How to Apply: ಯುವಜನರಿಗೆ ಬರಹದ ತರಬೇತಿ ನೀಡಲು YUVA ಯೋಜನೆ ಆರಂಭಿಸಿದ ಕೇಂದ್ರ, 50 ಸಾವಿರ ಶಿಷ್ಯವೇತನ
2022ರಲ್ಲಿ ಈ ಪುಸ್ತಕಗಳನ್ನು ಪ್ರಕಟಿಸಲಾಗುವುದು. ತಿಂಗಳಿಗೆ ₹ 50,000ದಂತೆ 6 ತಿಂಗಳ ಅವಧಿಗೆ ಒಟ್ಟು ₹ 3 ಲಕ್ಷ ಮೊತ್ತವನ್ನು ಶಿಷ್ಯವೇತನವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೆಹಲಿ: ಬರಹಗಾರರಾಗಲು ಇಷ್ಟಪಡುವ 30 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯುವಜನರಿಗಾಗಿ ‘ಉದಯೋನ್ಮುಖ ಯುವ ಬರಹಗಾರ’ ವಿಶೇಷ ಯೋಜನೆಯನ್ನು (Young, Upcoming and Versatile Authors -PM YUVA) ಕೇಂದ್ರ ಸರ್ಕಾರ ಆರಂಭಿಸಿದೆ. ಈ ಯೋಜನೆಯಡಿ ಉದಯೋನ್ಮುಖ ಬರಹಗಾರರಿಗೆ ಅವರಿಷ್ಟದ ಪುಸ್ತಕ ಬರೆಯಲು ತರಬೇತಿ ನೀಡಲಾಗುವುದು. 2022ರಲ್ಲಿ ಈ ಪುಸ್ತಕಗಳನ್ನು ಪ್ರಕಟಿಸಲಾಗುವುದು. ತಿಂಗಳಿಗೆ ₹ 50,000ದಂತೆ 6 ತಿಂಗಳ ಅವಧಿಗೆ ಒಟ್ಟು ₹ 3 ಲಕ್ಷ ಮೊತ್ತವನ್ನು ಶಿಷ್ಯವೇತನವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಯೋಜನೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು, ಜುಲೈ 31 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು 5000 ಪದಗಳ ಹಸ್ತಪ್ರತಿಯನ್ನು mygov.in ಜಾಲತಾಣದ ಮೂಲಕ ಸಲ್ಲಿಸಬೇಕು. ದೇಶಾದ್ಯಂತ ಒಟ್ಟು 75 ಪ್ರವೇಶಗಳನ್ನು ಪರಿಗಣಿಸಲಾಗುವುದು. ಆಗಸ್ಟ್ 15ರಂದು 75 ವಿಜೇತರನ್ನು ಘೋಷಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ಮೂರು ತಿಂಗಳು ತರಬೇತಿ ನೀಡಲಾಗುವುದು. ಆರಂಭದಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ (National Book Trust – NBT) ಎರಡು ವಾರಗಳ ಬರಹಗಾರರ ಆನ್ಲೈನ್ ಕಾರ್ಯಾಗಾರ ಆಯೋಜಿಸಲಿದೆ. ಎನ್ಬಿಟಿಯ ಬರಹರಾರರ ಮಂಡಳಿಯಲ್ಲಿರುವ ಇಬ್ಬರು ಪ್ರತಿಭಾವಂತ ಬರಹಗಾರರು ತರಬೇತಿ ನೀಡಲಿದ್ದಾರೆ. ನಂತರ ಎನ್ಬಿಟಿ ಆಯೋಜಿಸುವ ಎರಡು ವಾರಗಳ ರಾಷ್ಟ್ರೀಯ ಶಿಬಿರದಲ್ಲಿ ಯುವ ಬರಹಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು.
ಅಂತರರಾಷ್ಟ್ರೀಯ ಮಟ್ಟದ ಸಾಹಿತ್ಯ ಉತ್ಸವ, ಪುಸ್ತಕ ಮೇಳ, ವರ್ಚುವಲ್ ಪುಸ್ತಕ ಮೇಳ, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಅನುಭವ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯಡಿ ಆಯ್ಕೆಯಾದ ಬರಹಗಾರರು ಬರೆಯುವ ಪುಸ್ತಕವನ್ನು ಎನ್ಬಿಟಿ ಪ್ರಕಟಿಸಲಿದೆ. ಈ ಪುಸ್ತಕವನ್ನು ಇತರ ಭಾರತೀಯ ಭಾಷೆಗಳಿಗೂ ಭಾಷಾಂತರಿಸಲಾಗುವುದು. ಈ ಪುಸ್ತಕಗಳ ಮಾರಾಟದಿಂದ ಬರುವ ಹಣದಲ್ಲಿ ಶೇ 10ರಷ್ಟು ಮೊತ್ತವಲ್ಲಿ ರಾಯಲ್ಟಿಯಾಗಿ ನೀಡಲಾಗುವುದು.
ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ YUVA ಯೋಜನೆಯನ್ನು ರೂಪಿಸಲಾಗಿದೆ. ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯ ಹೋರಾಟ, ಎಲೆಮರೆ ಕಾಯಿಯಂತಿರುವ ಸಾಧಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಜೇತ ಅಭ್ಯರ್ಥಿಗಳು ಪುಸ್ತಕಗಳನ್ನು ಬರೆಯುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರ ಬಗ್ಗೆ ಬರೆಯಬೇಕು ಎಂದು ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಜನವರಿ ತಿಂಗಳ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
(Prime Ministers YUVA Scheme will Train Young Authors Publish Books that Offers Stipend Here is the Details of How to Apply)
ಇದನ್ನೂ ಓದಿ: ಯುವ ಬರಹಗಾರರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ; 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿನೂತನ ಪ್ರಯೋಗ
ಇದನ್ನೂ ಓದಿ: India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?
Published On - 10:32 pm, Tue, 8 June 21