ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗೆ ಶಿಕ್ಷೆ ಕಡಿತಗೊಳಿಸಿದ ಕತಾರ್
ಕತಾರ್‌ನ ನ್ಯಾಯಾಲಯವು ಒಂದು ವರ್ಷದಿಂದ ದೇಶದಲ್ಲಿ ಬಂಧಿತರಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯಲ್ಲಿ ಕಡಿತ ಮಾಡಲು ನಿರ್ಧರಿಸಿದೆ. ಭಾರತ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯವು ಸ್ವೀಕರಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.

ದೆಹಲಿ ಡಿಸೆಂಬರ್ 28: ಗೂಢಚರ್ಯೆ (espionage) ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎಂಟು ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ನೀಡಲಾಗಿದ್ದ ಶಿಕ್ಷೆಯನ್ನು ಕತಾರ್ (Qatar) ನ್ಯಾಯಾಲಯ ಗುರುವಾರ ಕಡಿತಗೊಳಿಸಿದೆ. ನೌಕಾಪಡೆಯ ಯೋಧರಿಗೆ ಮರಣದಂಡನೆ (death row)ವಿಧಿಸಿದ ವಿರುದ್ಧ ಭಾರತ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯವು ಸ್ವೀಕರಿಸಿದ ವಾರಗಳ ನಂತರ ಈ ಬೆಳವಣಿಗೆಯಾಗಿದೆ.
ತೀರ್ಪನ್ನು ಇನ್ನೂ ಬಿಡುಗಡೆ ಮಾಡದ ಕಾರಣ ಕಡಿಮೆಯಾದ ನಿಯಮಗಳ ಬಗ್ಗೆ ಹೆಚ್ಚಿನ ವಿವರಗಳು ಸದ್ಯ ಲಭ್ಯವಾಗಿಲ್ಲ. ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಭಾರತ ಸರ್ಕಾರ ಹೇಳಿದೆ. “ನಾವು ಮೊದಲಿನಿಂದಲೂ ಅವರ ಬೆಂಬಲಕ್ಕೆ ನಿಂತಿದ್ದೇವೆ. ನಾವು ಎಲ್ಲಾ ದೂತಾವಾಸ ಮತ್ತು ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ. ನಾವು ಕತಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಮುಂದುವರಿಸುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ.
ಬಂಧಿತ ಭಾರತೀಯರನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ .ಎಲ್ಲರೂ ಭಾರತೀಯ ನೌಕಾಪಡೆಯ ಮಾಜಿ ಉದ್ಯೋಗಿಗಳಾಗಿದ್ದಾರೆ. ಭಾರತೀಯ ನೌಕಾಪಡೆಯಲ್ಲಿ (Indian Navy) ಮುಂಚೂಣಿಯ ಯುದ್ಧನೌಕೆಗಳಿಗೆ ಕಮಾಂಡರ್ ಆಗಿದ್ದ ಅಧಿಕಾರಿಗಳು ಸೇರಿದಂತೆ ಎಂಟು ಮಂದಿಗೆ ಕತಾರ್‌ನ ಫಸ್ಟ್ ಇನ್‌ಸ್ಟಾನ್ಸ್ ನ್ಯಾಯಾಲಯವು ಅಕ್ಟೋಬರ್ 26 ರಂದು ಮರಣದಂಡನೆ ವಿಧಿಸಿತ್ತು.
ಇದನ್ನೂ ಓದಿ:ಅಂದು ಕಾಂಗ್ರೆಸ್ ಪಕ್ಷದ ಮುಂದೆ ವಿಪಕ್ಷಗಳೇ ಇರಲಿಲ್ಲ, ಇಂದು ವಿಪಕ್ಷ ಸ್ಥಾನವೂ ಸಿಗಲಿಲ್ಲ
ಭಾರತೀಯ ಪ್ರಜೆಗಳಾದ ದೋಹಾ ಮೂಲದ ದಹ್ರಾ ಗ್ಲೋಬಲ್‌ನ ಎಲ್ಲಾ ಉದ್ಯೋಗಿಗಳನ್ನು ಆಗಸ್ಟ್ 2022 ರಲ್ಲಿ ಬಂಧಿಸಲಾಯಿತು. ಕಳೆದ ವರ್ಷ ಅವರ ಬಂಧನದ ನಂತರ, ಮಾಜಿ ನೌಕಾಪಡೆಯ ಸಿಬ್ಬಂದಿ ಕತಾರಿ ಅಧಿಕಾರಿಗಳಿಂದ ಸ್ವಲ್ಪ ಸಡಿಲಿಕೆ ಪಡೆದಿದ್ದು, ಅವರನ್ನು ಏಕಾಂತ ಬಂಧನದಿಂದ ಸ್ಥಳಾಂತರಿಸಲಾಯಿತು ಮತ್ತು ಅವರ ಸಹೋದ್ಯೋಗಿಗಳೊಂದಿಗೆ ಜೈಲು ವಾರ್ಡ್‌ನಲ್ಲಿ ಡಬಲ್ ಬೆಡ್‌ನಲ್ಲಿ ಇರಿಸಲಾಯಿತು.
ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ಎಂಟು ಸಿಬ್ಬಂದಿಯನ್ನು ಭಾರತದ ರಾಯಭಾರಿ ಭೇಟಿಯಾಗಿದ್ದಾರೆ ಎಂದು ಸರ್ಕಾರ ಡಿಸೆಂಬಂರ್ 7ರಂದು ತಿಳಿಸಿದೆ. ನಮ್ಮ ರಾಯಭಾರಿ ಡಿಸೆಂಬರ್ 3 ರಂದು ಜೈಲಿನಲ್ಲಿರುವ ಎಲ್ಲಾ ಎಂಟು ಜನರನ್ನು ಭೇಟಿಯಾಗಲು ಕಾನ್ಸುಲರ್ ಪ್ರವೇಶವನ್ನು ಪಡೆದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು. ಮರಣದಂಡನೆಯ ವಿರುದ್ಧ ಭಾರತದ ಮೇಲ್ಮನವಿ ಬಗ್ಗೆ ಮಾತನಾಡಿದ ಬಾಗ್ಚಿ, “ಇದುವರೆಗೆ ಎರಡು ವಿಚಾರಣೆಗಳು ನಡೆದಿವೆ (ಇವುಗಳು ನವೆಂಬರ್ 23 ಮತ್ತು ನವೆಂಬರ್ 30 ರಂದು ನಡೆದವು). ನಾವು ವಿಷಯವನ್ನು ಹತ್ತಿರದಿಂದ ಫಾಲೋ ಮಾಡುತ್ತಿದ್ದೇವೆ. ಎಲ್ಲಾ ಕಾನೂನು ಮತ್ತು ದೂತಾವಾಸದ ಸಹಾಯವನ್ನು ನೀಡುತ್ತಿದ್ದೇವೆ. ಇದು ಸೂಕ್ಷ್ಮ ಸಮಸ್ಯೆ. ಆದರೆ ನಾವು ಏನು ಮಾಡಬಹುದೋ ಅದನ್ನು ಮಾಡುತ್ತೇವೆ ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Thu, 28 December 23



