ಜಂತರ್ ಮಂತರ್ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಜಂತರ್ ಮಂತರ್ ಪ್ರತಿಭಟನೆ ಕುರಿತು ಮಾತನಾಡಿದ್ದಾರೆ. ಇದು ಯುವಕರ ನೈಜ ಧ್ವನಿಯಾಗಿದ್ದು, ದ್ವೇಷ ಅಥವಾ ಕೋಪವಲ್ಲ ಎಂದರು. ಪರೀಕ್ಷಾ ಪತ್ರಿಕೆ ಸೋರಿಕೆ ಮತ್ತು ಅನ್ಯಾಯದ ವಿಧಾನಗಳ ಕುರಿತು ಸರ್ಕಾರದ ನಿಲುವನ್ನು ಟೀಕಿಸಿದರು. ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಮತ್ತು ಅವರ ಕಳವಳಗಳನ್ನು ಆಲಿಸಲು ಸರ್ಕಾರಕ್ಕೆ ಆಗ್ರಹಿಸಿದರು. ಇದು ಸಾರ್ವಜನಿಕ ಪರೀಕ್ಷಾ ಮಸೂದೆ ಚರ್ಚೆಯ ಸಂದರ್ಭದಲ್ಲಿ ಬಂದ ಹೇಳಿಕೆಯಾಗಿದೆ.

ಜಂತರ್ ಮಂತರ್ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ
ರಾಹುಲ್

Updated on: Jul 29, 2026 | 1:35 PM

ನವದೆಹಲಿ, ಜುಲೈ 29: ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ಲೋಕಸಭೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ಪರೀಕ್ಷೆಗಳು(ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಕುರಿತ ಕಾವೇರಿದ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಯು ದುರಹಂಕಾರಿಗಳು ಮತ್ತು ಜನರ ಮಾತನ್ನು ಕೇಳದಿರುವವರು ಮೂರ್ಖರು ಎಂದಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಸುದೀರ್ಘ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, “ವಿದ್ಯಾರ್ಥಿಗಳ ಆಂದೋಲನದಲ್ಲಿ ಯಾವುದೇ ದ್ವೇಷ ಅಥವಾ ಕೋಪವಿರಲಿಲ್ಲ. ಅದು ತಮ್ಮ ಭವಿಷ್ಯಕ್ಕಾಗಿ ಕಳವಳಗೊಂಡಿದ್ದ ದೇಶದ ಲಕ್ಷಾಂತರ ಯುವಕರ ನೈಜ ಅಭಿವ್ಯಕ್ತಿಯಾಗಿತ್ತು. ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುವ ಬದಲು ಗೌರವಿಸಬೇಕಿತ್ತು ಎಂದು ಒತ್ತಾಯಿಸಿದರು.

ಪರೀಕ್ಷಾ ವ್ಯವಸ್ಥೆ ಮತ್ತು ಪತ್ರಿಕೆ ಸೋರಿಕೆ ಕುರಿತು ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶದ ಲಕ್ಷಾವಧಿ ಯುವಕರ ಹಾಗೂ ಅವರ ಪೋಷಕರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಯುವಕರ ಹಿತಾಸಕ್ತಿ ಕಾಯುವುದು ನಮಗೆ ಮುಖ್ಯ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಮೆಟ್ರೋ, ಇಂಟರ್ನೆಟ್ ಬಂದ್ ಮಾಡಬಹುದು, ಆದರೆ ಪೇಪರ್ ಲೀಕ್ ತಡೆಯಲು ಆಗಲ್ಲ!: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು, ವಿದ್ಯಾರ್ಥಿಗಳ ಸಂಕಟವನ್ನು ಆಲಿಸುವ ಬದಲು ಅವರ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಸದನದಲ್ಲಿ ಮಂಡಿಸುತ್ತಾ, “ಸಂಘಟಿತ ಪರೀಕ್ಷಾ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಈ ಕಾಯ್ದೆ ತಿದ್ದುಪಡಿ ಅತ್ಯಗತ್ಯ” ಎಂದು ಹೇಳಿದರು.

ರಾಹುಲ್ ವಿಡಿಯೋ

ಈ ತಿದ್ದುಪಡಿ ಮಸೂದೆಯ ಪ್ರಕಾರ, ಪರೀಕ್ಷಾ ವಂಚನೆ ಹಾಗೂ ಪೇಪರ್ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಕನಿಷ್ಠ 5 ರಿಂದ ಗರಿಷ್ಠ10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲು ಕಾನೂನು ರೂಪಿಸಲಾಗಿದೆ.
ಪೇಪರ್ ಸೋರಿಕೆ ಪ್ರಕರಣಗಳ ತನಿಖೆಯನ್ನು ಕೇವಲ 2 ತಿಂಗಳಲ್ಲಿ ಪೂರ್ಣಗೊಳಿಸಲು ವಿಶೇಷ ಕಾರ್ಯಪಡೆ (STF) ರಚನೆ ಹಾಗೂ 3 ತಿಂಗಳೊಳಗೆ ವಿಚಾರಣೆ ಮುಗಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಮಸೂದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ದೇಶಾದ್ಯಂತ ನಡೆದ ತೀವ್ರ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ನಿರಶನದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಜುಲೈ 27 ರಂದು ಈ ಹೊಸ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚೆಗೆ ಕೈಗೆತ್ತಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us