ಚರಣ್​ಜಿತ್ ಸಿಂಗ್ ಚನ್ನಿ ಮುಂದಿರುವ ಆಯ್ಕೆ, ಸವಾಲುಗಳೇನು? ಪಂಜಾಬ್ ಹೊಸ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಭವಿಷ್ಯ!

| Updated By: ganapathi bhat

Updated on: Sep 25, 2021 | 7:34 PM

Punjab Politics: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ, ಯಾರು ಸಿಎಂ ಹುದ್ದೆಗೇರಬಹುದು? ಚನ್ನಿಯನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಅಷ್ಟು ಸುಲಭವೇ? ಪಂಜಾಬ್ ಅಭಿವೃದ್ದಿ ಬಗ್ಗೆ ಚನ್ನಿಗೆ ಇರುವ ಯೋಜನೆಗಳೇನು ಎನ್ನುವುದರ ವಿಶೇಷ ವರದಿ ಇಲ್ಲಿದೆ.

ಚರಣ್​ಜಿತ್ ಸಿಂಗ್ ಚನ್ನಿ ಮುಂದಿರುವ ಆಯ್ಕೆ, ಸವಾಲುಗಳೇನು? ಪಂಜಾಬ್ ಹೊಸ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಭವಿಷ್ಯ!
ಚರಣ್​ಜಿತ್ ಸಿಂಗ್ ಚನ್ನಿ ಮುಂದಿರುವ ಆಯ್ಕೆ ಮತ್ತು ಸವಾಲುಗಳೇನು?
Follow us on

ದೆಹಲಿ: ಪಂಜಾಬ್​ನಲ್ಲಿ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಸರ್ಕಾರದ ಕ್ಯಾಬಿನೆಟ್ ನಾಳೆ ರಚನೆಯಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ, ಯಾರು ಸಿಎಂ ಹುದ್ದೆಗೇರಬಹುದು? ಚನ್ನಿಯನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಅಷ್ಟು ಸುಲಭವೇ? ಪಂಜಾಬ್ ಅಭಿವೃದ್ದಿ ಬಗ್ಗೆ ಚನ್ನಿಗೆ ಇರುವ ಯೋಜನೆಗಳೇನು ಎನ್ನುವುದರ ವಿಶೇಷ ವರದಿ ಇಲ್ಲಿದೆ ಓದಿ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿ ಒಂದು ವಾರ ಕಳೆಯುತ್ತಿದೆ. ನಾಳೆ (ಸೆ.26) ಪಂಜಾಬ್ ನಲ್ಲಿ ಕ್ಯಾಬಿನೆಟ್ ರಚನೆಯಾಗುತ್ತಿದೆ. ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಏನಿದ್ದರೂ, ಮುಂದಿನ ಚುನಾವಣೆವರೆಗೂ ರಾಜ್ಯದ ಸಿಎಂ ಆಗಿರುತ್ತಾರೆ. ಆದಾದ ಬಳಿಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ, ನವಜೋತ್ ಸಿಂಗ್ ಸಿಧು ಸಿಎಂ ಆಗ್ತಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ದಲಿತ ಸಮುದಾಯದ ಚರಣ್​ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಸುಲಭವೇ ಎಂಬ ಪ್ರಶ್ನೆ ಕೂಡ ಈಗ ಪಂಜಾಬ್​ನಲ್ಲಿ ಚರ್ಚೆಯಾಗುತ್ತಿದೆ.

ಚರಣಜಿತ್ ಸಿಂಗ್ ಚನ್ನಿ, ಪೊಲಿಟಿಕಲ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವೀಧರರು. ಎಂಬಿಎ ಪದವೀಧರ. ಜೊತೆಗೆ ಕಾನೂನು ಪದವೀಧರ. ಈಗ ಪಿ.ಎಚ್‌ಡಿ ಕೂಡ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಬಗ್ಗೆಯೇ ಪಿ.ಎಚ್‌ಡಿ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕ್ಯಾಬಿನೆಟ್​ನಲ್ಲೂ ಅತಿ ವಿದ್ಯಾವಂತ ಸಚಿವರಾಗಿದ್ದವರು ಚರಣಜಿತ್ ಸಿಂಗ್ ಚನ್ನಿ.

ವಿದ್ಯಾವಂತ, ದಲಿತ ಸಿಎಂ ಬದಲಾವಣೆ ಮಾಡಲು ಸಾಧ್ಯವೇ?
2022ರಲ್ಲಿ ಪಂಜಾಬ್‌ನಲ್ಲಿ ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ನಾಯಕತ್ವದಲ್ಲೇ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಎದುರಿಸಲಿದೆ. ಈಗ ಪಂಜಾಬ್‌ನಲ್ಲಿ ಯಾವುದೇ ಜಿಲ್ಲೆಗೆ ಹೋದರೂ, ಚರಣಜಿತ್ ಸಿಂಗ್ ಚನ್ನಿ ಪೋಟೋಗಳೇ ರಾರಾಜಿಸುತ್ತಿವೆ. ಸರ್ಕಾರದ ಜಾಹೀರಾತುಗಳಲ್ಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪೋಟೋಗಳನ್ನು ತೆಗೆದು ಬೇಗ ಚರಣ್ ಜಿತ್ ಸಿಂಗ್ ಚನ್ನಿ ಪೋಟೋ ಹಾಕಲಾಗಿದೆ. ಆದರೆ, ಕೆಲವರು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವು ಸಿಎಂ ಬದಲಾವಣೆ ಮಾಡುವುದರಲ್ಲಿ ವಿಳಂಬ ಮಾಡಿದೆ ಎನ್ನುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಐದಾರು ತಿಂಗಳು ಇರುವಾಗ ಸಿಎಂ ಬದಲಾವಣೆ ಮಾಡಿದೆ. ಆದರೆ, ಬಿಜೆಪಿ ಪಕ್ಷವು ಚುನಾವಣೆಗಿಂತ ಒಂದು ವರ್ಷ, ಎರಡು ವರ್ಷ ಮುಂಚೆಯೇ ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ತನ್ನ ಸಿಎಂಗಳನ್ನು ಬದಲಾವಣೆ ಮಾಡಿದೆ. ಇದರಿಂದಾಗಿ ಪಂಜಾಬ್​ನಲ್ಲಿ ಅಧಿಕಾರ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಸರ್ಕಾರದಿಂದ ಸಾಧ್ಯವೇ ಎಂಬುದು ಈಗಿರುವ ಪ್ರಶ್ನೆ.

ಆದರೆ, ಕೆಲವರು ಚರಣಜಿತ್ ಸಿಂಗ್ ಚನ್ನಿ, ಆಕ್ಸಿಡೆಂಟಲ್ ಸಿಎಂ ಎಂದು ಕರೆಯುತ್ತಿದ್ದಾರೆ. ಕೆಲವರು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಚರಣಜಿತ್ ಸಿಂಗ್ ಚನ್ನಿಯೇ ಉತ್ತಮ ಆಯ್ಕೆ ಎಂದು ಕೂಡ ಹೇಳುತ್ತಿದ್ದಾರೆ. ಒಂದು ವೇಳೆ ಚನ್ನಿಯೇ ಉತ್ತಮ ಆಯ್ಕೆ ಆಗಿದ್ದರೆ, ಚುನಾವಣೆಯಲ್ಲಿ ಬಹುಮತ ಬಂದರೆ, ಚುನಾವಣೆ ನಂತರವೂ ಚನ್ನಿಯೇ ಸಿಎಂ ಹುದ್ದೆಯಲ್ಲಿ ಮುಂದುವರೆಯಬಹುದು. ಯಾರಿಗೇ ಆಗಲಿ, ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಮತ್ತೆ ಬಹುಮತ ಬಂದರೆ, ವಿದ್ಯಾವಂತ, ದಲಿತ ಸಿಎಂ ಬದಲಾವಣೆ ಮಾಡಲು ಸಾಧ್ಯವೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.

ಬಿಎ, ಎಂಎ, ಕಾನೂನು, ಎಂಬಿಎ ಪದವಿ; ಈಗ ಪಿಎಚ್​ಡಿ ಮಾಡುತ್ತಿದ್ದಾರೆ ಚರಣ್​ಜಿತ್ ಸಿಂಗ್ ಚನ್ನಿ
ಕಳೆದ ಬುಧವಾರ ಕಪರತಲಾ ಐಐಟಿಗೆ ಭೇಟಿ ನೀಡಿದ್ದ ಸಿಎಂ ಚರಣಜಿತ್ ಸಿಂಗ್ ಚನ್ನಿ, ವಿದ್ಯಾರ್ಥಿಗಳ ಜೊತೆ ಸೇರಿ ಬಾಂಗ್ರಾ ಡ್ಯಾನ್ಸ್ ಮಾಡಿದ್ದಾರೆ. ಐಐಟಿಯಲ್ಲಿ ಮಾಡಿದ 30 ನಿಮಿಷದ ಭಾಷಣದಲ್ಲಿ, ತಮ್ಮ ಕಷ್ಟದ ಹಿನ್ನಲೆಯನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಪಂಜಾಬ್‌ನ ಬಗ್ಗೆ ತಮ್ಮ ದೂರದೃಷ್ಟಿಯನ್ನು ತಿಳಿಸಿದ್ದಾರೆ. ಪಂಜಾಬ್‌ ಭವಿಷ್ಯದ ಬಗ್ಗೆ ನನ್ನದೇ ಆದ ಪ್ಲ್ಯಾನ್​ಗಳಿವೆ. ಆ ಪ್ಲ್ಯಾನ್​ಗಳನ್ನು ಸಿದ್ದಪಡಿಸುತ್ತಿದ್ದೇನೆ ಎಂದಿದ್ದಾರೆ. ಭ್ರಷ್ಟಾಚಾರವನ್ನು ತಾವು ಸಹಿಸಲ್ಲ ಎಂದ ಸಿಎಂ, ಮುಂದಿನ ಐದು ತಿಂಗಳಲ್ಲೇ ಭ್ರಷ್ಟ ವ್ಯವಸ್ಥೆಗೊಂದು ಗತಿ ಕಾಣಿಸುವುದಾಗಿ ಹೇಳಿದ್ದಾರೆ.

ಒಂದು ನಾನು ಅಧಿಕಾರದಿಂದ ಕೆಳಗಿಯುತ್ತೇನೆ, ಇಲ್ಲವೇ ಭ್ರಷ್ಟಾಚಾರ ಹೋಗುತ್ತೆ. ಯಾರಾದರೂ ಲಂಚ ಕೇಳಿದರೆ, ನನಗೆ ಪೋನ್ ಕಾಲ್ ಮಾಡಿ ಎಂದು ಸಿಎಂ ಚರಣಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ಚರಣ್​ಜಿತ್ ಸಿಂಗ್ ಚನ್ನಿ ಭಾಷಣದಲ್ಲಿ ಮೂರು ಪ್ರಮುಖ ಅಂಶಗಳನ್ನು ಹೇಳಿದ್ದರು. ಮೊದಲನೆಯದಾಗಿ ಅಂಬೇಡ್ಕರ್ ಕಡುಕಷ್ಟದಲ್ಲಿ ಬೆಳೆದು ಬಂದಿದ್ದನ್ನು ಸ್ಮರಿಸಿದರು. ತಮ್ಮ ಕಷ್ಟದ ಜೀವನದಲ್ಲಿ ವಿದ್ಯಾಭ್ಯಾಸ ಪಡೆದಿದ್ದನ್ನು ಸ್ಮರಿಸಿದರು. ನಾನು ಅಂಬೇಡ್ಕರ್ ಅವರಿಂದ ಸ್ಪೂರ್ತಿ ಪಡೆದಿದ್ದೇನೆ. ಅವರಂತೆ, ಜೀವನದುದ್ದಕ್ಕೂ ಶಕ್ತಿಶಾಲಿಯಾಗುವ ಪ್ರಯತ್ನ ಮಾಡಿದ್ದೇನೆ. ಮೀಸಲಾತಿಯ ಕಾರಣದಿಂದ ಎಂದೂ ಶಾಲೆಯ ಶುಲ್ಕವನ್ನು ಕಟ್ಟಿಲ್ಲ. ಕಾಲೇಜಿನಲ್ಲಿ ವರ್ಷಕ್ಕೆ ಬರೀ 26 ರೂಪಾಯಿ ಶುಲ್ಕ ಕಟ್ಟುವುದರಿಂದ ಕೂಡ ವಿನಾಯಿತಿ ಪಡೆದಿದ್ದೆ, ಏಕೆಂದರೆ, ಆಗ ನಾನು ಸ್ಪೋರ್ಟ್ ಕೋಟಾದಲ್ಲಿ ಹ್ಯಾಂಡ್ ಬಾಲ್ ಆಡುತ್ತಿದ್ದೆ. ನಂತರ ವಿಶ್ವವಿದ್ಯಾಲಯದಲ್ಲಿ ಪ್ರತಿ ತಿಂಗಳು 150 ರೂಪಾಯಿ ಸ್ಟೈಫಂಡ್ ಪಡೆದಿದ್ದೇನೆ. ನಾನು ಬಿ.ಎ. ಓದಿದ್ದೇನೆ. ಬಳಿಕ ಕಾನೂನು ಪದವಿ ಪಡೆದೆ. ನಂತರ ಪೊಲಿಟಿಕಲ್ ಸೈನ್ಸ್ ನಲ್ಲಿ ಎಂ.ಎ. ಪದವಿ ಪಡೆದೆ. ನಂತರ ಎಂಬಿಎ ಪದವಿ ಪಡೆದೆ. ಈಗ ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಬಗ್ಗೆ ಪಿ.ಎಚ್‌.ಡಿ. ಮಾಡುತ್ತಿದ್ದೇನೆ ಎಂದು ಸಿಎಂ ಚರಣಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ವಾಸ್ತವವಾಗಿ ಪಂಜಾಬ್ ರಾಜ್ಯದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದಿನ ಕೂಡ, ಅಂದು ರಾತ್ರಿ 2 ರಿಂದ 3 ಗಂಟೆಯವರೆಗೆ ತಮ್ಮ ಗೈಡ್ ಜೊತೆಗೆ ಕುಳಿತುಕೊಂಡು ಪಿಎಚ್‌ಡಿ ಥಿಸೀಸ್ ಬರೆದಿದ್ದಾರಂತೆ. ಇದೇ ಡಿಸೆಂಬರ್ ಒಳಗೆ ಪಿ.ಎಚ್​ಡಿ ಥೀಸೀಸ್ ಅನ್ನು ಸಲ್ಲಿಕೆ ಮಾಡಲು ಸಿದ್ದತೆ ನಡೆಸಿದ್ದಾರೆ. ಪಂಜಾಬ್​ನಲ್ಲಿ ಈಗ ರಸ್ತೆಬದಿ ರಾರಾಜಿಸುತ್ತಿರುವ ಸಿಎಂ ಚರಣಜಿತ್ ಸಿಂಗ್ ಚನ್ನಿ ಪೋಸ್ಟರ್ ಗಳಲ್ಲಿ ಚನ್ನಿ ಹೆಸರಿನ ಕೆಳಗೆ ಪಿ.ಎಚ್​ಡಿ ಮಾಡ್ತಿದ್ದಾರೆ ಎನ್ನುವುದು ಕೂಡ ಉಲ್ಲೇಖವಾಗಿದೆ.

ತಾವೊಬ್ಬ ಕಾಮನ್ ಮ್ಯಾನ್ ಎನ್ನುತ್ತಿರುವ ಚನ್ನಿ
ಸಿಎಂ ಚರಣ್​ಜಿತ್ ಸಿಂಗ್ ಚನ್ನಿ, ತಾವೊಬ್ಬ ಕಾಮನ್ ಮ್ಯಾನ್ ಎನ್ನುವುದನ್ನು ಸಿಎಂ ಆದ ಬಳಿಕ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದರು. ಚನ್ನಿ ಕ್ಯಾಪ್ಟನ್ ಅಮರೀಂದರ್ ಸಿಂಗ್​ರಂತೆ ರಾಜಮನೆತನದವರಲ್ಲ. ಅಕಾಲಿದಳದ ಸುಖಬೀರ್ ಸಿಂಗ್ ಬಾದಲ್​ರಂತೆಯೂ ಅಲ್ಲ. ಪ್ರಧಾನಿ ನರೇಂದ್ರ ಮೋದಿಯಂತೆ, ತಾವು ರಾಜ್ಯದ ಮುಖ್ಯ ಸೇವಾದಾರ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ.

ನನ್ನ ಪೋನ್​ನ್ನು ಎಂದೂ ಸೈಲೆಂಟ್​ನಲ್ಲಿ ಇಡಲ್ಲ. ಪೋನ್ ಯಾವಾಗಲೂ ಆನ್ ಆಗಿಯೇ ಇರುತ್ತೆ. ನಾನು ಸಿಎಂ ಆದ ದಿನ ನನಗೆ ನನ್ನ ಭದ್ರತೆಗಾಗಿ ಒಂದು ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿರುವುದು ಕೇಳಿ ಶಾಕ್ ಆಯಿತು. ಜೊತೆಗೆ ಇನ್ನೂರು ಲಕ್ಸುರಿ ಕಾರ್​ಗಳು ಇದ್ದವು. ಕೆಲ ಕಾರ್​ಗಳು 2 ಕೋಟಿ ರೂಪಾಯಿ ಬೆಲೆಬಾಳುತ್ತಾವೆ. ಕಾರ್​ಗಳು ನನ್ನ ರೂಮಿನಷ್ಟೇ ದೊಡ್ಡದಾಗಿವೆ. ನನಗೆ ಇವು ಯಾವುದೂ ಬೇಡ. ನನ್ನ ಭದ್ರತಾ ಸಿಬ್ಬಂದಿಯನ್ನು 5 ರಿಂದ 10 ಜನರಿಗೆ ಇಳಿಕೆ ಮಾಡಲು ಸೂಚಿಸಿದ್ದೇನೆ. ನನಗೆ ಯಾರು ತೊಂದರೆ ಕೊಡ್ತಾರೆ ಅಥವಾ ಕೊಲೆ ಮಾಡ್ತಾರೆ? ಹೆಚ್ಚಿನ ಭದ್ರತೆ ಪಡೆಯಲು ನಾನೇನು ಸುಖಬೀರ್ ಬಾದಲ್ ಅಲ್ಲ. ಬಾದಲ್​ಗೆ ಸಾರ್ವಜನಿಕರ ಬೆಂಬಲ ಇಲ್ಲ. ಹೀಗಾಗಿ ಹೆಚ್ಚಿನ ಭದ್ರತೆ ಪಡೆಯುತ್ತಾರೆ ಎಂದು ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಚರಣ್​ಜಿತ್ ಸಿಂಗ್ ಚನ್ನಿ ಕಡಿಮೆ ಅವಧಿಯಲ್ಲೇ ದೂರದೃಷ್ಟಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಕೇವಲ 5 ತಿಂಗಳ ಅವಧಿಯಲ್ಲೇ 1 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ. ಉದ್ಯೋಗಗಳ ಹೊರಗುತ್ತಿಗೆ ನೀಡಿಕೆಯನ್ನು ಸ್ಥಗಿತಗೊಳಿಸಲು ಸಿಎಂ ಒಲವು ತೋರಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿ, ಪಂಜಾಬ್ ಮುನ್ನಡೆಯತ್ತ ಯೋಜನೆ ಜಾರಿಗೊಳಿಸಲು ಚನ್ನಿ ಒಲವು ತೋರಿದ್ದಾರೆ. ಪಂಜಾಬ್​ನಲ್ಲಿರುವ ಬಾದಲ್ ಸರ್ಕಾರದ ಅವಧಿಯ ವಿವಾದಾತ್ಮಕ ವಿದ್ಯುತ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಪ್ಲ್ಯಾನ್ ಮಾಡಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳ ವಿರುದ್ಧ ಡ್ರಗ್ಸ್ ಕೇಸ್​ನಲ್ಲಿ ಕ್ರಮ ಕೈಗೊಳ್ಳಲು ಚನ್ನಿ ನಿರ್ಧರಿಸಿದ್ದಾರೆ ಎಂದು ಆಪ್ತರು ಹೇಳಿದ್ದಾರೆ.

ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಎರಡು ಮೂರು ದೊಡ್ಡ ಭರವಸೆ ಈಡೇರಿಸಿದರೂ ಯಶಸ್ಸು ಸಿಗುತ್ತೆ. ಪಂಜಾಬ್​ನಲ್ಲಿ ಅಗ್ಗದ ಬೆಲೆಯ ವಿದ್ಯುತ್ ನೀಡಿಕೆ ಯೋಜನೆಯು ಸದ್ಯದಲ್ಲೇ ಜಾರಿಯಾಗಲಿದೆ. ಈಗಾಗಲೇ ಸಿಎಂ, ಪಂಜಾಬ್​ನಲ್ಲಿ ಬಡವರ ಬಾಕಿ ಇರುವ ವಿದ್ಯುತ್, ನೀರಿನ ಬಿಲ್ ಅನ್ನು ಮನ್ನಾ ಮಾಡಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್ ಸಿಎಂ ಚನ್ನಿಗೆ ಇರುವ ಸವಾಲುಗಳು
ಆದರೆ, ಸಿಎಂ ಚರಣ್​ಜಿತ್ ಸಿಂಗ್ ಚನ್ನಿಗೆ ಇರುವ ಅತಿ ದೊಡ್ಡ ತೊಡಕು ಅಂದರೆ, ಸಮಯ. ಐದು ತಿಂಗಳ ಕಡಿಮೆ ಅವಧಿಯಲ್ಲಿ ಏನ್ನನ್ನೂ ಕೂಡ ಮಾಡಲಾಗಲ್ಲ. ಯಾವುದೇ ದೊಡ್ಡ ಬದಲಾವಣೆ ತರಲಾಗಲ್ಲ. ಸಿಎಂ ಆಗಿ ಏನು ಮಾಡಬೇಕು ಎಂದು ಚನ್ನಿ ತಿಳಿದುಕೊಳ್ಳುವಷ್ಟರಲ್ಲಿ ಸಮಯ ಮುಗಿದು ಹೋಗಿರುತ್ತೆ ಎಂದು ಅಕಾಲಿದಳ ಪಕ್ಷದ ನಾಯಕರು ಹೇಳುತ್ತಾರೆ.

ಚರಣ್​​ಜಿತ್ ಸಿಂಗ್ ಚನ್ನಿಗೆ ಇರುವ ಮತ್ತೊಂದು ಸವಾಲು ಅಂದರೆ, ಇಡೀ ರಾಜ್ಯದಾದ್ಯಂತ ಜನರು ತಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುವುದು. ಪಂಜಾಬ್​ನಲ್ಲಿ ಶೇ.19 ರಷ್ಟು ಜಾಟ್ ಸಿಖ್ ಸಮುದಾಯದ ಜನಸಂಖ್ಯೆ ಇದೆ. ಈ ಸಮುದಾಯವು ದಲಿತ ಸಿಖ್ ಸಿಎಂ ಆಗಿದ್ದನ್ನು ಸುಲಭವಾಗಿ ಒಪ್ಪಿಕೊಳ್ಳಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೇ ಜಾಟ್ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರು. ಉಳಿದ ಸಮುದಾಯಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ಜಾತಿ ಲೆಕ್ಕಾಚಾರ ಚನ್ನಿ ಪರ ಇಲ್ಲ. ನವಜೋತ್ ಸಿಂಗ್ ಸಿಧು, ಚನ್ನಿ ಇಬ್ಬರು ಪಂಜಾಬ್‌ನ ಮಾಲ್ವಾ ಪ್ರಾಂತ್ಯದಿಂದ ಬಂದವರು. ಇಬ್ಬರು ಡೆಪ್ಯುಟಿ ಸಿಎಂಗಳು ಮಾಜಾ ಪ್ರಾಂತ್ಯದಿಂದ ಬಂದವರು. ಪಂಜಾಬ್‌ನ ದೋಬಾ ಪ್ರಾಂತ್ಯಕ್ಕೆ ಪ್ರಮುಖ ಹುದ್ದೆಗಳಲ್ಲಿ ಪ್ರಾತಿನಿಧ್ಯತೆ ಸಿಕ್ಕಿಲ್ಲ. ಆದರೆ, ಕ್ಯಾಬಿನೆಟ್ ರಚನೆ ವೇಳೆ ದೋಬಾ ಪ್ರಾಂತ್ಯಕ್ಕೆ ಪ್ರಾತಿನಿಧ್ಯ ಸಿಗಬಹುದು.

ಸಿಎಂ ಚರಣ್​ಜಿತ್ ಸಿಂಗ್ ಚನ್ನಿಗೆ ದುಷ್ಮನ್ ಕಹಾ ಹೇ ಅಂದ್ರೆ, ಬಗಲ್ ಮೇ ಹೇ ಎನ್ನುವಂತೆ ಪಕ್ಕದಲ್ಲೇ ಸಿಎಂ ಹುದ್ದೆಯ ಆಕಾಂಕ್ಷಿ ನವಜೋತ್ ಸಿಂಗ್ ಸಿಧು ಇದ್ದಾರೆ. ಈಗಾಗಲೇ ಸಿಧು ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿರುವ ಮಾತು. ಇದನ್ನೇ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖಡ್ ರಾಹುಲ್, ಪ್ರಿಯಾಂಕಾ ಗಮನಕ್ಕೆ ತಂದಿದ್ದಾರೆ. ನವಜೋತ್ ಸಿಂಗ್ ಸಿಧು, ಜಾಟ್ ಸಿಖ್ ಸಮುದಾಯದ ಮತ್ತೊಬ್ಬ ನಾಯಕ ಸುಖೀಂದರ್ ರಾಂಧ್ವಾರನ್ನು ಸಿಎಂ ಆಗಿ ನೇಮಕ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಚನ್ನಿ, ತಮ್ಮ ಮಾತು ಹಾಗೂ ಕೃತಿಯ ಮೂಲಕ ಸಿಧುಗೆ ಚೆಕ್ ಮೇಟ್ ಇಟ್ಟಿದ್ದಾರೆ!
ಪ್ರಬಲ ನಾಯಕ ಸುಖೀಂದರ್ ರಾಂಧ್ವಾ, ಸಿಎಂ ಹುದ್ದೆಗೇರಿದರೆ, 2022 ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಮುಂದೆ ತಾವು ಸಿಎಂ ಆಗಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ನವಜೋತ್ ಸಿಂಗ್ ಸಿಧುರದ್ದು. ಹೀಗಾಗಿ ಒಂದು ಕಾಲದಲ್ಲಿ ತಮ್ಮ ಪಿಎ ಆಗಿದ್ದ ಶಾಸಕ ಅಮರ್ ಸಿಂಗ್​ರನ್ನು ಸಿಎಂ ಆಗಿ ಆಯ್ಕೆ ಮಾಡಬೇಕೆಂದು ಸಿಧು ಬಯಸಿದ್ದರು. ಬಳಿಕ ರಾಜೀ ಅಭ್ಯರ್ಥಿಯಾಗಿ ಮನಪ್ರೀತ್ ಬಾದಲ್, ಸಿಎಂ ಹುದ್ದೆಗೆ ಚರಣ್​ಜಿತ್ ಸಿಂಗ್ ಚನ್ನಿ ಹೆಸರು ಸೂಚಿಸಿದ್ದರು. ಇದಕ್ಕೆ ಸಿಧು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಈಗ ಚನ್ನಿ, ತಮ್ಮ ಮಾತು ಹಾಗೂ ಕೃತಿಯ ಮೂಲಕ ಸಿಧುಗೆ ಚೆಕ್ ಮೇಟ್ ಇಟ್ಟಿದ್ದಾರೆ. ಚನ್ನಿಗೂ ರಾಹುಲ್ ಗಾಂಧಿ ಜೊತೆಗೆ ಉತ್ತಮ ಬಾಂಧವ್ಯ ಇದೆ. ಕಾಂಗ್ರೆಸ್ ಪಕ್ಷಕ್ಕೂ ದಲಿತ ಸಿಎಂ ನೀಡಿದ ಸಂದೇಶವನ್ನು ರಾಷ್ಟ್ರ ಮಟ್ಟದಲ್ಲಿ ರವಾನಿಸಿದ ತೃಪ್ತಿ ಇದೆ. ಹೀಗಾಗಿ 2022ರಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಬಹುಮತ ಗಳಿಸಿದರೆ, ಚರಣ್​ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಹುದ್ದೆಯಿಂದ ದೂರ ಇಡುವುದು ಕಷ್ಟ.

ವಿಶೇಷ ವರದಿ: ಎಸ್. ಚಂದ್ರಮೋಹನ್, ನ್ಯಾಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: Punjab Cabinet: ಪಂಜಾಬ್​ನಲ್ಲಿ ನಾಳೆ ಸಂಜೆ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ; ಅಮರೀಂದರ್ ಬಣದ ಐವರಿಗೆ ಗೇಟ್​ಪಾಸ್​

ಇದನ್ನೂ ಓದಿ: Charanjit Singh Channi ನಾನೊಬ್ಬ ಸಾಮಾನ್ಯ ಮನುಷ್ಯ, ರೈತರ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಛನ್ನಿ

Published On - 7:32 pm, Sat, 25 September 21