ಆಡಳಿತ ನಡೆಸಲು ದುಡ್ಡಿಲ್ಲದ ಸರ್ಕಾರ ಜನರ ಕಿಸೆಯಿಂದ ಹಣ ಕಿತ್ತುಕೊಳ್ಳುತ್ತಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ
‘ಜನರ ಕೈಗೆ ಹಣ ಸಿಗುವಂತೆ ಮಾಡಿದರೆ ಮಾತ್ರ ಈ ಸಂಕಷ್ಟದಿಂದ ನಾವು ಹೊರಬರಲು ಸಾಧ್ಯ. ಆದರೆ ಸರ್ಕಾರ ಈ ಬಗ್ಗೆ ಯಾರ ಸಲಹೆಗಳನ್ನೂ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಉತ್ಪಾದನೆ ಹೆಚ್ಚಿಸಿ ಎಂದೇ ಹೇಳುತ್ತಿದೆ’ ಎಂದು ವಿಶ್ಲೇಷಿಸಿದರು.
ಕೊಚ್ಚಿ: ‘ಜನರ ಕಿಸೆಗೆ ಕೈ ಹಾಕಿ ಕಿತ್ತುಕೊಂಡ ಹಣದಿಂದ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಂತ ತೆರೇಸಾ ಸ್ವಾಯುತ್ತ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೇಶದ ಆರ್ಥಿಕತೆ ಕುಸಿಯಲು ಕೇಂದ್ರ ಸರ್ಕಾರದ ದುರಾಡಳಿತವೇ ಕಾರಣ’ ಎಂದು ದೂರಿದರು.
ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲೆಂದು ಕೇರಳಕ್ಕೆ ಬಂದಿರುವ ರಾಹುಲ್ ಗಾಂಧಿ, ‘ಆಡಳಿತ ನಿರ್ವಹಣೆಯಲ್ಲಿ ದೊಡ್ಡಮಟ್ಟದ ತಪ್ಪುಗಳು ಆಗಿರುವುದರಿಂದ ಆರ್ಥಿಕ ಸಮಸ್ಯೆಗಳು ಇನ್ನಷ್ಟು ದಿನ ಮುಂದುವರಿಯಲಿದೆ. ಜನರ ಕೈಗೆ ಹಣ ಸಿಗುವಂತೆ ಮಾಡಿದರೆ ಮಾತ್ರ ಈ ಸಂಕಷ್ಟದಿಂದ ನಾವು ಹೊರಬರಲು ಸಾಧ್ಯ. ಆದರೆ ಸರ್ಕಾರ ಈ ಬಗ್ಗೆ ಯಾರ ಸಲಹೆಗಳನ್ನೂ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಉತ್ಪಾದನೆ ಹೆಚ್ಚಿಸಿ ಎಂದೇ ಹೇಳುತ್ತಿದೆ’ ಎಂದು ವಿಶ್ಲೇಷಿಸಿದರು.
‘ಆರ್ಥಿಕತೆಗೆ ಪುನಶ್ಚೇತನ ನೀಡಲು ಬಳಕೆ ಹೆಚ್ಚಿಸುವುದು ಉತ್ತಮ ದಾರಿ. ಆದರೆ ಅದು ಸಾಧ್ಯವಾಗಲು ಜನರ ಕೈಗೆ ಹಣ ಸಿಗಬೇಕು. ಕೈಲಿ ಹಣ ಇದ್ದರೆ ಜನರು ವಸ್ತುಗಳನ್ನು ಖರೀದಿಸಲು, ಬಳಸಲು ಆರಂಭಿಸುತ್ತಾರೆ. ಆರ್ಥಿಕತೆಯ ಚಕ್ರ ತಿರುಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಧಾರಣೆ ಕುಸಿದರೂ ಭಾರತದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಾಗುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್ಟಿ ಕಾರಣದಿಂದ ಆರ್ಥಿಕತೆಗೆ ಸಾಕಷ್ಟು ಹಾನಿಯಾಗಿದೆ. ಕೋವಿಡ್ ಪಿಡುಗು ಶುರುವಾಗುವ ಮೊದಲೇ ಭಾರತದ ಆರ್ಥಿಕತೆ ಸಂಕಷ್ಟದಲ್ಲಿತ್ತು, ಕೋವಿಡ್-19 ಬಂದ ನಂತರ ಆರ್ಥಿಕತೆ ಸಂಪೂರ್ಣ ಕುಸಿಯಿತು ಎಂದು ಹೇಳಿದರು.
‘ಸರ್ಕಾರದ ಬಳಿ ಈಗ ಹಣವಿಲ್ಲ. ಆರ್ಥಿಕತೆ ಕುಸಿದಿರುವ ಕಾರಣದಿಂದಾಗಿ ತೆರಿಗೆ ಸಂಗ್ರಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಅವರು ನಿಮ್ಮ ಕಿಸೆಯಿಂದ ಬಲವಂತವಾಗಿ ಹಣ ಕಿತ್ತುಕೊಂಡು ಸರ್ಕಾರ ನಡೆಸಲು ಯತ್ನಿಸುತ್ತಿದ್ದಾರೆ. ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಇದಕ್ಕೆ ಉತ್ತಮ ಉದಾಹರಣೆ. ಆರ್ಥಿಕತೆ ಸುಧಾರಿಸಲು ಸಾಮರಸ್ಯದ ವಾತಾವರಣ ಅತ್ಯಗತ್ಯ. ಸಮಾಜದ್ಲಲಿ ಸಾಮರಸ್ಯ, ಶಾಂತಿ ಮತ್ತು ನೆಮ್ಮದಿ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ದೇಶವನ್ನು ಹೇಗೆ ಮುನ್ನಡೆಸಬೇಕು ಎಂಬ ಸ್ಪಷ್ಟಕಲ್ಪನೆಯಿರಬೇಕು’ ಎಂದರು.
Women in India have to get strength from inside. For that to happen you must understand the way that you are being pushed, understand the forces that are hurting you, and then position yourself properly.: Shri @RahulGandhi#SwagathamRahulGandhi pic.twitter.com/UqvD7tCtUf
— Congress (@INCIndia) March 22, 2021
ಇದನ್ನೂ ಓದಿ: ಸಂತೋಷ ಸಚಿವಾಲಯ, ಉದ್ಯಮಗಳಿಗೆ ಪ್ರೋತ್ಸಾಹ; ಕೇರಳ ಯುಡಿಎಫ್ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ