಿದ್ದಿತ್ತು. ಸತತ ನಾಲ್ಕು ದಿನಗಳ ಕಾಲ ಇಡೀ ಮುಂಬೈ ಜನರು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದ ಉಗ್ರರು ಸುಮಾರು 166 ಅಮಾಯಕ ಜೀವಗಳನ್ನು ಬಲಿಪಡೆದಿದ್ದರು.
ಅತ್ತ ಉಗ್ರರ ಅಟ್ಟಹಾಸವನ್ನು ಮಟ್ಟಹಾಕಲು ಮುಂಬೈ ಪೊಲೀಸರು ದಿಟ್ಟ ಹೆಜ್ಜೆ ಇಡುತ್ತಿದ್ದರೆ, ಇತ್ತ ಭಾರತದ ಮೇಲಿನ ದಾಳಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿತ್ತು. ಒಂದೆಡೆ ಜನರ ಜೀವವನ್ನು ಉಳಿಸುವ ಹೊಣೆ, ಇನ್ನೊಂದೆಡೆ ಭಾರತದ ಮಾನವನ್ನು ಕಾಪಾಡಬೇಕಾದ ಬಹುದೊಡ್ಡ ಜವಾಬ್ದಾರಿ ಪೊಲೀಸರ ಮೇಲಿತ್ತು.
ಮುಂಬೈ ನಗರದ ಐಶಾರಾಮಿ ಕಟ್ಟಡಗಳು, ಜನನಿಬಿಡ ಪ್ರದೇಶಗಳು, ಆಸ್ಪತ್ರೆಗಳನ್ನು ಸುತ್ತುವರೆಯುತ್ತಿದ್ದ ಉಗ್ರರು ಗುಂಡಿನ ಸುರಿಮಳೆ ಸುರಿಸಿ ರಕ್ತದ ಹೊಳೆ ಹರಿಸುತ್ತಿದ್ದರು. ಅವರನ್ನು ಹತ್ತಿಕ್ಕಲು ಹೋದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸೇರಿದಂತೆ ಆರು ಜನ ಪೊಲೀಸರನ್ನು ನಿರ್ದಯವಾಗಿ ಬಲಿ ಪಡೆದು ಅವರ ಜೀಪನ್ನೇ ಹೈಜಾಕ್ ಮಾಡಿದ್ದರು. ಆಗ ತಕ್ಷಣ ಎಚ್ಚೆತ್ತ ಪೊಲೀಸರು ನಾಕಾಬಂಧಿ ಮೂಲಕ ಹೈಜಾಕ್ ಮಾಡಿದ ಜೀಪನ್ನು ಗಿರ್ಗಾಂವ್ ಚೌಪಟ್ಟಿ ಬಳಿ ಅಡ್ಡ ಹಾಕಿದ್ದಾರೆ.
ಹೀಗೆ ಉಗ್ರರನ್ನು ಅಡ್ಡಗಟ್ಟಿದ ಸಂದರ್ಭದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ತುಕಾರಾಂ ಓಂಬ್ಲೆ ಮುನ್ನುಗ್ಗಿ ಉಗ್ರ ಕಸಬ್ ಬಳಿಯಿದ್ದ ರೈಫಲ್ ಹಿಡಿದು ಎಳೆದಿದ್ದಾರೆ. ಆದರೆ, ಕಸಬ್ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಇವರ ದೇಹದ ಒಳಹೊಕ್ಕು ಹುತಾತ್ಮರಾಗಿದ್ದಾರೆ. ಈ ವೇಳೆ ಇನ್ನೊಬ್ಬ ಉಗ್ರ ಪೊಲೀಸರ ಗುಂಡಿಗೆ ಬಲಿಯಾದರೆ ಕಸಬ್ ಜೀವಂತವಾಗಿ ಸೆರೆಯಾಗುತ್ತಾನೆ.
2008 Mumbai Attacks ದಾಳಿಯ ಮುಖ್ಯ ಸಾಕ್ಷಿ ಕಸಬ್ನನ್ನು ಬಂಧಿಸುವಲ್ಲಿ ತುಕಾರಾಂ ಓಂಬ್ಲೆ ಪಾತ್ರ ಬಹಳ ಮಹತ್ವದ್ದು. ತಮ್ಮ ಜೀವವನ್ನೇ ಬಲಿ ಕೊಟ್ಟು ಮುಂಬೈ ದಾಳಿಯ ಹಿಂದಿನ ಸಂಚನ್ನು ಹೊರಗೆಳೆಯಲು ಕಾರಣರಾದ ಓಂಬ್ಲೆಯವರ ಶೌರ್ಯವನ್ನು ಪರಿಗಣಿಸಿ ಭಾರತ ಸರ್ಕಾರ ಅಶೋಕ ಚಕ್ರವನ್ನು ನೀಡಿ ಗೌರವಿಸಿದೆ. ಜೊತೆಗೆ, ಓಂಬ್ಲೆಯವರ ಸ್ಮರಣಾರ್ಥ ಚೌಪಟ್ಟಿ ಪ್ರದೇಶದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಅಂದು ಪರಾಕ್ರಮ ಮೆರೆದು ಹುತಾತ್ಮರಾದ ಓಂಬ್ಲೆ ಭಾರತದ ಮಾನ ಕಾಪಾಡುವಲ್ಲಿಯೂ ಪ್ರಮುಖ ಪಾತ್ರರಾದರು ಎಂಬುದನ್ನು ಅಲ್ಲಗಳೆಯಲಾಗದು. 12 ವರ್ಷಗಳ ಹಿಂದಿನ ಈ ಘಟನೆಯನ್ನು ಸ್ಮರಿಸಿ ಇಂದು ಮಾಜಿ ಕ್ರಿಕೆಟ್ಟಿಗ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ತುಕಾರಾಂ ಓಂಬ್ಲೆಯವರ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ.
Published On - 12:36 pm, Thu, 26 November 20