ನವದೆಹಲಿ: ಶನಿವಾರ ಸಂಜೆ ಉಪರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟಿಸಲಾಗಿದೆ. ಆಡಳಿತಾರೂಢ ಎನ್‌ಡಿಎ (NDA) ಅಭ್ಯರ್ಥಿಯಾಗಿದ್ದ, ರಾಜಸ್ಥಾನ ಮೂಲದ 71 ವರ್ಷ ಜಗದೀಪ್ ಧನಕರ್ (Jagdeep Dhankhar) ಭಾರತದ ನೂತನ ಉಪರಾಷ್ಟ್ರಪತಿಯಾಗಿ (Vice President Of India) ಆಯ್ಕೆಯಾಗಿದ್ದಾರೆ. ಸಮಾಜವಾದಿ ಹಿನ್ನೆಲೆಯ ಜಾಟ್ ನಾಯಕ ಜಗದೀಪ್ ಧನಕರ್ ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆಯಲ್ಲಿದ್ದರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಗಸ್ಟ್ 11ರಂದು ಗುರುವಾರ ದೇಶದ ಹೊಸ ಉಪರಾಷ್ಟ್ರಪತಿಯಾಗಿ ಧನಕರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದಿರುವ ಜಗದೀಪ್ ಧನಕರ್ ಒಟ್ಟು 528 ಮತಗಳನ್ನು ಪಡೆದಿದ್ದಾರೆ.
ಕರ್ನಾಟಕದ ಮ್ಯಾಗಿಗೆ ಸೋಲು
ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿದ್ದ ಕರ್ನಾಟಕ ಮೂಲದ 80 ವರ್ಷದ ಮಾರ್ಗರೆಟ್ ಆಳ್ವ (ಕಾಂಗ್ರೆಸ್ ವಲಯದಲ್ಲಿ ಮ್ಯಾಗಿ ಎಂದೇ ಗುರುತಿಸಿಕೊಂಡಿದ್ದಾರೆ) ಪರಾಭವಗೊಂಡಿದ್ದಾರೆ. ಭಾರತದ ಉಪ ರಾಷ್ಟ್ರಪತಿ ಹುದ್ದೆಗೆ (Vice President) ಇಂದು ಬೆಳಗ್ಗೆ 10 ಗಂಟೆಯಿಂದ ಮತದಾನ ನಡೆದಿತ್ತು. ಸಂಸತ್ತಿನ ಉಭಯ ಸದನಗಳ ಸದಸ್ಯರು ನೂತನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದರು. ವಿಪಕ್ಷ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾಗೆ 182 ಮತ ದಕ್ಕಿದೆ.
ಉಪರಾಷ್ಟ್ರಪತಿ ಆಯ್ಕೆಗೆ 725 ಸಂಸದರಿಂದ ಮತದಾನ
ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಸಂಸದರಿಂದ ಇಂದು ಮತದಾನ ನಡೆಯಿತು. ಅನಾರೋಗ್ಯ ಕಾರಣದಿಂದ ಬಿಜೆಪಿಯ ಸನ್ನಿ ಡಿಯೋಲ್ ಮತ್ತು ಸಂಜಯ್ ಧೋತ್ರೆ ಮತದಾನ ಮಾಡಿಲ್ಲ. ಟಿಎಂಸಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿತ್ತು. ಆದಾಗ್ಯೂ ಪಕ್ಷದ ನಿರ್ಣಯ ವಿರೋಧಿಸಿ ಶಿಶಿರ್ ಅಧಿಕಾರಿ ಮತ್ತು ದಿಬ್ಯೇಂದು ಅಧಿಕಾರಿ ಮತದಾನ ಮಾಡಿದರು. ಒಟ್ಟು 34 ಟಿಎಂಸಿ ಸಂಸದರು ಮತದಾನ ಮಾಡಲಿಲ್ಲ. ಸಮಾಜವಾದಿ ಪಕ್ಷದಿಂದ 2 ಸಂಸದರು, ಶಿವ ಸೇನೆಯ ಇಬ್ಬರು ಸಂಸದರು, ಬಿ ಎಸ್ಪಿಯ ಒಬ್ಬರು V-P poll ನಲ್ಲಿ ಮತದಾನ ಮಾಡಲಿಲ್ಲ. ಚಲಾವಣೆಗೊಂಡಿದ್ದ 725 ಮತಗಳ ಪೈಕಿ 15 ಮತಗಳು ಅಸಿಂಧುಗೊಂಡವು.
ಶುಭ ಕೋರಲು ಸಚಿವ ಪ್ರಲ್ಹಾದ್ ಜೋಷಿ ನಿವಾಸದಲ್ಲಿ ಸಮಾಗಮ
ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಿವಾಸದಲ್ಲಿ ವಿಜೇತ ಅಭ್ಯರ್ಥಿ, 14ನೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ಗೆ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೊದಲಾದ ಹಿರಿಯ ನಾಯಕರು ಸಮಾಗಮಿಸಿದ್ದರು.
ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ ಗೆ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೊದಲಾದ ಹಿರಿಯ ನಾಯಕರು ದಿಲ್ಲಿಯ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸಕ್ಕೆ ಆಗಮಿಸಿ ಅಭಿನಂದನೆ ಸಲ್ಲಿಸಿದರು. ಆ ವೇಳೆ ಸಚಿವ ಪ್ರಲ್ಹಾದ್ ಜೋಶಿ ಎಲ್ಲರಿಗೂ ಆತಿಥ್ಯ ನೀಡಿ, ಜೊತೆಗೂಡಿ ಜಗದೀಪ್ ಧನಕರ್ ಗೆ ಶುಭ ಕೋರಿದರು.
ಈ ಕುರಿತು ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಹೀಗಿದೆ:
ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ @jdhankhar1 ಯವರಿಗೆ ಪ್ರಧಾನಮಂತ್ರಿ ಶ್ರೀ @narendramodi ಯವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಹಾಗೂ ಸಚಿವರಾದ ಶ್ರೀ @PiyushGoyal ಯವರ ಜೊತೆಗೂಡಿ ದೆಹಲಿಯಲ್ಲಿ ಅಭಿನಂದನೆ ಸಲ್ಲಿಸಿದೆನು. pic.twitter.com/hXbBckU3do
— Pralhad Joshi (@JoshiPralhad) August 6, 2022
ಜಗದೀಪ್ ಧನಕರ್ ಹಿನ್ನೆಲೆ: ಉಪರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಕಣಕ್ಕಿಳಿದಿದ್ದು, ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್ ಧನಕರ್ 1989ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರು 2019ರ ಜುಲೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದರು. ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನಗೊಂಡ ನಂತರ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ಎನ್‌ಡಿಎ ಪರವಾಗಿ ಕಣಕ್ಕಿಳಿದಿರುವ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರಿಗೆ ಸುಲಭ ಗೆಲುವು ಖಚಿತ ಎನ್ನಲಾಗಿದೆ. 71 ವರ್ಷದ ಜಗದೀಪ್ ಧನಕರ್ ಅವರು ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್ ಸಮುದಾಯದ ನಾಯಕರಾಗಿದ್ದಾರೆ.