
ನವದೆಹಲಿ, ಡಿಸೆಂಬರ್ 4: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) 4 ವರ್ಷಗಳ ಬಳಿಕ ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿರ್ಣಾಯಕ ಸಭೆಗಳನ್ನು ನಡೆಸಲಿದ್ದಾರೆ ಮತ್ತು ನವದೆಹಲಿಯೊಂದಿಗಿನ ಎಂಟು ದಶಕಗಳ ಸಂಬಂಧಗಳನ್ನು ವಿಸ್ತರಿಸಲಿದ್ದಾರೆ. ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಸಂಬಂಧಗಳಲ್ಲಿ ಹೊಸ ಹಂತವನ್ನು ಗುರುತಿಸಲಿದೆ.
ಪುಟಿನ್ ಎರಡು ದಿನಗಳ ಭೇಟಿಗಾಗಿ ಇಂದು ದೆಹಲಿಗೆ ಆಗಮಿಸಲಿದ್ದಾರೆ. ಪುಟಿನ್ ಅವರ ವಿವರವಾದ ಪ್ರಯಾಣದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಪುಟಿನ್ ಅವರು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಐಟಿಸಿ ಮೌರ್ಯದಲ್ಲಿ ತಂಗಲಿದ್ದಾರೆ. ಇದು ಇದುವರೆಗೂ ಅನೇಕ ಜಾಗತಿಕ ನಾಯಕರ ವಾಸ್ತವ್ಯಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ- ಪುಟಿನ್ ಗೆಳೆತನ 25 ವರ್ಷಕ್ಕೂ ಹಿಂದಿನದು; ವಾಜಪೇಯಿ ಜೊತೆಗಿನ ಫೋಟೋ ಮತ್ತೆ ವೈರಲ್
ರಷ್ಯಾ ಅಧ್ಯಕ್ಷರ ಭಾರತ ಭೇಟಿಯ ವೇಳಾಪಟ್ಟಿ:
ಮೂಲಗಳ ಪ್ರಕಾರ, ರಷ್ಯಾದ ಅಧ್ಯಕ್ಷ ಪುಟಿನ್ ಇಂದು ಸಂಜೆ 6.30ಕ್ಕೆ ಭಾರತಕ್ಕೆ ಆಗಮಿಸಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಪುಟಿನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಅವರ ಗೌರವಾರ್ಥವಾಗಿ ಇಂದು ರಾತ್ರಿ ಆಯೋಜಿಸಲಾದ ಖಾಸಗಿ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪುಟಿನ್ ಭೇಟಿ ಮಾಡಲಿದ್ದಾರೆ.
ನಾಳೆ (ಡಿಸೆಂಬರ್ 5) ಪುಟಿನ್ ಮೊದಲು ರಾಜ್‌ಘಾಟ್ ಮತ್ತು ನಂತರ ಹೈದರಾಬಾದ್ ಹೌಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ. ಈ ಸಭೆಯ ನಂತರ ಮೋದಿ ಹಾಗೂ ಪುಟಿನ್ ಜಂಟಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆಯನ್ನು ನೀಡಲಿದ್ದಾರೆ. ಇದರ ನಂತರ, ಪುಟಿನ್ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಪುಟಿನ್ ರಷ್ಯಾದ ಸರ್ಕಾರಿ ಸ್ವಾಮ್ಯದ ಪ್ರಸಾರಕ ಆರ್‌ಟಿ ಟಿವಿಯ ಹೊಸ ಭಾರತ ಚಾನೆಲ್ ಅನ್ನು ಕೂಡ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಪುಟಿನ್ ತಂಗಲಿರುವ ಹೋಟೆಲ್ ರೂಂ ಬಾಡಿಗೆ ಕೇಳಿದರೆ ಶಾಕ್ ಆಗುತ್ತೀರಿ!
ಫೆಬ್ರವರಿ 2022ರಲ್ಲಿ ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಅಧ್ಯಕ್ಷ ಪುಟಿನ್ ಅವರ ಭಾರತಕ್ಕೆ ಇದು ಮೊದಲ ಅಧಿಕೃತ ಪ್ರವಾಸವಾಗಿದೆ. ಪುಟಿನ್ ಕೊನೆಯ ಬಾರಿಗೆ ಭಾರತಕ್ಕೆ 2021ರ ಡಿಸೆಂಬರ್‌ನಲ್ಲಿ ಭೇಟಿ ನೀಡಿದ್ದರು. ರಷ್ಯಾದ ಅಧ್ಯಕ್ಷರ ಭಾರತ ಭೇಟಿಯ ಸಮಯದಲ್ಲಿ ವ್ಯಾಪಾರ, ಆರ್ಥಿಕತೆ, ಆರೋಗ್ಯ ರಕ್ಷಣೆ, ಶೈಕ್ಷಣಿಕ, ಸಂಸ್ಕೃತಿ ಮತ್ತು ಮಾಧ್ಯಮದಂತಹ ಕ್ಷೇತ್ರಗಳನ್ನು ಒಳಗೊಂಡ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ