ನವದೆಹಲಿ: ರೇಷನ್ ಕಾರ್ಡ್ ಇರುವ ಎಲ್ಲರಿಗೂ ರಾಷ್ಟ್ರಧ್ವಜ (National Flag) ಖರೀದಿಸುವಂತೆ ರೇಷನ್ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ. ಬಿಜೆಪಿಯು ಧ್ವಜದ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ, ಇದರಿಂದ ಬಡವರ ಆತ್ಮಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಬಗ್ಗೆ ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್ (Facebook Post) ಮಾಡಿರುವ ರಾಹುಲ್ ಗಾಂಧಿ ಭಾರತದ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯಾಗಿದೆ. ತ್ರಿವರ್ಣ ಧ್ವಜ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ.
“ರಾಷ್ಟ್ರೀಯತೆಯನ್ನು ಎಂದಿಗೂ ಮಾರಲು ಸಾಧ್ಯವಿಲ್ಲ. ರೇಷನ್ ನೀಡುವಾಗ ಬಡವರಿಂದ ತ್ರಿವರ್ಣ ಧ್ವಜಕ್ಕಾಗಿ 20 ರೂ. ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ತ್ರಿವರ್ಣ ಧ್ವಜದ ಜೊತೆಗೆ ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ” ಎಂದಿರುವ ರಾಹುಲ್ ಗಾಂಧಿ ಕೆಲವು ಪಡಿತರ ಚೀಟಿದಾರರು ತಮ್ಮ ಬಳಿ ರೇಷನ್ ಅಂಗಡಿಯವರು 20 ರೂ. ಕೊಟ್ಟು ಬಾವುಟ ಖರೀದಿಸಲು ಒತ್ತಾಯಿಸಿದ್ದಾರೆ ಎಂದು ದೂರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಪ್ರಯುಕ್ತ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ
ಇದಕ್ಕೂ ಮುನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಪಡಿತರ ಚೀಟಿದಾರರು ರೇಷನ್ ಪಡೆಯಲು ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ 75ನೇ ಆಚರಣೆಗಳು ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ ಎಂದಿದ್ದರು.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ವರುಣ್ ಗಾಂಧಿ, ತ್ರಿವರ್ಣ ಧ್ವಜಕ್ಕಾಗಿ ಬಡವರಿಗೆ ಹಣ ನೀಡುವಂತೆ ಒತ್ತಾಯಿಸುವುದು ಮತ್ತು ಅವರಿಗೆ ನೀಡಲಾಗುವ ಆಹಾರವನ್ನು ನಿರಾಕರಿಸುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರನ್ನು ನೇಮಿಸಿದ ಸರ್ಕಾರ
ಕೇಂದ್ರ ಸರ್ಕಾರವು ತನ್ನ ‘ಹರ್ ಘರ್ ತಿರಂಗ’ ಕಾರ್ಯಕ್ರಮದ ಭಾಗವಾಗಿ ಆಗಸ್ಟ್ 13ರಿಂದ 15ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಕರೆಯ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವವವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಬಿಜೆಪಿ ಅಭಿಯಾನ ನಡೆಸುತ್ತಿದೆ.
Published On - 10:08 am, Thu, 11 August 22