ಚಂಡೀಗಡ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ಕಾಂಗ್ರೆಸ್ ಹೆಸರಿಸಿದೆ. ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ರಂಧಾವಾ ಅವರ ಹೆಸರು ಮುಂಚೂಣಿಯಲ್ಲಿತ್ತು.
ಸಿಧು ಬಣದಲ್ಲಿ ಗುರುತಿಸಿಕೊಂಡಿದ್ದ ಸುಖ್ಜಿಂದರ್ ರಂಧಾವಾ ಬದಲು ದಲಿತ ನಾಯಕ ಚರಣ್‌ಜಿತ್ ಸಿಂಗ್ಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕಲ್ಪಿಸಿದೆ. ಕೆಲವೇ ಕ್ಷಣಗಳಲ್ಲಿ ಚರಣ್‌ಜಿತ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ದಲಿತ ರಾಜಕಾರಣದ ಚದುರಂಗ
ಪಂಜಾಬ್ ರಾಜಕಾರಣದ ಏರಿಳಿತ ನಿಯಂತ್ರಿಸಬಹುದು ಎಂದು ವಿಶ್ಲೇಷಿಸಲಾಗಿರುವ ಶಿರೋಮಣಿ ಅಕಾಲಿದಳ ಮತ್ತು ಆಮ್ ಆದ್ಮಿ ಪಕ್ಷಗಳು ಈ ಹಿಂದೆ ದಲಿತ ಮತಗಳನ್ನು ಸೆಳೆಯಲು ಮಹತ್ವದ ಭರವಸೆಗಳನ್ನು ಘೋಷಿಸಿದ್ದವು. ರಾಜ್ಯದ ದಲಿತರು ಹಿಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಗ್ಗೆ ಅಸಮಾಧಾನ ಹೊಂದಿದ್ದ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಚರಣ್‌ಜಿತ್ ಸಿಂಗ್ ಛನ್ನಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
58 ವರ್ಷದ ಚರಣ್‌ಜಿತ್ ಸಿಂಗ್ ಹಿಂದಿನ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷವು ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ತನ್ನ ನಾಯಕನಾಗಿ ಚುನಾಯಿಸಿದ್ದು, ಪಕ್ಷದ ಉಸ್ತುವಾರಿ ಹರೀಶ್ ರಾವತ್ ಈ ಆಯ್ಕೆಯನ್ನು ದೃಢಪಡಿಸಿದ್ದಾರೆ.
ಛನ್ನಿ ಅವರ ಆಯ್ಕೆಯು ಅಚ್ಚರಿಯುಂಟು ಮಾಡಿದೆ. ಕೆಲ ನಿಮಿಷಗಳ ಮೊದಲಿನವರೆಗೂ ಸುಖ್ಜಿಂದರ್ ಸಿಂಗ್ ರಂಧಾವಾ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿತ್ತು. ತಮ್ಮ ಹೆಸರನ್ನು ಹೈಕಮಾಂಡ್ ಕೈಬಿಟ್ಟಿದ್ದು ದೃಢಪಟ್ಟ ನಂತರ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ರಂಧಾವಾ, ‘ಹೈಕಮಾಂಡ್ ಸರಿಯಾದ ತೀರ್ಮಾನ ತೆಗೆದುಕೊಂಡಿದೆ. ಛನ್ನಿ ಅವರಿಗೆ ಪಕ್ಷದ ಶಾಸಕರ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದರು.
It gives me immense pleasure to announce that Sh. #CharanjitSinghChanni has been unanimously elected as the Leader of the Congress Legislature Party of Punjab.@INCIndia @RahulGandhi @INCPunjab pic.twitter.com/iboTOvavPd
— Harish Rawat (@harishrawatcmuk) September 19, 2021
ಅಮರಿಂದರ್ ಸಿಂಗ್ ಮತ್ತು ನವ್ಜೋತ್ ಸಿಂಗ್ ಸಿಧು ಬಣಗಳ ನಡುವಣ ಹಗ್ಗಜಗ್ಗಾಟದಿಂದ ದೇಶದ ಗಮನ ಸೆಳೆದಿದ್ದ ಪಂಜಾಬ್ ರಾಜಕಾರಣ ಇದೀಗ ಒಂದು ಹಂತಕ್ಕೆ ಬಂದಿದೆ. ಕಳೆದ ಶುಕ್ರವಾರ ಇದ್ದಕ್ಕಿದ್ದಂತೆ ಸಭೆ ಸೇರಿದ್ದ ಕಾಂಗ್ರೆಸ್ ಶಾಸಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಅಮರಿಂದರ್ ಸಿಂಗ್ ಅವರ ಸ್ಥಾನಚ್ಯುತಿಗೆ ಒತ್ತಾಯಿಸಿದ್ದರು. ಪಕ್ಷದ 80 ಶಾಸಕರ ಪೈಕಿ 50 ಮಂದಿಯ ಸಹಿ ಈ ಪತ್ರದಲ್ಲಿತ್ತು.
ಈ ಬೆಳವಣಿಗೆಯ ನಂತರ ಸೋನಿಯಾ ಗಾಂಧಿಯೊಂದಿಗೆ ಮಾತನಾಡಿದ್ದ ಅಮರಿಂದರ್ ತಮ್ಮ ಆಡಳಿತ ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್ನಿಂದ ಮೂರು ಬಾರಿ ತಮಗೆ ತೀವ್ರ ಅವಮಾನವಾಗಿದೆ ಎಂದು ದೂರಿದ್ದರು. ರಾಜೀನಾಮೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ಅವರಿಗೆ (ನವ್ಜೋತ್ ಸಿಂಗ್ ಸಿಧು) ಮುಖ್ಯಮಂತ್ರಿ ಪಟ್ಟ ಕೊಡುವುದನ್ನು ನಾನು ವಿರೋಧಿಸುತ್ತೇನೆ. ಆತ ಅಸಮರ್ಥ. ಅವರು ಮುಖ್ಯಮಂತ್ರಿ ಆದರೆ ಅನಾಹುತವೇ ಆಗುತ್ತದೆ ಎಂದಿದ್ದರು.
(Punjab Congress Charanjit Singh Channi will be new Chief Minister)
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಬಗ್ಗೆ ಟ್ವೀಟ್ ಮಾಡಿದ್ದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸಹಾಯಕ ರಾಜೀನಾಮೆ
ಇದನ್ನೂ ಓದಿ: Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
Published On - 6:05 pm, Sun, 19 September 21