ಕೇಂದ್ರಿಯ ಸಂಸ್ಥೆಗಳ ಮೂಲಕ ಒತ್ತಡ ಹಾಕಿದರೆ ನಾವು ಸುಮ್ಮನಿರುತ್ತೇವೆ ಎಂದು ಅಮಿತ್ ಶಾ, ಮೋದಿ ಭಾವಿಸಿದ್ದಾರೆ: ರಾಹುಲ್ ಗಾಂಧಿ
ಸ್ವಲ್ಪ ಒತ್ತಡ ಹೇರಿದರೆ ನಾವು ಸುಮ್ಮನಾಗಿ ಬಿಡುತ್ತೇವೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಂದುಕೊಂಡಿದ್ದಾರೆ. ಆದರೆ ನಾವು ಸುಮ್ಮನಾಗಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾಡುತ್ತಿರುವುದು ಪ್ರಜಾತಂತ್ರಕ್ಕೆ ವಿರುದ್ಧವಾದುದು, ನಾವು ಸತ್ಯದ ಪರವಾಗಿದ್ದೇವೆ.
ದೆಹಲಿ: ಕೇಂದ್ರಿಯ ಸಂಸ್ಥೆಗಳ ಮೂಲಕ ಒತ್ತಡ ಹಾಕಿದರೆ ನನ್ನ ಮತ್ತು ವಿರೋಧ ಪಕ್ಷವನ್ನು ಸುಮ್ಮನಾಗಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾವಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಅಕ್ರಮ ಹಣ ವ್ಯವಹಾರ ಪ್ರಕರಣ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ED) ರಾಹುಲ್ ಗಾಂಧಿ ಅವರನ್ನು 5 ದಿನಗಳ ಕಾಲ ಸುಮಾರು 50 ಗಂಟೆ ವಿಚಾರಣೆಗೊಳಪಡಿಸಿತ್ತು. ಇದಾದ ನಂತರ ರಾಹುಲ್ ಅಮ್ಮ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸಿತ್ತು. ನೀವು ನ್ಯಾಷನಲ್ ಹೆರಾಲ್ಡ್ ಬಗ್ಗೆ ಮಾತನಾಡುವುದಾದರೆ ಇಡೀ ವಿಷಯವೇ ಬೆದರಿಕೆ ಹಾಕಲು ಮಾಡಿದ್ದು. ಸ್ವಲ್ಪ ಒತ್ತಡ ಹೇರಿದರೆ ನಾವು ಸುಮ್ಮನಾಗಿ ಬಿಡುತ್ತೇವೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಂದುಕೊಂಡಿದ್ದಾರೆ. ಆದರೆ ನಾವು ಸುಮ್ಮನಾಗಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾಡುತ್ತಿರುವುದು ಪ್ರಜಾತಂತ್ರಕ್ಕೆ ವಿರುದ್ಧವಾದುದು, ನಾವು ಸತ್ಯದ ಪರವಾಗಿದ್ದೇವೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ. ಜಾರಿ ನಿರ್ದೇಶನಾಲಯ ಬುಧವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಯಂಗ್ ಇಂಡಿಯನ್ ಕಚೇರಿಗೆ ಬೀಗ ಮುದ್ರೆ ಹಾಕಿತ್ತು.
ಬಿಜೆಪಿ ಬೆದರಿಕೆಯಿಂದ ಬಚಾವಾಗಿ ಓಡಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಪತ್ರಕರ್ತರೊಬ್ಬರು ಕೇಳಿದಾಗ, ಓಡಿ ಹೋಗುವ ಬಗ್ಗೆ ಯಾರು ಮಾತನಾಡಿದ್ದು? ಅವರೇ ಅದನ್ನು ಹೇಳುತ್ತಿರುವುದು. ನಾವು ಹೆದರುವುದಿಲ್ಲ. ನಾವು ನರೇಂದ್ರ ಮೋದಿಗೆ ಹೆದರುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ನಾವೇನೂ ತಲೆ ಕೆಡಿಸಿಕೊಳ್ಳಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು, ದೇಶದಲ್ಲಿನ ಸಾಮರಸ್ಯ ಕಾಪಾಡುವುದಕ್ಕಾಗಿ ನಾನು ನನ್ನ ಕೆಲಸ ಮಾಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಚಾರಣೆ ನಡೆಸಿದ ಇಡಿ ನೂರಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳಿತ್ತು.
Published On - 3:35 pm, Thu, 4 August 22