ನನಗೆ ತೀರ್ಮಾನ ತೆಗೆದುಕೊಳ್ಳಲು ಬಿಡದಿದ್ದರೆ ಇಲ್ಲಿ ಅನಾಹುತವಾಗುತ್ತೆ: ಕಾಂಗ್ರೆಸ್ ನಾಯಕತ್ವಕ್ಕೆ ನವಜೋತ್ ಸಿಧು ಎಚ್ಚರಿಕೆ
ನನಗೆ ಸ್ವಾತಂತ್ರ್ಯ ನೀಡಿದರೆ ಪಕ್ಷವು ಮುಂದಿನ 20 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಇಲ್ಲದಿದ್ದರೆ ಧ್ವಂಸವಾಗುತ್ತದೆ ಎಂದು ನೇರವಾಗಿ ಎಚ್ಚರಿಸಿದರು.
ಚಂಡಿಗಡ: ತಮ್ಮ ಸಲಹೆಗಾರರ ಬಗ್ಗೆ ಪಕ್ಷದ ಹೈಕಮಾಂಡ್ ಕಟು ನಿಲುವು ತಾಳಿರುವುದನ್ನು ಆಕ್ಷೇಪಿಸಿರುವ ಕಾಂಗ್ರೆಸ್ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮಗೆ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡದಿದ್ದರೆ ಪಕ್ಷದ ಪರಿಸ್ಥಿತಿ ವಿಷಮಿಸುತ್ತದೆ ಎಂದು ಹೇಳಿದ್ದಾರೆ.
ನನಗೆ ನನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಹೈಕಮಾಂಡ್ಗೆ ವಿನಂತಿ ಮಾಡುತ್ತೇನೆ. ನನಗೆ ಸ್ವಾತಂತ್ರ್ಯ ನೀಡಿದರೆ ಪಕ್ಷವು ಮುಂದಿನ 20 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಇಲ್ಲದಿದ್ದರೆ ಧ್ವಂಸವಾಗುತ್ತದೆ ಎಂದು ನೇರವಾಗಿ ಎಚ್ಚರಿಸಿದರು.
ಸಿಧು ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಪಂಜಾಬ್ ರಾಜ್ಯ ಉಸ್ತುವಾರಿ ಹರೀಶ್ ರಾವತ್, ‘ಸಿಧು ಈಗ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಪಕ್ಷದ ಬಗ್ಗೆ ಅವರಲ್ಲದೆ ಮತ್ತಿನ್ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾಧ್ಯಮಗಳ ಹೇಳಿಕೆ ಆಧರಿಸಿ ನಾನು ಪ್ರತಿಕ್ರಿಯಿಸಲು ಆಗುವುದಿಲ್ಲ. ಅವರು ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ನೀಡಿದ್ದಾರೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಅನಂತರವಷ್ಟೇ ನಾನು ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.
ರಾಹುಲ್ ಗಾಂಧಿ ಅವರನ್ನು ಮುಂದಿನ ಶನಿವಾರ ಭೇಟಿಯಾಗುತ್ತೇನೆ. ಸಿಧು ಸಲಹೆಗಾರರ ಹೇಳಿಕೆಗಳ ವಿವಾದ ಈಗ ಅಪ್ರಸ್ತುತ. ಏಕೆಂದರೆ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದಾರೆ ಎಂದು ರಾವತ್ ನುಡಿದರು.
ಸಿಧು ಅವರು ಸಲಹೆಗಾರ ಮಲ್ವಿಂದರ್ ಸಿಂಗ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್ ವಿವಾದಕ್ಕೀಡಾಗಿತ್ತು. ಕಾಶ್ಮೀರ ಭಾರತದ ಭಾಗವಾಗಿತ್ತು. ಅಲ್ಲಿಗೆ 370 ಮತ್ತು 35ಎ ಪರಿಚ್ಛೇದಗಳನ್ನು ಜಾರಿಗೊಳಿಸುವ ಅಗತ್ಯವೇನಿತ್ತು. ಕಾಶ್ಮೀರದ ನಿವಾಸಿಗಳಿಗೆ ಅದು ಅವರ ದೇಶ ಎಂದು ತಿಳಿಸಿದರು. ಸಿಧು ಅವರ ಮತ್ತೋರ್ವ ಸಲಹೆಗಾರ ಪ್ಯಾರೆಲಾಲ್ ಗರ್ಗ್ ಪಾಕಿಸ್ತಾನದ ಬಗ್ಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದರು.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ನಿಷ್ಠರಾಗಿರುವ ಕೆಲ ಶಾಸಕರು ಸಿಧು ಹೇಳಿಕೆಗಳ ವಿರುದ್ಧ ಹರಿಹಾಯ್ದಿದ್ದರು. ಪಾಕಿಸ್ತಾನ ಮತ್ತು ಕಾಶ್ಮೀರದ ಬಗ್ಗೆ ತಮ್ಮ ಹೇಳಿಕೆಗಳು ತೀವ್ರ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಿಧು ಅವರ ಸಲಹೆಗಾರ ಮಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀರ್ಧಾರವನ್ನು ಫೇಸ್ಬುಕ್ನಲ್ಲಿಯೇ ಘೋಷಿಸಿದರು.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಯಾವುದೇ ಹಾನಿಯಾದರೆ ಅದಕ್ಕೆ ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ ಮತ್ತು ಇತರ ನಾಯಕರನ್ನು ಹೊಣೆಯಾಗಿಸಬೇಕು ಎಂದು ಹೇಳಿದರು.
(Punjab Congress Crisis Let me take decisions or it will be disastrous Navjot Sidhu warns Congress)
ಇದನ್ನೂ ಓದಿ: ಪಂಜಾಬ್ನಂತೆ ಛತ್ತೀಸ್ಘಡ್ನಲ್ಲೂ ಕಾಂಗ್ರೆಸ್ ನಾಯಕರ ನಡುವೆ ಜಗಳ, ಹೈಕಮಾಂಡ್ಗೆ ಮತ್ತೊಂದು ತಲೆನೋವು
ಇದನ್ನೂ ಓದಿ: ಅಮರೀಂದರ್ ಸಿಂಗ್ ನೇತೃತ್ವದಲ್ಲೇ 2022ರ ಪಂಜಾಬ್ ಚುನಾವಣೆ; ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಸ್ಪಷ್ಟನೆ