
ಉತ್ತರ ಪ್ರದೇಶ, ಅ.26: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯದಿಂದ ಭಾರಿ ದೊಡ್ಡ ಕಾನೂನು ಗೆಲುವು ಸಿಕ್ಕಿದೆ. 2018ರ ಕರ್ನಾಟಕ ಚುನಾವಣೆ ವೇಳೆ ಆಗಿನ ಬಿಜೆಪಿ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ್ದರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಿಶೇಷ ಎಂಪಿ-ಎಂಎಲ್‌ಎ ಕೋರ್ಟ್ ವಜಾಗೊಳಿಸಿ (Dismissed) ಆದೇಶಿಸಿದೆ.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಇಂದು ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ದೂರಿನಲ್ಲಿ ಸೂಕ್ತ ಆಧಾರಗಳಿಲ್ಲದಿರುವುದನ್ನು ಪುಷ್ಟೀಕರಿಸಿ ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದಾರೆ. ಈ ಮಹತ್ವದ ತೀರ್ಪಿನಿಂದ ಕಳೆದ 8 ವರ್ಷಗಳಿಂದ ರಾಹುಲ್ ಗಾಂಧಿ ಅವರ ಮೇಲಿದ್ದ ಆರೋಪ ಮುಕ್ತವಾಗಿದೆ , ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮೂಡಿಸಿದೆ.
2018ರ ಮೇ 8ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದರು ಎಂದು ಆರೋಪಿಸಲಾಗಿದೆ. ಸುಲ್ತಾನ್‌ಪುರ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಅವರು 2018ರ ಆಗಸ್ಟ್ 4 ರಂದು ರಾಹುಲ್ ಗಾಂಧಿ ವಿರುದ್ಧ ಸುಲ್ತಾನ್‌ಪುರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಬೆಂಗಾವಲು ವಾಹನ ಸರಣಿ ಅಪಘಾತ! ಹಲವರಿಗೆ ಗಾಯ, 5 ವಾಹನಗಳು ಹಾಗೂ ಒಂದು ಆ್ಯಂಬುಲೆನ್ಸ್ ಜಖಂ
ಮೇ 8, 2018: ಬೆಂಗಳೂರಿನ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿಯಿಂದ ಆಕ್ಷೇಪಾರ್ಹ ಹೇಳಿಕೆ ಆರೋಪ.
ಆಗಸ್ಟ್ 4, 2018: ರಾಹುಲ್ ಗಾಂಧಿ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು.
ನವೆಂಬರ್ 27, 2023: ರಾಹುಲ್ ಗಾಂಧಿಗೆ ಕೋರ್ಟ್‌ನಿಂದ ಸಮನ್ಸ್ ಹಾಗೂ ವಾರಂಟ್ ಜಾರಿ.
ಫೆಬ್ರವರಿ 20, 2024: ಕೋರ್ಟ್‌ಗೆ ಶರಣಾಗಿ ಜಾಮೀನು ಪಡೆದ ರಾಹುಲ್ ಗಾಂಧಿ.
ಜುಲೈ 26, 2024: ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ ದಾಖಲು.
ಫೆಬ್ರವರಿ 20, 2026: ಸಿಆರ್‌ಪಿಸಿ ಸೆಕ್ಷನ್ 313ರ ಅಡಿಯಲ್ಲಿ ರಾಹುಲ್ ಗಾಂಧಿ ಹೇಳಿಕೆ ದಾಖಲು.
ಮಾರ್ಚ್ 12 – ಸೆಪ್ಟೆಂಬರ್ 10, 2026: ರಾಹುಲ್ ಧ್ವನಿ ಮಾದರಿ (Voice Sample) ಪರೀಕ್ಷೆಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್, ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ವಜಾಗೊಳಿಸಿದವು.
ಅಕ್ಟೋಬರ್ 12, 2026: ಪ್ರಕರಣದ ಅಂತಿಮ ವಾದ-ಪ್ರತಿವಾದ ಪೂರ್ಣ.
ಅಕ್ಟೋಬರ್ 26, 2026: ಅಂತಿಮ ತೀರ್ಪು ಪ್ರಕಟ. (ಪ್ರಕರಣವನ್ನು ವಜಾ ಮಾಡಿದ ಕೋರ್ಟ್)
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Mon, 26 October 26