Pune Porsche Crash: ಪೋರ್ಷೆ ಅಪಘಾತ ಪ್ರಕರಣ; ಅಪ್ರಾಪ್ತನ ಬದಲು ತಾಯಿಯ ರಕ್ತದ ಮಾದರಿ ಬದಲಿಸಿದ್ದು ಸಾಬೀತು
ಪುಣೆ ಪೋರ್ಷೆ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪೋರ್ಷೆ ಕಾರು ಡಿಕ್ಕಿ ಹೊಡೆದು ಮೇ 19ರಂದು ಮುಂಜಾನೆ ಪುಣೆಯ ಕಲ್ಯಾಣಿ ನಗರದಲ್ಲಿ ಇಬ್ಬರು ಐಟಿ ಉದ್ಯೋಗಿಗಳು ಸಾವನ್ನಪ್ಪಿದ್ದರು. ಕುಡಿದು ಪೋರ್ಷೆ ಕಾರು ಓಡಿಸುತ್ತಿದ್ದ ಅಪ್ರಾಪ್ತ ಯುವಕ ಇಬ್ಬರ ಜೀವವನ್ನು ಬಲಿ ತೆಗೆದುಕೊಂಡಿದ್ದ.
ಪುಣೆ: ಪುಣೆಯಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡ ಪೋರ್ಷೆ ಅಪಘಾತದಲ್ಲಿ (Pune Porsche Crash Case) ಭಾಗಿಯಾಗಿದ್ದ 17 ವರ್ಷದ ಚಾಲಕನ ರಕ್ತದ ಮಾದರಿಯನ್ನು ಬದಲಿಸಲು ತಾಯಿಯ ರಕ್ತದ ಮಾದರಿಗಳನ್ನು ಬಳಸಲಾಗಿದೆ ಎಂದು ವಿಧಿವಿಜ್ಞಾನ ವರದಿಗಳು ದೃಢಪಡಿಸಿವೆ. ಇಂದು ಪುಣೆ ಪೊಲೀಸರು (Pune Police) ಈ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈಗಾಗಲೇ ಆ ಅಪ್ರಾಪ್ತನ ತಂದೆ, ಅಜ್ಜ ಇಬ್ಬರನ್ನೂ ಬಂಧಿಸಲಾಗಿದ್ದು, ಆತನ ತಾಯಿಯನ್ನು ಕೂಡ ಬಂಧಿಸಲಾಗಿತ್ತು. ಕುಡಿತದ ಅಮಲಿನಲ್ಲಿ ಅಪಘಾತ (Car Accident) ಮಾಡಿದ ಅಪ್ರಾಪ್ತ ಯುವಕನ ತಪ್ಪಿನಿಂದ ಆತನ ಇಡೀ ಕುಟುಂಬವೇ ಜೈಲಿನ ಕಂಬಿ ಎಣಿಸುವಂತಾಗಿದೆ.
ಜೂನ್ 1ರಂದು ಪುಣೆ ಪೊಲೀಸರು 17 ವರ್ಷದ ಆರೋಪಿಯ ತಾಯಿ ಶಿವಾನಿ ಅಗರ್ವಾಲ್ ಅವರನ್ನು ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಂಧಿಸಿದ್ದರು. ಆತನ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದೊಂದಿಗೆ ಬದಲಾಯಿಸಲಾಗಿದೆ ಎಂದು ದೃಢಪಟ್ಟಿದೆ. ಅಪಘಾತದ ವೇಳೆ ಆ ಬಾಲಕ ಕುಡಿದಿದ್ದನೇ ಎಂದು ಪರಿಶೀಲನೆ ಮಾಡಲು ರಕ್ತ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಹಣದಾಸೆಗೆ ರಕ್ತದ ಮಾದರಿಯನ್ನು ಬದಲಾಯಿಸಿ, ಆತನ ಬದಲು ಆತನ ತಾಯಿಯ ರಕ್ತದ ಪರೀಕ್ಷೆಯ ಫಲಿತಾಂಶ ನೀಡಿದ್ದ ವೈದ್ಯರನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: Pune Porsche Accident: ಪುಣೆ ಪೋರ್ಷೆ ಅಪಘಾತ; ಅಗರ್ವಾಲ್ ಕುಟುಂಬದ ವಿರುದ್ಧ ಮತ್ತೊಬ್ಬರಿಂದ ದೂರು
ಅಪ್ರಾಪ್ತ ಬಾಲಕನ ಪಾಲಕರು ಜೂನ್ 10ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುತ್ತಾರೆ. ಪೊಲೀಸರ ಕೋರಿಕೆಯ ಮೇರೆಗೆ ಸೆಷನ್ಸ್ ನ್ಯಾಯಾಲಯವು ಅಪ್ರಾಪ್ತನ ಪೋಷಕರಾದ ವಿಶಾಲ್ ಅಗರ್ವಾಲ್ ಮತ್ತು ತಾಯಿ ಶಿವಾನಿ ಅಗರ್ವಾಲ್ ಅವರ ಪೊಲೀಸ್ ಕಸ್ಟಡಿಯನ್ನು ಜೂನ್ 10ರವರೆಗೆ ವಿಸ್ತರಿಸಿದೆ. ರಕ್ತದ ಮಾದರಿ ಬದಲಾಯಿಸಿದ ಸಸುನ್ ಆಸ್ಪತ್ರೆಯ ಡಾ. ಶ್ರೀಹರಿ ಹಾಲ್ನೋರ್, ಡಾ. ಅಜಯ್ ತಾವರೆ ಮತ್ತು ಅತುಲ್ ಘಟಕಾಂಬಳೆ ಅವರನ್ನು ಜೂನ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಬಾಲ ನ್ಯಾಯ ಮಂಡಳಿಯು ವೀಕ್ಷಣಾ ಗೃಹದಲ್ಲಿರುವ ಬಾಲಾಪರಾಧಿಯಾದ ಅಪ್ರಾಪ್ತ ಬಾಲಕಿನ ಬಂಧನವನ್ನು ಜೂನ್ 12 ರವರೆಗೆ ವಿಸ್ತರಿಸಿದೆ. ಮೇ 19ರಂದು ಸಂಭವಿಸಿದ ಅಪಘಾತದ ನಂತರ ಅಪ್ರಾಪ್ತ ವಯಸ್ಕರ ರಕ್ತದ ಮಾದರಿಗಳನ್ನು ಬದಲಿಸಿ ಆ ಸಮಯದಲ್ಲಿ ಆತ ಕುಡಿದಿರಲಿಲ್ಲ ಎಂದು ತೋರಿಸಲು ಪ್ರಯತ್ನಿಸಿದ ಇಲ್ಲಿನ ಸಸುನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ನೌಕರನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ವೈದ್ಯರಲ್ಲಿ ಒಬ್ಬರು ಹದಿಹರೆಯದ ತಂದೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ.
ಏನಿದು ಪ್ರಕರಣ?:
ಮೇ 19ರ ಬೆಳಗಿನ ಜಾವ 2.15ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಪಿಯುಸಿಯ ಫಲಿತಾಂಶವನ್ನು ಆಚರಿಸಲು ಪುಣೆಯ ಎರಡು ಪಬ್‌ಗಳಲ್ಲಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ 17 ವರ್ಷದ ಯುವಕ ಪೋರ್ಷೆ ಕಾರಿನಲ್ಲಿ ಹೋಗುವಾಗ ಇಬ್ಬರು 24 ವರ್ಷದ ಐಟಿ ಉದ್ಯೋಗಿಗಳಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ಚಲಾಯಿಸುತ್ತಿದ್ದ ಅನೀಶ್ ಎಂಬಾತ ಹಾರಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದರೆ, ಹಿಂದೆ ಕುಳಿತಿದ್ದ ಅಶ್ವಿನಿ ಕೋಷ್ಟ 20 ಅಡಿ ಎತ್ತರಕ್ಕೆ ಹಾರಿಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ: ವೇದಾಂತ್ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ
ಆರೋಪಿ ಬಾಲಾಪರಾಧಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ರಾತ್ರಿ 9.30ರಿಂದ 1 ಗಂಟೆಯ ನಡುವೆ ಬಾರ್ಗೆ ಹೋಗಿ ಮದ್ಯ ಸೇವಿಸಿದ್ದ. ಅಪಘಾತ ಮಾಡಿದ ಬಾಲಕ ಆ ದಿನ ಪಬ್ನಲ್ಲಿ 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ. ಆತನ ತಂದೆ ವಿಶಾಲ್ ಅಗರ್ವಾಲ್ ತನ್ನ ಮಗನಿಗೆ 2.5 ಕೋಟಿ ರೂ. ಮೌಲ್ಯದ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಪುಣೆಯ ಬಾರ್‌ನಲ್ಲಿ ಮದ್ಯ ಸೇವಿಸಿ ಇಬ್ಬರನ್ನು ಪೋರ್ಷೆ ಕಾರಿಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಂದ 17 ವರ್ಷದ ಬಾಲಕನಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಮೂರ್ತಿ ಜುವೆನೈಲ್ ಬೋರ್ಡ್ ಇಂದು ರದ್ದುಗೊಳಿಸಿತ್ತು. ಅಲ್ಲದೆ, ಆತನ ತಂದೆ ವಿಶಾಲ್ ಅಗರ್ವಾಲ್ನನ್ನು ಬಂಧಿಸಲಾಗಿತ್ತು. ಕೊನೆಗೆ ಆತನ ಅಜ್ಜ ಸುರೇಂದ್ರ ಅಗರ್ವಾಲ್ನನ್ನು ಕೂಡ ಸಾಕ್ಷಿಯ ನಾಶ ಹಾಗೂ ಕಿಡ್ನಾಪ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. 2 ದಿನಗಳ ಹಿಂದೆ ಆ ಬಾಲಾಪರಾಧಿಯ ತಾಯಿ ಶಿವಾನಿಯನ್ನು ಕೂಡ ಬಂಧಿಸಲಾಗಿತ್ತು. ಇದೀಗ ಇಡೀ ಕುಟುಂಬ ಜೈಲಿನಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ