ದೆಹಲಿ: ತಮಿಳಿನಲ್ಲಿ ಕೇಳಿದ ಪ್ರಶ್ನೆಯು ಬುಧವಾರ ಲೋಕಸಭೆಯಲ್ಲಿ (Loksabha) ಪ್ರತಿಪಕ್ಷಗಳು ಮತ್ತು ಖಜಾನೆ ಪೀಠಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಇದೆಲ್ಲ ಆರಂಭವಾಗಿದ್ದು ಪ್ರಶ್ನೋತ್ತರ ವೇಳೆಯಲ್ಲಿ. ಡಿಎಂಕೆ ಸದಸ್ಯ ಎ ಗಣೇಶಮೂರ್ತಿ (A Ganeshamurthi ) ಅವರು ತಮಿಳಿನಲ್ಲಿ ಎಫ್‌ಡಿಐ ಒಳಹರಿವಿನ ಕುರಿತು ಪೂರಕ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಕ್ರಿಯಿಸಿದ ಕೇಂದ್ರ ಸಚಿವ ಪೀಯೂಷ್ ಗೋಯಲ್ (Piyush Goyal) ನನಗೆ ತಮಿಳಿನಲ್ಲಿ ಹೇಳಿದ ಮೊದಲ ಭಾಗ ಅರ್ಥವಾಗಿಲ್ಲ, ಅವರು ಯಾವ ಯೋಜನೆಯನ್ನು ಉಲ್ಲೇಖಿಸುತ್ತಿದ್ದಾರೆಂದು ತಿಳಿಯಲು ಬಯಸುತ್ತೇನೆ ಎಂದು ಹೇಳಿದರು. “ನಾವು ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರೆ, ಸಚಿವರು ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸಬೇಕು. ಸದಸ್ಯರೊಬ್ಬರು ತಮಿಳಿನಲ್ಲಿ ಪ್ರಶ್ನೆ ಕೇಳುತ್ತಾರೆ ಮತ್ತು ಸಚಿವರು ಹಿಂದಿಯಲ್ಲಿ ಉತ್ತರಿಸುತ್ತಾರೆ” ಎಂದು ಸದಸ್ಯರು ಟೀಕಿಸಿದರು. ನಾನು ಹಿಂದಿಯಲ್ಲಿ ಉತ್ತರಿಸಬಹುದು, ಸದಸ್ಯರಿಗೆ ಅನುವಾದ ಲಭ್ಯವಿರುತ್ತದೆ ಎಂದು ಗೋಯಲ್ ಹೇಳಿದ್ದಾರೆ. ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಚಿವರು ಹಿಂದಿಯಲ್ಲಿ ಉತ್ತರಿಸಿದ ವಿಷಯವನ್ನು ಪ್ರಸ್ತಾಪಿಸಲು ಕೆಲವು ವಿರೋಧ ಪಕ್ಷದ ಸದಸ್ಯರು ಗದ್ದಲವೆಬ್ಬಿಸಿದರು. ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ವಿರೋಧ ಪಕ್ಷದ ಸದಸ್ಯರು ಅದರಲ್ಲೂ ದಕ್ಷಿಣದ ರಾಜ್ಯಗಳ ಸದಸ್ಯರು ಇಂತಹ ಪ್ರವೃತ್ತಿಯ ವಿರುದ್ಧ ಪ್ರತಿಭಟಿಸಿದ ನಿದರ್ಶನಗಳಿವೆ. ಸ್ಪೀಕರ್ ಓಂ ಬಿರ್ಲಾ ಅವರು ಗಣೇಶಮೂರ್ತಿಯವರಿಗೆ ಪ್ರಶ್ನೆಯನ್ನು ಪುನರಾವರ್ತಿಸುವಂತೆ ಕೇಳಿದಾಗ ಅವರು ತಮಿಳಿನಲ್ಲಿ ಅದನ್ನೇ ಕೇಳಿದರು.
ಒಂದು ಭಾಷೆಯಲ್ಲಿ ಕೇಳಿದ ಪ್ರಶ್ನೆಗೆ ಅದೇ ಭಾಷೆಯಲ್ಲಿ ಉತ್ತರಿಸಬೇಕು ಎಂಬ ಯಾವುದೇ ನಿಯಮವಿದೆಯೇ ಎಂದು ಗೋಯಲ್ ಅಧ್ಯಕ್ಷರನ್ನು ಕೇಳಿದರು. ನಾನು ಹಿಂದಿಯಲ್ಲಿ ಉತ್ತರವನ್ನು ನೀಡುತ್ತೇನೆ. ತಮಿಳಿನಲ್ಲಿ ಕೇಳಲಾದ ಪ್ರಶ್ನೆಯ ಅನುವಾದವನ್ನು ನಾನು ಕೇಳಿದೆ ಎಂದು ಸಚಿವರು ಹೇಳಿದರು.
ಗಣೇಶಮೂರ್ತಿಯವರು ಮತ್ತೊಮ್ಮೆ ಸಮಸ್ಯೆಯನ್ನು ಎತ್ತಿದಾಗ, ಶ್ರೀ ಬಿರ್ಲಾ ಮುಗುಳ್ನಕ್ಕು ಸದಸ್ಯರಿಗೆ ಹೆಡ್‌ಫೋನ್ ಹಾಕಲು ಹೇಳಿದರು. ಸದನದಲ್ಲಿ ಸಾಮಾನ್ಯವಾಗಿ ಹಿಂದಿ ಮಾತನಾಡುವ ಬಿರ್ಲಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ, “ದಯವಿಟ್ಟು ಸದಸ್ಯರು ಅಧ್ಯಕ್ಷರನ್ನು ಉದ್ದೇಶಿಸಿ… ತೊಂದರೆ ಇಲ್ಲ” ಎಂದು ಹೇಳಿದರು.
ಎರಡನೇ ಪೂರಕ ಪ್ರಶ್ನೆ ಕೇಳುವ ಸರದಿ ಸದಸ್ಯರಿಗೆ ಬಂದಾಗ ತಮಿಳಿನಲ್ಲಿಯೇ ಕೇಳುತ್ತೇನೆ ಎಂದು ಪ್ರಶ್ನೆ ಎತ್ತಿದರು. ಇದಕ್ಕೆ ಗೋಯಲ್ ಹಿಂದಿಯಲ್ಲಿ ಉತ್ತರವನ್ನು ನೀಡಿದರು. ಕಳೆದ ವಾರ ಪಕ್ಷದ ಮಾಜಿ ಸಹೋದ್ಯೋಗಿಗಳಾಗಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್, ಸಚಿವರು ಹಿಂದಿಯಲ್ಲಿ ಇಂಗ್ಲಿಷ್ ಪ್ರಶ್ನೆಗಳಿಗೆ ಉತ್ತರಿಸಿದ ಬಗ್ಗೆ ಕಿಡಿಕಾರಿದರು.
ತಮಿಳುನಾಡಿನ ಸದಸ್ಯರು ಇಂಗ್ಲಿಷ್‌ನಲ್ಲಿ ಕೇಳಿದ ಪೂರಕ ಪ್ರಶ್ನೆಗಳಿಗೆ ನಾಗರಿಕ ವಿಮಾನಯಾನ ಸಚಿವರು ಹಿಂದಿಯಲ್ಲಿ ಉತ್ತರಿಸಿದರು. ಇದಾದ ನಂತರ, ಸಚಿವರು ಹಿಂದಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ಅವಮಾನ ಎಂದು ತರೂರ್ ಪ್ರತಿಕ್ರಿಯಿಸಿದರು.
ಸದಸ್ಯರು ಈ ರೀತಿ ಹೇಳಿಕೆ ನೀಡಿರುವುದು ವಿಚಿತ್ರವಾಗಿದೆ ಎಂದು ಸಿಂಧಿಯಾ ಪ್ರತಿಕ್ರಿಯಿಸಿದ್ದರು. ತರೂರ್ ಟೀಕೆ ಮಾಡಿದ ತಕ್ಷಣ, ಸ್ಪೀಕರ್ ಓಂ ಬಿರ್ಲಾ ಅವರು ಇದು ಅವಮಾನವಲ್ಲ ಎಂದರು.
Published On - 10:50 am, Thu, 10 February 22