Jagdeep Dhankhar: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಇಂದು ಜಗದೀಪ್ ಧನಕರ್ ಪ್ರಮಾಣವಚನ ಸ್ವೀಕಾರ
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್ 10ರಂದು ಕೊನೆಯಾಯಿತು. ಹೀಗಾಗಿ, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ನವದೆಹಲಿ: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ (Jagdeep Dhankhar) ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (Venkaiah Naidu) ಅವರ ಅಧಿಕಾರಾವಧಿ ಆಗಸ್ಟ್ 10ರಂದು ಕೊನೆಯಾಯಿತು. ಹೀಗಾಗಿ, ಇಂದು ಜಗದೀಪ್ ಧನಕರ್ ಉಪರಾಷ್ಟ್ರಪತಿಯಾಗಿ (Vice President of India) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಭಾರತ ದೇಶದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವ ಅವರನ್ನು ಜಗದೀಪ್ ಭಾರೀ ಅಂತರದಿಂದ ಸೋಲಿಸಿದರು. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ರಾಜ್ಯಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಇದನ್ನೂ ಓದಿ: Vice President Election 2022 Result Highlights : ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟ; ಜಗದೀಪ್ ಧನಕರ್ಗೆ ಜಯ
71 ವರ್ಷದ ಜಗದೀಪ್ ಧನಕರ್ ಕಳೆದ 6 ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಶೇ.74ಕ್ಕೂ ಅಧಿಕ ಮತಗಳನ್ನು ಗಳಿಸಿ ವಿಜಯಿಯಾದ ಅಭ್ಯರ್ಥಿಯಾಗಿದ್ದಾರೆ. ದಾಖಲೆಯ ಅಂತರದ ಮತಗಳಿಂದ ಜಯ ಗಳಿಸಿದ ಜಗದೀಪ್ ಧನಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದರು. “ಕಿಸಾನ್ ಪುತ್ರ” (ರೈತರ ಮಗ) ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದ್ದರು.
Delhi | Vice President-elect Jagdeep Dhankhar pays tribute to Mahatma Gandhi at Rajghat. He will take oath as the 14th Vice President of the country today. pic.twitter.com/8vvvwCrb2z
— ANI (@ANI) August 11, 2022
2002 ಮತ್ತು 2007ರ ನಡುವೆ ಉಪರಾಷ್ಟ್ರಪತಿಯಾಗಿ ಅಧಿಕಾರದಲ್ಲಿದ್ದ ಭೈರೋನ್ ಸಿಂಗ್ ಶೇಖಾವತ್ ನಂತರ ರಾಜಸ್ಥಾನದಿಂದ ಆಯ್ಕೆಯಾದ ಎರಡನೇ ಉಪರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಜಗದೀಪ್ ಧನಕರ್ ಪಾತ್ರರಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ರಾಜಸ್ಥಾನದವರೇ ಆಗಿದ್ದಾರೆ. ಪ್ರಸ್ತುತ, ರಾಜಸ್ಥಾನದ ಕೋಟಾದಿಂದ ಲೋಕಸಭೆಗೆ ಆಯ್ಕೆಯಾಗಿರುವ ಓಂ ಬಿರ್ಲಾ ಲೋಕಸಭೆಯ ಸ್ಪೀಕರ್ ಆಗಿದ್ದಾರೆ. ಜಗದೀಪ್ ಧನಕರ್ ರಾಜ್ಯಸಭೆಯ ಅಧ್ಯಕ್ಷರಾಗಲಿದ್ದಾರೆ.
ಇದನ್ನೂ ಓದಿ: Jagdeep Dhankhar: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ
ಜನತಾ ದಳ ಮತ್ತು ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಜಗದೀಪ್ ಧನಕರ್ 2008ರಲ್ಲಿ ಬಿಜೆಪಿಗೆ ಸೇರಿದರು. ನಂತರ ಅವರು ತಮ್ಮ ವಕೀಲ ವೃತ್ತಿಯತ್ತ ಗಮನ ಹರಿಸಿದರು. ರಾಜಸ್ಥಾನದಲ್ಲಿ ಜಾಟ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡುವುದು ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅವರು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದರು. ಉಪರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆಯನ್ನು ಘೋಷಿಸುವ ಸಂದರ್ಭದಲ್ಲಿ ಬಿಜೆಪಿಯು ಜಗದೀಪ್ ಧನಕರ್ ಅವರನ್ನು “ಕಿಸಾನ್ ಪುತ್ರ” ಎಂದು ಬಣ್ಣಿಸಿತ್ತು. ಕೃಷಿ ಕಾಯ್ದೆಗಳ ವಿರುದ್ಧ 2020ರಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಬಿಜೆಪಿ ರೈತರ ಮಗ ಎಂದು ಘೋಷಿಸುವ ಮೂಲಕ ರೈತರ ಅಸಮಾಧಾನ ಶಮನಕ್ಕೆ ತಂತ್ರ ರೂಪಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 am, Thu, 11 August 22