ದೆಹಲಿ: ಧೂಮಪಾನ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅದರಿಂದ ಕ್ಯಾನ್ಸರ್ನಂಥ ಮಾರಕ ಕಾಯಿಲೆ ಉಂಟಾಗಿ ಸಾವು ಸಹ ಸಂಭವಿಸಬಹುದು. ಹೀಗಂತ ಪ್ರತಿ ಬೀಡಿ, ಸಿಗರೇಟ್ ಮತ್ತು ತಂಬಾಕು ಪ್ಯಾಕೆಟ್ ಮೇಲೆ ಬರೆದಿರುತ್ತದೆ.
ಆದರೆ, ನಮ್ಮ ತಂಬಾಕು ಪ್ರಿಯರು ಈ ಮಾತು ಕೇಳಬೇಕಲ್ವೇ? ಹಾಗಾಗಿ, ಪ್ರತಿ ಪ್ಯಾಕೆಟ್ ಮೇಲೆ ನಮೂದಿಸಲಾದ ಈ ಸಂದೇಶ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ, ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಮತ್ತು ಆರ್ಥಿಕ ತಜ್ಞರು ಸೇರಿ ಕೇಂದ್ರ ಸರ್ಕಾರಕ್ಕೆ ಒಂದು ವಿನೂತನ ಐಡಿಯಾ ನೀಡಲು ಮುಂದಾಗಿದ್ದಾರೆ.
ಸಿಗರೇಟ್, ಬೀಡಿ ಮತ್ತು ತಂಬಾಕು ಮೇಲೆ ತೆರಿಗೆ ವಿಧಿಸುವ GST ಸಭೆಗೆ ಮನವಿ ಸಲ್ಲಿಸಿರುವ ಈ ತಜ್ಞರು ಈಗಾಗಲೇ ಈ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಪರಿಹಾರ ಸೆಸ್ನ (compensation cess) ಮೊತ್ತವನ್ನು ಬೀಡಿಯ ಮೇಲೆ ಒಂದು ರೂಪಾಯಿಯಷ್ಟು ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಏರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ
ಇದರಿಂದ, ಜನರು ಈ ಉತ್ಪನ್ನಗಳ ಖರೀದಿಗೆ ಹಿಂದೇಟು ಹಾಕುತ್ತಾರೆ ಹಾಗೂ ಯುವಕರು ತಂಬಾಕು ಉತ್ಪನ್ನಗಳ ಕಡೆ ಒಲವು ತೋರುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಟ್, ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ ಪಕ್ಷ 50 ಸಾವಿರ ಕೋಟಿ ವರಮಾನವಂತೂ ತಂದು ಕೊಡುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.