Vice-Presidential Election: ನಾಳೆ ಉಪರಾಷ್ಟ್ರಪತಿ ಚುನಾವಣೆ; ಹೇಗಿರಲಿದೆ ಚುನಾವಣಾ ಪ್ರಕ್ರಿಯೆ?

ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ ಉಪರಾಷ್ಟ್ರಪತಿ ಹುದ್ದೆಗೆ ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್​​​ಖರ್ ಮತ್ತು ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ.

Vice-Presidential Election: ನಾಳೆ ಉಪರಾಷ್ಟ್ರಪತಿ ಚುನಾವಣೆ; ಹೇಗಿರಲಿದೆ ಚುನಾವಣಾ ಪ್ರಕ್ರಿಯೆ?
ಜಗದೀಪ್ ಧನ್​​ಕರ್- ಮಾರ್ಗರೇಟ್ ಆಳ್ವ
TV9kannada Web Team

| Edited By: Rashmi Kallakatta

Aug 05, 2022 | 8:06 AM

ದೆಹಲಿ: ರಾಷ್ಟ್ರಪತಿ ಚುನಾವಣೆಯ ನಂತರ, ಚುನಾವಣಾ ಆಯೋಗವು ಈಗ ಆಗಸ್ಟ್ 6 ರಂದು ನಿಗದಿಯಾಗಿರುವ 16 ನೇ ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಿದೆ. ಅಭ್ಯರ್ಥಿಗಳ ನಾಮನಿರ್ದೇಶನ ಪ್ರಕ್ರಿಯೆಯೊಂದಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಜುಲೈ 5 ರಂದು 16 ನೇ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. ಜುಲೈ 19 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಜುಲೈ 20ರಂದು ನಾಮಪತ್ರ ಪರಿಶೀಲನೆ ನಡೆದಿತ್ತು. ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ ಉಪರಾಷ್ಟ್ರಪತಿ ಹುದ್ದೆಗೆ ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್​​​ಖರ್ ಮತ್ತು ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ

ಭಾರತದ ಸಂವಿಧಾನದ ಪ್ರಕಾರ, ಒಂದು ಬಾರಿ ವರ್ಗಾವಣೆ ಮಾಡಬಹುದಾದ ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ.

ಚುನಾವಣಾ ಕಾಲೇಜು ಇವುಗಳನ್ನು ಒಳಗೊಂಡಿದೆ

ರಾಜ್ಯಸಭೆಯ 233 ಚುನಾಯಿತ ಸದಸ್ಯರು, ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರು ಮತ್ತು ಲೋಕಸಭೆಯ 543 ಚುನಾಯಿತ ಸದಸ್ಯರು. ಚುನಾವಣಾ ಕಾಲೇಜು ಸಂಸತ್ತಿನ ಉಭಯ ಸದನಗಳ ಒಟ್ಟು 788 ಸದಸ್ಯರನ್ನು ಒಳಗೊಂಡಿದೆ.

ಎಲ್ಲಾ ಮತದಾರರು ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರುವುದರಿಂದ, ಪ್ರತಿಯೊಬ್ಬ ಸದಸ್ಯರ ಮತದ ಮೌಲ್ಯವು ಒಂದೇ ಆಗಿರುತ್ತದೆ ಅಂದರೆ 1 (ಒಂದು) ಎಂದು ಚುನಾವಣಾ ಆಯೋಗ ಹೇಳಿದೆ. ಸಂವಿಧಾನದ ಪರಿಚ್ಛೇದ 66 (1) ರ ಪ್ರಕಾರ, ಒಂದೇ ಬಾರಿ ವರ್ಗಾವಣೆ ಮಾಡಬಹುದಾದ ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆಯನ್ನು ನಡೆಸಬೇಕು. ಅಂತಹ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯುತ್ತದೆ.

ಹೇಗೆ ನಡೆಯಲಿದೆ ಮತದಾನ

ಮತದಾರರು ಅಭ್ಯರ್ಥಿಗಳ ಹೆಸರಿನ ಮುಂದೆ ಆದ್ಯತೆಗಳನ್ನು ಗುರುತಿಸಬೇಕು. ಆದ್ಯತೆಯನ್ನು ಅಂಕಿಗಳಲ್ಲಿ ಮಾತ್ರ ಗುರುತಿಸಬೇಕು ಮತ್ತು ಪದಗಳಲ್ಲಿ ಸೂಚಿಸಬಾರದು. ಅಭ್ಯರ್ಥಿಗಳ ಸಂಖ್ಯೆಯಷ್ಟು ಆದ್ಯತೆಗಳನ್ನು ಮತದಾರರು ಗುರುತಿಸಬಹುದು. ಬ್ಯಾಲೆಟ್ ಪೇಪರ್ ಮಾನ್ಯವಾಗಿರಲು ಮೊದಲ ಪ್ರಾಶಸ್ತ್ಯದ ಗುರುತು ಕಡ್ಡಾಯವಾಗಿದ್ದರೂ, ಇತರ ಆದ್ಯತೆಗಳು ಐಚ್ಛಿಕವಾಗಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗವು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಲೋಕಸಭೆ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯನ್ನು ಸರದಿಯ ಮೂಲಕ ಚುನಾವಣಾ ಅಧಿಕಾರಿಯಾಗಿ ನೇಮಿಸುತ್ತದೆ. ಚುನಾವಣಾ ಅಧಿಕಾರಿಗೆ ಸಹಾಯ ಮಾಡಲು ಸಂಸತ್ ಭವನದಲ್ಲಿ (ಲೋಕಸಭೆ) ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲು ಆಯೋಗವು ನಿರ್ಧರಿಸಿದೆ ಎಂದು ಹೇಳಿಕೆ ತಿಳಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಯಾವುದೇ ವಿಪ್ ನೀಡುವಂತಿಲ್ಲ ಎಂದೂ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada