Crime News: ಎಸಿಬಿ ಬಲೆಗೆ ಗ್ರಾಮಲೆಕ್ಕಾಧಿಕಾರಿ, ತುಮಕೂರು ಜೈಲಿನ ಮೇಲೆ ಪೊಲೀಸರ ದಾಳಿ, ಸೇನೆಗೆ ಸೇರಲು ದಾಖಲೆ ತಿದ್ದುಪಡಿ
ಮನೆ ಹಾನಿಗೆ ಪರಿಹಾರ ನೀಡಲು ಆರೋಪಿಯು ₹ 15,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎಂಬ ಆರೋಪ ಕೇಳಿ ಬಂದಿದೆ.

ಧಾರವಾಡ: ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತನಿಗೆ ಪರಿಹಾರ ಒದಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ನವಲಗುಂದ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪ್ರದೀಪ ಬಸವಂತಕರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿ. 2020ರ ಸೆಪ್ಟೆಂಬರ್‌ನಲ್ಲಿ ಮಳೆಯಿಂದಾಗಿ ಮಾಳಿ ಕುಟುಂಬ ಮನೆ ಕಳೆದುಕೊಂಡಿತ್ತು. ಈ ವೇಳೆ ಮನೆ ಹಾನಿ ಪರಿಹಾರ ಸಂಬಂಧ ₹ 15,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ₹ 5 ಸಾವಿರ ಮುಂಗಡ ಪಡೆದಿದ್ದ ಆರೋಪಿ, ನವಲಗುಂದ ಕಚೇರಿಯಲ್ಲಿಯೇ ₹ 10,000 ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದರು.
ತುಮಕೂರು ಕಾರಾಗೃಹದ ಮೇಲೆ ಪೊಲೀಸರ ದಾಳಿ ಜೈಲಿನಲ್ಲಿದ್ದ ಕೈದಿಗಳಿಗೆ ಮೊಬೈಲ್, ಬೀಡಿ, ಸಿಗರೇಟು ಮತ್ತು ತಂಬಾಕು ಪೂರೈಕೆ ಮಾಡುತ್ತಿರುವ ಶಂಕೆ ಹಿನ್ನೆಲೆಯಲ್ಲಿ ತುಮಕೂರು ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತುಮಕೂರು ಹೊರವಲಯದ ಊರುಕೆರೆ ಬಳಿಯಿರುವ ಜೈಲಿನ ಮೇಲೆ ಎಎಸ್ಪಿ ಉದೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪರಾರಿಯಾಗಿದ್ದ ಆರೋಪಿ ಬಂಧನ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಪೊಲೀಸರಿಂದ ಪರಾರಿಯಾಗಿದ್ದ ಆರೋಪಿಯನ್ನು 3 ವರ್ಷಗಳ ನಂತರ ಬಳ್ಳಾರಿಯಲ್ಲಿ ಬಂಧಿಸಲಾಗಿದೆ. ಚಾಮರಾಜನಗರದ ಗಾಳಿಪುರ ಬಡಾವಣೆ ರಫೀಕ್ ಬಂಧಿತ ಆರೋಪಿ. ಈತನ ವಿರುದ್ಧ ಮೈಸೂರು, ಚಾಮರಾಜನಗರದ ವಿವಿಧ ಠಾಣೆಗಳಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು. ಮನೆಗಳ್ಳತನ, ರಾಬರಿ ಸೇರಿದಂತೆ ಹಲವು ಕೇಸ್ಗಳಲ್ಲಿ ಈತ ಭಾಗಿಯಾಗಿದ್ದ. ರಫೀಕ್ನನ್ನು ಬಂಧಿಸಲು ಎಸ್ಪಿ ದಿವ್ಯಾ ಸಾರಾ ಥಾಮಸ್ ವಿಶೇಷ ತಂಡ ರಚಿಸಿದ್ದರು. ಬಳ್ಳಾರಿಯಲ್ಲಿ ರಸ್ತೆಬದಿಯಲ್ಲಿ ಪರೋಟ ಮಾರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೇನೆಗೆ ಸೇರಲು ದಾಖಲೆ ತಿದ್ದುಪಡಿ: 9 ಮಂದಿ ಬಂಧನ ಸೇನೆಗೆ ಸೇರಲು ದಾಖಲೆ ತಿದ್ದುಪಡಿ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರೂ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ಅಂಕಲೇಶ್, ರಾಮಾಂಜನಿ ಮತ್ತು ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಮನೋಜ್, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್ ಬಂಧಿತರು. ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಇವರು ಸೃಷ್ಟಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯದ ಜನರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳನ್ನು ತಿದ್ದುತ್ತಿದ್ದರು. ಫೋರ್ಜರಿ ದಾಖಲೆಗಳನ್ನು ಐದಾರು ಲಕ್ಷ ರೂಪಾಯಿಗೆ ಮಾರಿಕೊಳ್ಳುತ್ತಿದ್ದರು.ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಕೋರಿಕೆ ಬಂದಾಗ ಈ ಪ್ರಕರಣ ಬಯಲಿಗೆ ಬಂದಿದೆ. ಇದೇ ರೀತಿ ಫೋರ್ಜರಿ ದಾಖಲೆಗಳನ್ನು ನೀಡಿ ಹಲವರು ಸೇನೆಗೆ ಸೇರಿರಬಹುದು ಎಂದು ಹೇಳಲಾಗಿದೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Crime News: ಪ್ರೇಯಸಿಯ ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬಿಸಾಡಿದ ವ್ಯಕ್ತಿ ಇದನ್ನೂ ಓದಿ: Crime Update: ಪೊಲೀಸರ ಎದುರೇ ಗುಂಪು ಘರ್ಷಣೆ, ಪೊಲೀಸರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದವ ಸೆರೆ, ನಾಲ್ಕು ಮನೆಗಳಲ್ಲಿ ಕಳ್ಳತನ