ಅತ್ತೆ-ಮಾವನ ಕಾಟ ತಾಳಲಾರದೆ 3 ತಿಂಗಳ ಹೆಣ್ಣು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ!
ಆಗಸ್ಟ್‌ನಲ್ಲಿ ಮುಂಬೈನ ಮಹಿಳೆ ಎರಡನೇ ಬಾರಿಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇದರಿಂದ ಮನೆಯವರೆಲ್ಲರೂ ಆಕೆಯ ಮೇಲೆ ಕೋಪಗೊಂಡಿದ್ದರು. ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದರು.
ಮುಂಬೈ: ಹೆಣ್ಣು ಮಗುವನ್ನು ಹೆತ್ತಿದ್ದೇಕೆ? ಎಂದು ದಿನವೂ ಮನೆಯಲ್ಲಿ ಗಂಡ, ಅತ್ತೆ-ಮಾವ ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ 3 ತಿಂಗಳ ಹೆಣ್ಣು ಮಗುವನ್ನು ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಮುಂಬೈನ ಕಲಾಚೌಕಿ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಮನೆಯವರ ಕಿರುಕುಳ ತಾಳಲಾರದೆ ತಾನು ಹೆತ್ತ ಹೆಣ್ಣು ಮಗುವನ್ನು ತಾನೇ ಕೊಲೆ ಮಾಡಿದ್ದಾರೆ.
ಆರಂಭದಲ್ಲಿ ತನ್ನ 3 ತಿಂಗಳ ಮಗುವನ್ನು ಯಾರೋ ಮಹಿಳೆ ಅಪಹರಿಸಿದ್ದಾರೆ ಎಂದು 36 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ನನಗೆ ನಿದ್ರೆ ಬರುವ ಔಷಧಿ ನೀಡಿ ಮಹಿಳೆಯೊಬ್ಬರು ನನ್ನ ಮಗುವನ್ನು ಅಪಹರಿಸಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಆ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಶಂಕಿತ ರೇಖಾಚಿತ್ರವನ್ನು ತಾಯಿಗೆ ನೀಡಿದ್ದರು.
ಅಪಹರಣ ನಡೆದಿದೆ ಎನ್ನಲಾದ ಸ್ಥಳದಲ್ಲೇ ತಂಡಗಳನ್ನು ರಚಿಸಿ ತಪಾಸಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಹೆಚ್ಚಿನ ವಿಚಾರಣೆ ವೇಳೆ ಆ ಮಹಿಳೆ ತನ್ನ ಮಗುವನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಮಗುವನ್ನು ಮನೆಯ ಮೇಲಿನ ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿರುವುದಾಗಿ ಹೇಳಿದ್ದಾರೆ.
ಆ ಮಹಿಳೆ 2011ರಲ್ಲಿ ಮದುವೆಯಾಗಿದ್ದು, 2013ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಕಳೆದ ವರ್ಷ ಆಕೆ ಎರಡನೇ ಬಾರಿಗೆ ಗರ್ಭಿಣಿಯಾದಾಗ ಆಕೆಯ ಅತ್ತೆ ಮಾವಂದಿರು ಮಗುವಿನ ಲಿಂಗವನ್ನು ಪತ್ತೆ ಹಚ್ಚಲು ಮಾಟ-ಮಂತ್ರ ಮಾಡಿದ್ದರು. ಆಕೆಯ ಹೊಟ್ಟೆಯಲ್ಲಿ ಮತ್ತೆ ಹೆಣ್ಣು ಮಗುವೇ ಇದೆ ಎಂಬುದು ಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿಂದೆಯೂ ಆಕೆಗೆ ಇದೇ ಕಾರಣಕ್ಕೆ ಗರ್ಭಪಾತ ಮಾಡಿಸಲಾಗಿತ್ತು.
ಆದರೆ, ಈ ಬಾರಿ ಆಕೆ ಗರ್ಭಪಾತ ಮಾಡಿಸಿಕೊಳ್ಳದೆ ಮಗುವಿಗೆ ಜನ್ಮ ನೀಡಿದ್ದರು. ಆಗಸ್ಟ್‌ನಲ್ಲಿ ಆಕೆ ಮತ್ತೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇದರಿಂದ ಮನೆಯವರೆಲ್ಲರೂ ಆಕೆಯ ಮೇಲೆ ಕೋಪಗೊಂಡಿದ್ದರು. ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದರು. ತನ್ನ ತಂದೆ-ತಾಯಿಯ ಜೊತೆ ವಾಸ ಮಾಡುತ್ತಿದ್ದ ಆಕೆ ತನ್ನ ಮನೆಯವರ ಕಿರುಕುಳದಿಂದ ಬೇಸತ್ತಿದ್ದರು. ಗಂಡನ ಮನೆಯವರ ಕಾಟ ತಾಳಲಾರದೆ ಆಕೆ 3 ತಿಂಗಳ ಹೆಣ್ಣು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಗುಬ್ಬಿ: ಪ್ರೀತಿಸಿ ಮದುವೆಯಾದಗಿದ್ದ ಪತ್ನಿಯನ್ನೆ ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ