ಮಧ್ಯರಾತ್ರಿ ಬನಾರಸ್​ ರೈಲ್ವೆ ಸ್ಟೇಶನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ; ಇಂದಿನ ಕಾರ್ಯಕ್ರಮಗಳೇನು?

| Updated By: Lakshmi Hegde

Updated on: Dec 14, 2021 | 8:27 AM

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 3.30ಕ್ಕೆ ಸದ್ಗುರು ಸದಾಫಲದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವರು. 

ಮಧ್ಯರಾತ್ರಿ ಬನಾರಸ್​ ರೈಲ್ವೆ ಸ್ಟೇಶನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ; ಇಂದಿನ ಕಾರ್ಯಕ್ರಮಗಳೇನು?
ಮಧ್ಯರಾತ್ರಿ ಬನಾರಸ್​ ರೈಲ್ವೆ ಸ್ಟೇಶನ್​ಗೆ ಭೇಟಿ ನೀಡಿದ ಪ್ರಧಾನಮಂತ್ರಿ ಮತ್ತು ಯುಪಿ ಮುಖ್ಯಮಂತ್ರಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆಯಿಂದ ಎರಡು ದಿನಗಳ ವಾರಾಣಸಿ ಪ್ರವಾಸದಲ್ಲಿದ್ದಾರೆ. ನಿನ್ನೆ ಮೋದಿ ವಾರಾಣಸಿಗೆ ತೆರಳಿ ಅಲ್ಲಿ 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್​ ಮೊದಲ ಹಂತವನ್ನು ಉದ್ಘಾಟಿಸಿ, ಬಳಿಕ ಭಾಷಣ ಮಾಡಿದ್ದಾರೆ.  ರಾತ್ರಿ ಕೂಡ ವಿಶ್ರಮಿಸದೆ, ಮಧ್ಯರಾತ್ರಿ ಬನಾರಸ್​ ರೈಲ್ವೆ ಸ್ಟೇಶನ್​ಗೆ ಭೇಟಿ ಕೊಟ್ಟು ಅಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಧ್ಯರಾತ್ರಿ 1.23ರ ಹೊತ್ತಿಗೆ ಟ್ವೀಟ್ ಮಾಡಿ, ರೈಲ್ವೆ ಸಂಪರ್ಕ ಹೆಚ್ಚಿಸಲು, ಸ್ವಚ್ಛ, ಆಧುನಿಕ ಮತ್ತು ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣಗಳನ್ನು ರೂಪಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಶ್ರಮ ವಹಿಸುತ್ತಿದೆ ಎಂದಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇದ್ದರು. 

ನಿನ್ನೆ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಬಳಿಕ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಲ್ಲಿ ಒಬ್ಬ ಔರಂಗಜೇಬ ಬಂದರೆ, ಶಿವಾಜಿಯೂ ಬರುತ್ತಾರೆ ಎಂದಿದ್ದರು. ನಂತರ ಕಾರಿಡಾರ್​ ನಿರ್ಮಾಣ ಮಾಡಿದ ಕಾರ್ಮಿಕರ ಮೇಲೆ ಹೂಮಳೆ ಸುರಿದಿದ್ದಾರೆ. ಅವರೊಂದಿಗೆ ಕುಳಿತು ಊಟವನ್ನೂ ಮಾಡಿದ್ದಾರೆ. ಅಷ್ಟಾದ ಬಳಿಕ ಬಿಜೆಪಿಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಜತೆ ವಾರಾಣಸಿಯಲ್ಲಿ ಸಭೆ ನಡೆಸಿದ್ದಾರೆ.  ಈ ಸಭೆ  ಸುಮಾರು 6 ತಾಸು ನಡೆದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತಿಳಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳೊಂದಿಗೆ ವಿಸ್ತಾರವಾದ ಸಭೆ ನಡೆಸಲಾಯಿತು ಎಂದು ಹೇಳಿದ್ದರು. ನಂತರ ಗಂಗಾ ಆರತಿಯನ್ನೂ ನೆರವೇರಿಸಿದ್ದಾರೆ.

ಇಂದು ಕಾರ್ಯಕ್ರಮಗಳೇನು?
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 3.30ಕ್ಕೆ ಸದ್ಗುರು ಸದಾಫಲದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವರು.  ಹಾಗೇ, ಅಸ್ಸಾಂ, ಅರುಣಾಚಲಪ್ರದೇಶ, ಗೋವಾ, ಗುಜರಾತ್​, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಾಪ್ರದೇಶ, ಮಣಿಪುರ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ ಮುಖ್ಯಮಂತ್ರಿಗಳು ಮತ್ತು ಬಿಹಾರ, ನಾಗಾಲ್ಯಾಂಡ್ ಉಪಮುಖ್ಯಮಂತ್ರಿಗಳ ಸಮಾವೇಶದಲ್ಲಿ  ನರೇಂದ್ರ ಮೋದಿ ಪಾಲ್ಗೊಳ್ಳುವರು. ಅಷ್ಟೇ ಅಲ್ಲ, ಬಿಜೆಪಿಯ ಮಂಡಲ, ಜಿಲ್ಲಾಧ್ಯಕ್ಷರ ಜತೆಯೂ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ: ವಾರಣಾಸಿಯಲ್ಲಿ ಇಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ

Published On - 8:14 am, Tue, 14 December 21