ಕೃಷಿ ಕಾನೂನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ
ರೈತರ ಪ್ರಕಾರ ಅಮರಿಂದರ್ ಶನಿವಾರ ಸಂಜೆ 4.30ರ ವೇಳೆ ಸಲ್ಫಸ್ ಮಾತ್ರೆಗಳನ್ನು ಸೇವಿಸಿ ವೇದಿಕೆಯ ಮುಂಭಾಗಕ್ಕೆ ಬಂದಾಗ ಕುಸಿದು ಬಿದ್ದಿದ್ದರು . ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸಲಿಲ್ಲ ಎಂದು ರೈತರು ಹೇಳಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದ 39ರ ಹರೆಯದ ರೈತರೊಬ್ಬರು ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮರಿಂದರ್ ಸಿಂಗ್ ಎಂಬ ರೈತ ಪ್ರತಿಭಟನಾ ಸ್ಥಳದಲ್ಲಿ ವಿಷ ಸೇವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಸಂಜೆ 7.20ಕ್ಕೆ ಅವರು ಕೊನೆಯುಸಿರೆಳೆದರು. ಮೃತದೇಹವನ್ನು ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಐಟಿ ಸೆಲ್ ನ ಸಂಚಾಲಕ ಬಲ್ಜೀತ್ ಸಿಂಗ್ ಹೇಳಿದ್ದಾರೆ.
ರೈತರ ಪ್ರಕಾರ ಅಮರಿಂದರ್ ಶನಿವಾರ ಸಂಜೆ 4.30ರ ವೇಳೆ ಸಲ್ಫಸ್ ಮಾತ್ರೆಗಳನ್ನು ಸೇವಿಸಿ ವೇದಿಕೆಯ ಮುಂಭಾಗಕ್ಕೆ ಬಂದಾಗ ಕುಸಿದು ಬಿದ್ದಿದ್ದರು. ತಕ್ಷಣವೇ ಆ್ಯಂಬುಲೆನ್ಸ್ ಕರೆಸಿ ಅವರನ್ನು ಸೋನಿಪತ್ನಲ್ಲಿರುವ ಫ್ರಾಂಕ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಮರಿಂದರ್ ಸಿಂಘು ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದರು ಎಂದು ರೈತರು ಹೇಳಿದ್ದಾರೆ.
ನಮಗೆ ಆಘಾತವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಮ್ಮ ಹೋರಾಟ ಮುಂದುವರಿಸೋಣ ಎಂದು ನಾನು ಜನರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಭಾರತ್ ಕಿಸಾನ್ ಯೂನಿಯನ್ (ಬಿಕೆಯು) ದಾಕೌಂದಾ ಘಟಕದ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಪಟಿಯಾಲ ಹೇಳಿದ್ದಾರೆ .
ರೈತರ ಪ್ರತಿಭಟನೆಯಲ್ಲಿ ಈವರೆಗೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ರೈತ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣವೂ ಇಲ್ಲಿ ನಡೆದಿದೆ. ಈ ಹಿಂದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹರಿಯಾಣದ ಕರ್ನಾಲ್ ಜಿಲ್ಲೆಯ ಧಾರ್ಮಿಕ ಮುಖಂಡ ಸಂತ ಬಾಬಾ ರಾಮ್ ಸಿಂಗ್ (65) ಕುಂಡ್ಲಿ ಎಂಬಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಟಿಕ್ರಿಯಲ್ಲಿ ಪಂಜಾಬ್ ಫಜಲಿಕ ಜಿಲ್ಲೆಯ ಅಮರ್ ಜಿತ್ ಸಿಂಗ್ ರಾಯ್ (63) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿದ್ದರು. ಇನ್ನೊಬ್ಬ ರೈತ ಕಶ್ಮೀರ್ ಸಿಂಗ್ ದಾಸ್ ಘಾಜಿಯಾಬಾದ್ ನಲ್ಲಿ ನೇಣು ಬಿಗಿದು ಸಾವಿಗೀಡಾಗಿದ್ದರು. ಪಂಜಾಬ್ ನ ಟರನ್ ಟಾರನ್ ಜಿಲ್ಲೆಯ ನಿರಂಜನ್ ಸಿಂಗ್ ಎಂಬವರು ಸಿಂಘು ಗಡಿಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
Delhi Chalo ಪ್ರತಿಭಟನೆ ಕೈಬಿಟ್ಟು ಮನೆಗೆ ಬಂದು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡ ಪಂಜಾಬ್ನ ಯುವರೈತ