ದೆಹಲಿ: ಪ್ರವಾದಿ ಮೊಹಮ್ಮದ್ (Prophet Muhammad) ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಎಫ್‌ಐಆರ್ ದಾಖಲಿಸಿದ ನಂತರ ಅಮಾನತುಗೊಂಡ ಬಿಜೆಪಿ (BJP) ವಕ್ತಾರೆ ನೂಪುರ್ ಶರ್ಮಾ (Nupur Sharma) ಮತ್ತು ಅವರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಶರ್ಮಾ ಅವರಿಗೆ ಕಿರುಕುಳ ಮತ್ತು ಬೆದರಿಕೆ ಕರೆಗಳು ಬರುತ್ತಿವೆ ಎಂಬ ದೂರಿನ ಮೇರೆಗೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಒಂದು ದಿನದ ಹಿಂದೆ ಪ್ರಕರಣ ದಾಖಲಿಸಿದ್ದರು. ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ ನಂತರ ಬೆದರಿಕೆ ಕರೆಗಳು ಬರುತ್ತಿತ್ತು. ಹಾಗಾಗಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಟಿವಿ ಚರ್ಚೆಯೊಂದರಲ್ಲಿ ಶರ್ಮಾ, ಪ್ರವಾದಿ ಬಗ್ಗೆ ಹೇಳಿದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಮುಸ್ಲಿಂ ರಾಷ್ಟ್ರಗಳಾದ ಇರಾನ್,ಸೌದಿ ಅರೇಬಿಯಾ ಮತ್ತು ಯುಎಇಯಿಂದ ರಾಜತಾಂತ್ರಿಕ ಪ್ರತಿಭಟನೆಯೂ ಎದುರಾಗಿದೆ. ಬಿಜೆಪಿ ಶರ್ಮಾ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಭಾನುವಾರ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.
ಇದೇ ರೀತಿಯ ವಿಷಯದಲ್ಲಿ ಬಿಜೆಪಿ, ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಬಿಜೆಪಿ ಎಲ್ಲ ಧರ್ಮದವರನ್ನು ಗೌರವಿಸುತ್ತದೆ ಮತ್ತು ಯಾವುದೇ ಧರ್ಮಕ್ಕೆ ಅಗೌರವ ತೋರಿಸುವುದನ್ನು ಒಪ್ಪುದಿಲ್ಲ ಎಂದು ಬಿಜೆಪಿ ಹೇಳಿಕೆ ನೀಡಿತ್ತು.
ಇದಾದ ನಂತರ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿರುವುದಾಗಿ ಹೇಳಿದ ನೂಪುರ್ ಶರ್ಮಾ ಶಿವನ ಬಗ್ಗೆ ಪದೇ ಪದೇ ಅಗೌರವ ಮಾಡುತ್ತಿದ್ದಾಗ ನಾನು ಆ ಮಾತನ್ನು ಹೇಳಿದ್ದೆ. ಯಾರದ್ದೇ ಆದರೂ ಧಾರ್ಮಿಕ ಭಾವನೆಗಳಿಗೆ ನೋವಾಗಿದ್ದರೆ ನಾನು ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು.
ಶರ್ಮಾ ಅವರ ಹೇಳಿಕೆ ನಂತರ ಉತ್ತರ ಪ್ರದೇಶದ ಕಾನ್ಪುರ್ನಲ್ಲಿ ಜೂನ್ 3ರಂದು ಶುಕ್ರವಾರದ ಪ್ರಾರ್ಥನೆ ನಂತರ ಗಲಭೆಯುಂಟಾಗಿದ್ದು ಹಲವರಿಗೆ ಗಾಯಗಳಾಗಿವೆ.
ಮೇ 28ರಂದು ಕೊಲೆ ಬೆದರಿಕೆ ಬರುತ್ತಿದೆ ಎಂದು ಶರ್ಮಾ ಅವರು ದೆಹಲಿ ಪೊಲೀಸರ ಸೈಬರ್ ಸೆಲ್ಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. “ತನಿಖೆಯ ಸಮಯದಲ್ಲಿ, ದ್ವೇಷವನ್ನು ಉತ್ತೇಜಿಸುವ ಕೆಲವು ವ್ಯಕ್ತಿಗಳ ವಿರುದ್ಧ ಶರ್ಮಾ ಅವರಿಂದ ಮತ್ತೊಂದು ದೂರು ಸ್ವೀಕರಿಸಲಾಗಿದೆ. ಇದರ ನಂತರ, ಐಪಿಸಿಯ ಸೆಕ್ಷನ್ 153A ಅನ್ನು ಪ್ರಕರಣಕ್ಕೆ ಸೇರಿಸಲಾಯಿತು. ಟ್ವಿಟರ್ ಸಂಸ್ಥೆಗೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಮತ್ತು ಅದರ ಉತ್ತರವನ್ನು ನಿರೀಕ್ಷಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:47 pm, Tue, 7 June 22