ಚಂಡೀಗಢ: ಹಣದ ವಿಚಾರಕ್ಕೆ ಗಂಡನೊಂದಿಗೆ ಜಗಳವಾಡಿಕೊಂಡ ಮಹಿಳೆಯೊಬ್ಬಳು ಕೋಪದಿಂದ ತನ್ನ ಮಗನನ್ನು ಕಾಲುವೆಗೆ ಎಸೆದಿರುವ ಘಟನೆ ಪಂಜಾಬ್‌ನ (Punjab) ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ತನ್ನ ಮಗನನ್ನು ಕಾಲುವೆಗೆ ಎಸೆದಿದ್ದ ಆ ಮಹಿಳೆಯನ್ನು ಬಂಧಿಸಲಾಗಿದೆ. ಈ ಘಟನೆ ಸಂಭವಿಸಿದ ಉಚ್ಚಿ ಬಸ್ಸಿ ಕಾಲುವೆಯ ಸೇತುವೆ ಬಳಿ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಇದಕ್ಕೂ ಮೊದಲು ಕೂಡ ಸಾಕಷ್ಟು ಬಾರಿ ಆ ಮಹಿಳೆ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವುದಾಗಿ (Murder) ಗಂಡನಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ.
ರೀನಾ ಕುಮಾರಿ ಮತ್ತು ರವಿ ಕುಮಾರ್ 2012ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 10 ವರ್ಷದ ಮಗಳು ಮತ್ತು 8 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ ಆ ಮಹಿಳೆ ಆಗಾಗ ಪತಿಯೊಂದಿಗೆ ಜಗಳವಾಡುತ್ತಿದ್ದಳು. ತಮ್ಮ ಮಕ್ಕಳನ್ನು ಕಾಲುವೆಗೆ ಎಸೆಯುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅವರ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ. ಅವರು ಹಣಕಾಸಿನ ವಿಷಯದಲ್ಲಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: Riya Kumari: ಮಧ್ಯ ದಾರಿಯಲ್ಲಿ ನಟಿ ರಿಯಾ ಹತ್ಯೆ; ಗಂಡನ ಹೇಳಿಕೆ ಮೇಲೆ ಪೊಲೀಸರಿಗೆ ಮೂಡಿದೆ ಅನುಮಾನ
ಪತಿ ಇತ್ತೀಚೆಗೆ ಕೆಲಸ ಹುಡುಕಿಕೊಂಡು ಮಾಲ್ಡೀವ್ಸ್‌ಗೆ ತೆರಳಿದ್ದರಿಂದ ರೀನಾ ಕುಮಾರಿ ಮಕ್ಕಳೊಂದಿಗೆ ಉಳಿದುಕೊಂಡಿದ್ದಳು. ಆದರೂ ರವಿಕುಮಾರ್ಗೆ ಹಣ ಕಳುಹಿಸುವಂತೆ ಆಕೆ ಫೋನ್ ಮಾಡಿ ಜಗಳವಾಡಿದ್ದಳು. ಈ ಸಮಯದಲ್ಲಿ ಆಕೆ ತನ್ನ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ವರದಿಗಳು ತಿಳಿಸಿವೆ.
ಕ್ರಿಸ್‌ಮಸ್ ರಾತ್ರಿಯಂದು ಆ ದಂಪತಿಗಳು ಫೋನ್‌ನಲ್ಲಿ ಜಗಳವಾಡಿದ್ದರು. ಸೋಮವಾರ ರವಿಕುಮಾರ್ ತನ್ನ ತಂದೆಗೆ ಫೋನ್ ಮಾಡಿ ತನ್ನ ಹೆಂಡತಿ ತನ್ನ ಮಗ ಅಭಿಯೊಂದಿಗೆ ಉಚ್ಚಿ ಬಸ್ಸಿ ಕಾಲುವೆಗೆ ಹೊರಟಿದ್ದಾಳೆ ಎಂದು ತಿಳಿಸಿದ್ದ. ಆಕೆ ತನ್ನ ಮಕ್ಕಳನ್ನು ನೀರಿನಲ್ಲಿ ಮುಳುಗಿಸುವುದಾಗಿ ಬೆದರಿಕೆಯನ್ನು ಹಾಕಿದ್ದಾಳೆಂದು ಹೇಳಿದ್ದ. ಕೊನೆಗೆ ರವಿಕುಮಾರ್ ಹಾಗೂ ಆತನ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದಾಗ ಕಾಲುವೆಗೆ ಹೋಗುವ ಮಾರ್ಗದಲ್ಲಿ, ಲ್ಯಾಮಿನಾ ಗ್ರಾಮದ ಬಳಿ ಕಾಲುವೆಯ ದಡದಲ್ಲಿ ಮಹಿಳೆ ಮತ್ತು ಮಗು ಕುಳಿತಿರುವುದನ್ನು ಕೆಲವರು ಕಂಡು ತಂದೆ ಮತ್ತು ಮಗನಿಗೆ ಮಾಹಿತಿ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ವಿಷಯ ತಿಳಿದು ರವಿಕುಮಾರ್ ಮನೆಯವರು ಆಕೆ ಇದ್ದಲ್ಲಿಗೆ ಬರುವಾಗ ಆಕೆ ಕೋಪದಿಂದ ಅವರ ಎದುರಲ್ಲೇ ತನ್ನ ಮಗನನ್ನು ಕಾಲುವೆಗೆ ಎಸೆದು ಸ್ಥಳದಿಂದ ಓಡಿಹೋಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನನ್ನು ಕಾಪಾಡುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆದರೆ, ಆತನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಮಂಗಳವಾರ ರೀನಾ ಕುಮಾರಿಯನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.