2020ರಲ್ಲಿ ಅರುಣ್ ಜೇಟ್ಲಿಯಿಂದ ಬೆದರಿಕೆ ಬಂದಿತ್ತು; ಮತ್ತೆ ಸುಳ್ಳು ಹೇಳಿ ಮುಜುಗರಕ್ಕೀಡಾದ ರಾಹುಲ್ ಗಾಂಧಿ

ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಹೇಳಿಕೆಗಳನ್ನು ಬಿಜೆಪಿ "ನಕಲಿ ಸುದ್ದಿ" ಎಂದು ಟೀಕಿಸಿದೆ. ಅರುಣ್ ಜೇಟ್ಲಿ ಆಗಸ್ಟ್ 2019ರಲ್ಲಿ ನಿಧನರಾದರು. ಆದರೆ ರಾಹುಲ್ ಗಾಂಧಿ ತಮಗೆ ಅರುಣ್ ಜೇಟ್ಲಿ 2020ರಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರವು ಕೃಷಿ ಕಾನೂನುಗಳ ಕುರಿತು ತಮ್ಮನ್ನು ಬೆದರಿಸಲು 2020ರಲ್ಲಿ ಅರುಣ್ ಜೇಟ್ಲಿಯನ್ನು ಕಳುಹಿಸಿತ್ತು ಎಂದು ಹೇಳಿದ್ದಾರೆ.

2020ರಲ್ಲಿ ಅರುಣ್ ಜೇಟ್ಲಿಯಿಂದ ಬೆದರಿಕೆ ಬಂದಿತ್ತು; ಮತ್ತೆ ಸುಳ್ಳು ಹೇಳಿ ಮುಜುಗರಕ್ಕೀಡಾದ ರಾಹುಲ್ ಗಾಂಧಿ
Rahul Gandhi

Updated on: Aug 02, 2025 | 6:31 PM

ನವದೆಹಲಿ, ಆಗಸ್ಟ್ 2: ಪದೇಪದೆ ಸುಳ್ಳು ಆರೋಪಗಳನ್ನು ಮಾಡಿ ಮುಜುಗರಕ್ಕೀಡಾಗುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕ ದಿವಂಗತ ಅರುಣ್ ಜೇಟ್ಲಿ (Arun Jaitley) ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. “ನಾನು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾಗ ಏನಾಯಿತು ಎಂದು ನನಗೆ ಚೆನ್ನಾಗಿ ನೆನಪಿದೆ. ಈಗ ನಮ್ಮ ನಡುವೆ ಅರುಣ್ ಜೇಟ್ಲಿ ಬದುಕಿಲ್ಲ. ಆದ್ದರಿಂದ ನಾನು ನಿಜವಾಗಿಯೂ ಇದನ್ನು ಹೇಳಬಾರದು, ಆದರೆ ಅನಿವಾರ್ಯವಾಗಿ ನಾನು ಹೇಳುತ್ತಿದ್ದೇನೆ. ನಾವು ಪ್ರತಿಭಟನೆ ಮಾಡುವಾಗ ಕೇಂದ್ರ ಸರ್ಕಾರ ಆಗ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರನ್ನು ನನ್ನ ಬಳಿಗೆ ಕಳುಹಿಸಿ ಬೆದರಿಕೆ ಹಾಕಿಸಿತ್ತು” ಎಂದು ಆರೋಪಿಸಿದ್ದಾರೆ.

“ನೀವು ಇದೇ ರೀತಿ ಪ್ರತಿಭಟನೆಯ ಹಾದಿಯಲ್ಲಿ ಮುಂದುವರಿದರೆ, ಸರ್ಕಾರವನ್ನು ವಿರೋಧಿಸಿ ಕೃಷಿ ಕಾನೂನುಗಳ ಬಗ್ಗೆ ಹೋರಾಡಿದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಅರುಣ್ ಜೇಟ್ಲಿ ನನಗೆ ಬೆದರಿಕೆ ಹಾಕಿದ್ದರು. ಆಗ ನಾನು ಅವರಿಗೆ, “ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ ಎನಿಸುತ್ತದೆ. ನಾವು ಕಾಂಗ್ರೆಸ್​ನವರು, ನಾವು ಇಂತಹ ಬೆದರಿಕೆಗೆ ಹೆದರುವ ಹೇಡಿಗಳಲ್ಲ. ನಾವು ಎಂದಿಗೂ ನಿಮ್ಮ ಮುಂದೆ ತಲೆ ಬಾಗುವುದಿಲ್ಲ. ಅಂತಹ ಬ್ರಿಟಿಷರಿಗೇ ನಮ್ಮನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ, ನೀವೇನು ಮಹಾ? ಎಂದು ಹೇಳಿದ್ದೆ” ಎಂದಿದ್ದಾರೆ.

ಇದನ್ನೂ ಓದಿ: ಆಧಾರರಹಿತ ಹೇಳಿಕೆ; ರಾಹುಲ್ ಗಾಂಧಿಯ ಮತ ಕಳ್ಳತನದ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

ಆದರೆ, ಅವರ ಈ ಹೇಳಿಕೆ ಅವರಿಗೇ ತಿರುಗುಬಾಣವಾಗಿದೆ. ದೇಶಾದ್ಯಂತ ತೀವ್ರ ಚರ್ಚೆ ಮತ್ತು ವಿರೋಧಕ್ಕೀಡಾಗಿದ್ದ ಮೂರು ಕೃಷಿ ಕಾನೂನುಗಳಿಗೆ ಕೇಂದ್ರ ಸರ್ಕಾರವು ಜೂನ್ 2020ರಲ್ಲಿ ಸುಗ್ರೀವಾಜ್ಞೆಯಾಗಿ ತಂದಿತು. ಸೆಪ್ಟೆಂಬರ್ ವೇಳೆಗೆ ಅದನ್ನು ಸಂಸತ್​​ನಲ್ಲಿ ಅಂಗೀಕರಿಸಲಾಯಿತು. ಆ ವೇಳೆಗೆ ಅರುಣ್ ಜೇಟ್ಲಿ ದೀರ್ಘಕಾಲದ ಅನಾರೋಗ್ಯದಿಂದ ನವದೆಹಲಿಯ ಏಮ್ಸ್​(AIIMS)ನಲ್ಲಿ ನಿಧನರಾಗಿ ಸುಮಾರು 1 ವರ್ಷವಾಗಿತ್ತು. ಹಾಗಾದರೆ, 2019ರಲ್ಲೇ ಸಾವನ್ನಪ್ಪಿದ ಅರುಣ್ ಜೇಟ್ಲಿ 2020ರಲ್ಲಿ ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿಗೆ ಹೇಗೆ ಬೆದರಿಕೆ ಹಾಕಲು ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.


ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಅನ್ನು 2021ರ ನವೆಂಬರ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಗಳಲ್ಲಿ ಕೆಲವು ರೈತರು ನಡೆಸಿದ ಬೃಹತ್ ಪ್ರತಿಭಟನೆಗಳ ನಂತರ ರದ್ದುಗೊಳಿಸಲಾಯಿತು.


ಇದನ್ನೂ ಓದಿ: ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್​ಗೆ ಜೋಶಿ ಪ್ರಶ್ನೆ

ಕೃಷಿ ಕಾನೂನುಗಳ ಕಾಲಮಿತಿಯನ್ನು ರಾಹುಲ್ ಗಾಂಧಿಗೆ ನೆನಪಿಸಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲೇ ಅರುಣ್ ಜೇಟ್ಲಿ ನಿಧನರಾಗಿದ್ದರು. ಇಂತಹ “ಹೊಸ ಸುಳ್ಳಿಗೆ” ರಾಹುಲ್ ಗಾಂಧಿ ಅರುಣ್ ಜೇಟ್ಲಿ ಅವರ ಕುಟುಂಬಕ್ಕೆ ಹಾಗೂ ದೇಶದ ಜನರಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:28 pm, Sat, 2 August 25