ಒಮಿಕ್ರಾನ್ ತಪಾಸಣೆಗೆ ನಿರ್ದಿಷ್ಟ ವಿಧಾನ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ; 90 ನಿಮಿಷದಲ್ಲಿ ವರದಿ ಪಡೆಯಬಹುದು !
ಈ ಹಿಂದೆ ಕೂಡ ಕೊರೊನಾದ ನೈಜ ಸಮಯದ ಪಿಸಿಆರ್ ಆಧಾರಿತ ರೋಗ ಪತ್ತೆಗಾಗಿ ಐಸಿಎಂಆರ್ನಿಂದ ಅನುಮೋದನೆ ಪಡೆದ ಮೊದಲ ಸಂಸ್ಥೆ ಐಐಟಿ. ಕೊವಿಡ್ 19 ಪತ್ತೆಗಾಗಿ ಇದು ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನ ಕಡಿಮೆ ವೆಚ್ಚದ್ದಾಗಿದೆ.
ವಿಶ್ವದೆಲ್ಲೆಡೆ ಒಮಿಕ್ರಾನ್ ರೂಪಾಂತರ ವೈರಸ್ ಆತಂಕ ಹೆಚ್ಚುತ್ತಿದೆ. ಹೀಗಿರುವಾಗ ಅದರ ತಪಾಸಣೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸರಳಗೊಳಿಸಿದೆ. ದೆಹಲಿ ಐಐಟಿಯ ಸಂಶೋಧಕರು ಇದೀಗ COVID-19 ನ ಒಮಿಕ್ರಾನ್ ರೋಪಾಂತರಿ ಸೋಂಕನ್ನು ಪತ್ತೆಹಚ್ಚಲು ಆರ್ಟಿ-ಪಿಸಿಆರ್ ಆಧಾರಿತ ಪರೀಕ್ಷಾ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಕೇವಲ 90 ನಿಮಿಷಗಳಲ್ಲಿ ವರದಿ ಪಡೆಯಬಹುದಾದ ತಪಾಸಣೆ ಇದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಿಶ್ವದಾದ್ಯಂತ ಎಲ್ಲಿಯೂ ಒಮಿಕ್ರಾನ್ ಪತ್ತೆಗೆ ನಿರ್ದಿಷ್ಟ ತಪಾಸಣೆಯಿಲ್ಲ. ಕೊವಿಡ್ 19 ಪಾಸಿಟಿವ್ ಬಂದವರ ಮಾದರಿಯನ್ನು ಜನರೇಶನ್ ಸಿಕ್ವೆನ್ಸಿಂಗ್ ಆಧಾರಿತ ವಿಧಾನಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬರಲು ಮೂರು ದಿನಗಳಾದರೂ ಬೇಕಾಗಿದೆ.
ಸದ್ಯ ದೆಹಲಿ ಐಐಟಿಯ ಕುಸುಮಾ ಸ್ಕೂಲ್ ಆಫ್ ಬಯಲಾಜಿಕಲ್ ಸೈನ್ಸಸ್ ಅಭಿವೃದ್ಧಿಪಡಿಸಿದ ಕ್ಷಿಪ್ರ ಪರೀಕ್ಷಾ ಮಾದರಿಯ ಬಳಕೆಗಾಗಿ ಇಂಡಿಯನ್ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಮತ್ತು ಒಂದಷ್ಟು ಉದ್ಯಮ ಪಾಲುದಾರರೊಟ್ಟಿಗೆ ಮಾತುಕತೆಯನ್ನೂ ನಡೆಸುತ್ತಿದೆ. ಒಮಿಕ್ರಾನ್ ತಳಿಯಲ್ಲಿರುವ ನಿರ್ಧಿಷ್ಟ ರೂಪಾಂತರಗಳನ್ನು ಪತ್ತೆ ಹಚ್ಚುವ ಮತ್ತು ಕೊವಿಡ್ 19 ಸೋಂಕಿತ ಇತರ ತಳಿಗಳಲ್ಲಿ (ಈಗಾಗಲೇ ಹರಡುತ್ತಿರುವ)ಇಲ್ಲದಿರುವ ರೂಪಾಂತರಗಳನ್ನು ಪತ್ತೆಮಾಡುವುದರ ಮೇಲೆ ಪ್ರಸ್ತುತ ಅಭಿವೃದ್ಧಿಪಡಿಸಿದ ಪರೀಕ್ಷೆ ಆಧಾರಿತವಾಗಿದೆ ಎಂದು ಐಐಟಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕೂಡ ಕೊರೊನಾದ ನೈಜ ಸಮಯದ ಪಿಸಿಆರ್ ಆಧಾರಿತ ರೋಗ ಪತ್ತೆಗಾಗಿ ಐಸಿಎಂಆರ್ನಿಂದ ಅನುಮೋದನೆ ಪಡೆದ ಮೊದಲ ಸಂಸ್ಥೆ ಐಐಟಿ. ಕೊವಿಡ್ 19 ಪತ್ತೆಗಾಗಿ ಇದು ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನ ಕಡಿಮೆ ವೆಚ್ಚದ್ದಾಗಿದ್ದು, ಜನರಿಗೆ ಕೈಗೆಟುವಂತೆ ಇದೆ. ಐಸಿಎಂಆರ್ನಿಂದ ಅನುಮೋದನೆ ಪಡೆದ ನಂತರ ಕೊವಿಡ್ 19 ಟೆಸ್ಟ್ ಕಿಟ್ಗಳು ಮಾರುಕಟ್ಟೆಯಲ್ಲಿ ಚಾಲನೆಗೆ ಬಂದವು. ಇದೀಗ ಒಮಿಕ್ರಾನ್ ಪತ್ತೆಗಾಗಿಯೂ ನಿರ್ದಿಷ್ಟ ತಪಾಸಣಾ ವಿಧಾನವನ್ನು ಅದು ಅಭಿವೃದ್ಧಿಪಡಿಸಿದೆ.
ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಕೂಡ ಮಹಾರಾಷ್ಟ್ರದಲ್ಲಿ ಎರಡು ಹೊಸದಾದ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಅದರಲ್ಲಿ 20 ಪ್ರಕರಣಗಳು ಮಹಾರಾಷ್ಟ್ರದ್ದೇ ಆಗಿವೆ. ಹೀಗೆ ಒಮಿಕ್ರಾನ್ ಹೆಚ್ಚುತ್ತಿರುವಾಗ ನಿಧಾನಗತಿಯ ತಪಾಸಣೆಯಿಂದ ತೊಂದರೆಯಾಗುವುದೇ ಹೆಚ್ಚು. ಹೀಗಾಗಿ ದೆಹಲಿ ಐಐಟಿ ಈ ವಿಧಾನ ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ
Published On - 9:02 am, Tue, 14 December 21