
ನವದೆಹಲಿ, ಅಕ್ಟೋಬರ್ 22: ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಬೀದಿಗೆ ಇಳಿದಿದ್ದರು. ಹಿಂದೆ ಶೇಖ್ ಹಸೀನಾ ಸರ್ಕಾರವನ್ನು ಬೀಳಿಸಲು ಮಾಡಿದ ಹೋರಾಟದಂತಲ್ಲ. ಬದಲಾಗಿ ತೀಸ್ತಾ ನದಿ ಯೋಜನೆಗಾಗಿ (Teesta river project) ಮಾಡಿದ ಹೋರಾಟ. ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಲು ಈ ಹೋರಾಟ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಜನರಿಗೆ ಉಪಯೋಗ ಆಗುವ ನದಿ ಯೋಜನೆ. ಆದರೆ, ಪ್ರಾದೇಶಿಕ ರಾಜಕೀಯ ಚಹರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನಂತೂ ಹೊಂದಿದೆ.
ತೀಸ್ತಾ ನದಿ ಭಾರತದಲ್ಲಿ ಹುಟ್ಟಿ ಬಾಂಗ್ಲಾದೇಶದ ಮೂಲಕ ಹರಿದು ಸಮುದ್ರ ಸೇರುತ್ತದೆ. ಸಿಕ್ಕಿಂನ ಚೋಲಮು ಸರೋವರದಲ್ಲಿ ಈ ನದಿ ನೀರಿನ ಹುಟ್ಟು ಇರುವುದು. ಸಿಕ್ಕಿಂನಿಂದ ಪಶ್ಚಿಮ ಬಂಗಾಳಕ್ಕೆ ಬಂದು ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಹಾಗೆಯೇ, ಬಾಂಗ್ಲಾದೇಶದಲ್ಲಿ ರಂಗಪುರ್ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ತೀಸ್ತಾ ನದಿ ನೀರು ಹರಿದು ಅಲ್ಲಿಯ ಜಮುನಾ ನದಿಯೊಂದಿಗೆ ಮಿಲನಗೊಳ್ಳುತ್ತದೆ.
ಒಟ್ಟು 414 ಕಿಮೀ ದೂರ ಹರಿಯುವ ಈ ನದಿಯು ಬಾಂಗ್ಲಾದೇಶದಲ್ಲಿ ಹರಿಯುವುದು 140 ಕಿಮೀ ಮಾತ್ರ. ಈ ನದಿ ನೀರು ಹಂಚಿಕೆ ವಿಚಾರವು ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಇನ್ನೂ ಬಗೆಹರಿದಿಲ್ಲ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮಧ್ಯೆ ಎಷ್ಟು ನೀರು ಹಂಚಿಕೆ ಆಗಬೇಕು ಎಂಬುದು ಅಂತಿಮಗೊಂಡಿಲ್ಲ. ಹೆಚ್ಚು ನೀರು ಬೇಕೆಂದು ಬಾಂಗ್ಲಾದೇಶದ ಬೇಡಿಕೆಯನ್ನು ಪಶ್ಚಿಮ ಬಂಗಾಳ ಒಪ್ಪುತ್ತಿಲ್ಲ. ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಮಗ್ಗುಲ ಮುಳ್ಳಾಗಿರುವ ವಿಷಯಗಳಲ್ಲಿ ತೀಸ್ತಾ ನದಿ ನೀರು ಹಂಚಿಕೆಯೂ ಒಂದು.
ಇದನ್ನೂ ಓದಿ: ಸೌದಿಯಲ್ಲಿ ಕರಾಳ ‘ಕಫಾಲ’ಕ್ಕೆ ತೆರೆ; ಜೀತದಿಂದ ಲಕ್ಷಾಂತರ ಭಾರತೀಯರು ಮುಕ್ತ; ಏನಿದು ಕಫಾಲ ಸಿಸ್ಟಂ?
ಬಾಂಗ್ಲಾದೇಶದಲ್ಲಿರುವ ತೀಸ್ತಾ ವ್ಯಾಪ್ತಿ ಪ್ರದೇಶದ ಮೂರು ಜಿಲ್ಲೆಗಳಲ್ಲಿ ನೀರಿನ ಬವಣೆ ಹೆಚ್ಚು. ಹೀಗಾಗಿ, ನದಿ ನೀರಿನ ಮೇಲಿನ ಅವಲಂಬನೆ ಬಹಳ ಹೆಚ್ಚಿದೆ. ಭಾರತದಿಂದ ಹಂಚಿಕೆಯಾಗುವ ನೀರಿನ ಪ್ರಮಾಣವು ತೃಪ್ತಿಯಾಗದ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ಚೀನಾ ನೆರವಿನಿಂದ ತೀಸ್ತಾ ನದಿ ನೀರಿನ ಮಾಸ್ಟರ್ ಪ್ಲಾನ್ ಯೋಜನೆ ಹಮ್ಮಿಕೊಂಡಿದೆ.
ವಿವಿಧ ಕಡೆ ಜಲಾಶಯಗಳು, ನೀರಿನ ಕಾಲುವೆಗಳನ್ನು ನಿರ್ಮಿಸುವುದು ಈ ಯೋಜನೆಯ ಭಾಗವಾಗಿದೆ. ಚೀನಾದ ಕಂಪನಿಗಳಿಗೆ ಇದರ ಗುತ್ತಿಗೆ ನೀಡಲಾಗಿದೆ.
ಬಾಂಗ್ಲಾದೇಶದ ತೀಸ್ತಾ ನದಿ ಯೋಜನೆಯ ಸ್ಥಳವು ಸಿಲುಗುರಿ ಕಾರಿಡಾರ್ಗೆ ಬಹಳ ಸಮೀಪ ಇದೆ. ಚಿಕನ್ ನೆಕ್ ಎಂದು ಕರೆಯಲಾಗುವ ಸಿಲುಗುರಿ ಕಾರಿಡಾರ್ ಬಹಳ ಕಿರಿದಾದುದು. ಇದರ ಸಮೀಪವೇ ಚೀನಾದ ಉಪಸ್ಥಿತಿ ಇದೆ ಎಂದರೆ ಅದು ಭಾರತದ ಭದ್ರತೆಗೆ ಅಪಾಯ ತಂದುಕೊಂಡಂತೆ. ತೀಸ್ತಾ ಪ್ರಾಜೆಕ್ಟ್ ನೆವದಲ್ಲಿ ಚೀನಾ ತನ್ನ ಮಿಲಿಟರಿಯನ್ನು ಸಿಲುಗುರಿ ಕಾರಿಡಾರ್ ಬಳಿಯೇ ನಿಯೋಜಿಸುವ ಅಪಾಯವಂತೂ ಇರುತ್ತದೆ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಸುಂಕ ಶೇ. 50ರಿಂದ ಶೇ. 15ಕ್ಕೆ ಇಳಿಕೆ? ಸದ್ಯದಲ್ಲೇ ಒಪ್ಪಂದ ಅಂತಿಮ
ಹಾಗೆಯೇ, ಬಾಂಗ್ಲಾದೇಶವು ಈ ತೀಸ್ತಾ ಪ್ರಾಜೆಕ್ಟ್ ಮೂಲಕ ಚೀನಾಗೆ ಮತ್ತಷ್ಟು ಆಪ್ತವಾಗಬಹುದು. ಈ ಮೂಲಕ ಭಾರತದಿಂದ ಮತ್ತಷ್ಟು ದೂರವಾಗಬಹುದು. ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳ ಮೇಲೆ ಭಾರತದ ಪ್ರಭಾವ ಮತ್ತಷ್ಟು ಕಡಿಮೆ ಆಗಬಹುದು. ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನ ಎಷ್ಟು ಅಪಾಯಕಾರಿಯಾಗಿ ನೆಲಸಿದೆಯೋ, ಪೂರ್ವದಲ್ಲೂ ಅಪಾಯವು ಭಾರತವನ್ನು ಆವರಿಸಬಹುದು. ಈ ಆತಂಕ ಭಾರತಕ್ಕೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ