ನವದೆಹಲಿ: ಏರ್ ಇಂಡಿಯಾ (Air India) ವನ್ನು ಒಂದೋ ಮಾರಾಟ ಮಾಡಬೇಕು.. ಇಲ್ಲ ಮುಚ್ಚಬೇಕು. ಇದರ ಹೊರತಾಗಿ ಬೇರೆಯಾವುದೇ ದಾರಿ ಕಾಣುತ್ತಿಲ್ಲ. ನಮ್ಮ ಬಳಿ ಬಂಡವಾಳ ಹೂಡಿಕೆ ಸಾಧ್ಯವಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಏರ್ ಇಂಡಿಯಾವನ್ನು ಮೇ ಅಂತ್ಯದ ಒಳಗೆ ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಸೋಮವಾರ ನಡೆದ ಸಭೆಯಲ್ಲಿ ಏರ್ ಇಂಡಿಯಾ ಖಾಸಗೀಕರಣದ ನಿರ್ಧಾರವಾಗಿದೆ. ಇನ್ನು 64 ದಿನಗಳಲ್ಲಿ ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಮುಗಿಸಲು ಸರ್ಕಾರ ತೀರ್ಮಾನಿಸಿದೆ. ಹಲವು ಹರಾಜುದಾರರು ಮುಂದೆ ಬಂದಿದ್ದಾರೆ. ಅದರಲ್ಲೂ ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ವಿವರಿಸಿದ ಸಚಿವರು, ಏರ್ ಇಂಡಿಯಾಕ್ಕೆ ಈಗಲೂ 60 ಸಾವಿರ ಕೋಟಿ ರೂ.ಸಾಲ ಇದೆ ಎಂದೂ ತಿಳಿಸಿದ್ದಾರೆ.
2007ರಲ್ಲಿ ಇಂಡಿಯನ್ ಏರ್ಲೈನ್ನೊಂದಿಗೆ ವಿಲೀನಗೊಂಡಾಗಿನಿಂದಲೂ ನಷ್ಟದಲ್ಲಿರುವ ಏರ್ ಇಂಡಿಯಾ ಕಡೆಗೂ ಚೇತರಿಸಿಕೊಳ್ಳಲೇ ಇಲ್ಲ. ಈಗ ಏರ್ ಇಂಡಿಯಾ ಹಣ ಗಳಿಸುತ್ತಿದ್ದರೂ ದಿನಕ್ಕೆ 20 ಕೋಟಿ ರೂ.ನಷ್ಟು ನಷ್ಟವಾಗುತ್ತಲೇ ಇದೆ. ನಾನಂತೂ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಹೇಳಿಬಿಟ್ಟಿದ್ದೇನೆ. ನಿರ್ಮಲಾ ಜೀ, ನನಗಂತೂ ಏರ್ ಇಂಡಿಯಾವನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯವಿಲ್ಲ.. ಸ್ವಲ್ಪ ಹಣಕೊಡಿ ಎಂದು ಕೇಳಿದ್ದೆ ಎಂದೂ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇನ್ನು ಈ ಹಿಂದೆ ಕೂಡ ಕೆಲವು ಬಾರಿ ಏರ್ ಇಂಡಿಯಾ ಖಾಸಗೀಕರಣಕ್ಕೆ ಮುಂದಾಗಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಹಾಗೇ ಬಿಟ್ಟರೆ ಮುಚ್ಚುವುದೊಂದೇ ದಾರಿ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೇರಳದ ಕೋಯಿಕೋಡ್‌ನಲ್ಲಿ ಏರ್ ಇಂಡಿಯಾ ವಿಮಾನಾಪಘಾತ ಪೈಲಟ್ ಸ್ಥಳದಲ್ಲೇ ಸಾವು
Published On - 7:25 pm, Sat, 27 March 21