ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪ್ರತಿಷ್ಠಾಪಿಸಿದ ನಂತರ ಭಾರತಕ್ಕೆ “ನಿಜವಾದ ಸ್ವಾತಂತ್ರ್ಯ” ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹೇಳಿಕೆ “ದೇಶದ್ರೋಹ”ಕ್ಕೆ ಸಮನಾಗಿದೆ. ಮೋಹನ್ ಭಾಗವತ್ ಬೇರೆ ಯಾವುದೇ ದೇಶದಲ್ಲಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು ಎಂದು ಟೀಕಿಸಿದ್ದಾರೆ.
ನವದೆಹಲಿಯ ಕೋಟ್ಲಾ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಎಐಸಿಸಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ದಿನ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಆರ್ ಎಸ್‌ಎಸ್‌ಮುಖ್ಯಸ್ಥ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದ ಫಲವೇ ಸಂವಿಧಾನ. ಆದರೆ ಆರ್‌ಎಸ್‌ಎಸ್ ಮುಖ್ಯಸ್ಥ ಸಂವಿಧಾನವನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.
Mohan Bhagwat’s audacious comment that India didn’t gain true independence in 1947 is an insult to our freedom fighters, every single Indian citizen and an attack on our Constitution. pic.twitter.com/6sMhdxn3xA
— Rahul Gandhi (@RahulGandhi) January 15, 2025
ವಿರೋಧ ಪಕ್ಷ ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಮಾತ್ರವಲ್ಲ, ಭಾರತೀಯ ರಾಜ್ಯದ ವಿರುದ್ಧವೂ ಹೋರಾಡುತ್ತಿದೆ. ನಮ್ಮ ಸಿದ್ಧಾಂತವು ಆರ್‌ಎಸ್‌ಎಸ್ ಸಿದ್ಧಾಂತದಂತೆ ಸಾವಿರಾರು ವರ್ಷಗಳಷ್ಟು ಹಳೆಯದು ಮತ್ತು ಅದು ಸಾವಿರಾರು ವರ್ಷಗಳಿಂದ ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಹೋರಾಡುತ್ತಿದೆ. ನಾವು ನ್ಯಾಯಯುತ ಹೋರಾಟ ನಡೆಸುತ್ತಿದ್ದೇವೆ ಎಂದು ಭಾವಿಸುವುದಿಲ್ಲವೇ? ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿದೆ. ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತೀಯ ರಾಜ್ಯದ ವಿರುದ್ಧವೂ ಹೋರಾಡುತ್ತಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಸುಖಾಸುಮ್ಮನೆ ರಾಹುಲ್ ಗಾಂಧಿ ಹೆಸರು ಬಳಸಬೇಡಿ: ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಎಚ್ಚರಿಕೆ
ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಕೇವಲ ರಾಜಕೀಯ ಹೋರಾಟ ಮಾಡಬಾರದು. ಅದನ್ನು ಮೀರಿದ ಕೆಲಸವನ್ನು ಆರ್‌ಎಸ್‌ಎಸ್ ಬಿಜೆಪಿ ಮಾಡುತ್ತಿದೆ. ಸಂವಿಧಾನ ಸ್ವಾತಂತ್ರ್ಯದ ಸಿಂಬಲ್ ಅಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಭಾರತ ದೇಶದಲ್ಲಿ ಯಾವ ಭಾಷೆಯೂ ಮೇಲಲ್ಲ. ಯಾವ ಭಾಷೆಯೂ ಕೀಳಲ್ಲ. ಯಾವ ಸಂಸ್ಕೃತಿಯೂ ಮೇಲಲ್ಲ, ಯಾವ ಸಂಸ್ಕೃತಿಯೂ ಕೀಳಲ್ಲ. ಯಾವ ಸಮುದಾಯವೂ ಮೇಲಲ್ಲ, ಯಾವ ಸಮುದಾಯವೂ ಕೀಳಲ್ಲ. ದೇಶದ ಸಂವಿಧಾನದಲ್ಲೂ ಅದನ್ನೇ ಬರೆಯಲಾಗಿದೆ. ಆದರೆ ಮೋಹನ್ ಭಾಗವತ್ ಇದನ್ನು ಒಪ್ಪುವುದಿಲ್ಲ. 1947ರಲ್ಲಿ ಭಾರತ ಸ್ವಾತಂತ್ರ್ಯಗೊಂದಿಲ್ಲ ಎನ್ನುವ ಮೂಲಕ ಮೋಹನ್ ಭಾಗವತ್ ಸ್ವಾತಂತ್ರ್ಯ ಹೋರಾಟಕ್ಕೆ, ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮೋದಿ- ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಮಿತ್ರಪಕ್ಷ ಆಪ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಮಹಾರಾಷ್ಟ್ರ ಚುನಾವಣೆ ಬಗ್ಗೆ ಈಗಲೂ ಅನುಮಾನಗಳಿವೆ. ಚುನಾವಣೆಯಲ್ಲಿ ಅನೇಕ ಹೊಸ ವೋಟರ್ಗಳು ಸೃಷ್ಟಿಯಾಗಿದ್ದಾರೆ. ಸಂಪೂರ್ಣ ಡೇಟಾವನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು. ಆದರೆ ಚುನಾವಣಾ ಆಯೋಗ ಮಾಹಿತಿ ಕೊಡುತ್ತಿಲ್ಲ. ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಕೊಡುತ್ತಿಲ್ಲ. ಪಾರದರ್ಶಕವಾಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿಲ್ಲ. ವಿಪಕ್ಷ ನಾಯಕರನ್ನು ಹಣಿಯಲು ತನಿಖಾ ಸಂಸ್ಥೆಯನ್ನು ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Wed, 15 January 25