ನವದೆಹಲಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಹೇಳಿಕೆ ನೀಡಿದ ಆರೋಪದ ಮೇಲೆ ತನಗೆ ನೀಡಿರುವ ಹಕ್ಕುಚ್ಯುತಿ ನೋಟೀಸ್ಗೆ (Breach Of Privilege Notice) ರಾಹುಲ್ ಗಾಂಧಿ ಇಂದು ಉತ್ತರಿಸುವ ನಿರೀಕ್ಷೆ ಇದೆ. ನೋಟೀಸ್ಗೆ ಬುಧವಾರದೊಳಗೆ ಉತ್ತರ ನೀಡಬೇಕೆಂದು ಲೋಕಸಭಾ ಕಾರ್ಯಾಲಯ (Lok Sabha Secretariat) ತಿಳಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಫೆಬ್ರುವರಿ 7ರಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯ ವೇಳೆ ರಾಹುಲ್ ಗಾಂಧಿ ಪ್ರಧಾನಿಗಳ ಬಗ್ಗೆ ಅಸಂಸದೀಯ ಹೇಳಿಕೆಗಳನ್ನು ನೀಡಿದರೆನ್ನಲಾಗಿದೆ. ಸದ್ಯ ಕಡತದಿಂದ ಆ ಪದ ಬಳಕೆಯನ್ನು ತೆಗೆದುಹಾಕಲಾಗಿದೆ. ಅಂದಿನ ಕಲಾಪದ ವೇಳೆ ರಾಹುಲ್ ಗಾಂಧಿ ಅದಾನಿ ವಿಚಾರವನ್ನು ಕೆದಕಿದ್ದರು. ಜೊತೆಗೆ ಅದಾನಿ ರಕ್ಷಣೆಗೆ ಪ್ರಧಾನಿ ಯಾಕೆ ನಿಂತಿದ್ದಾರೆಂದು ಕೇಳಿದ್ದರು. ಹಾಗೆಯೇ, ಅಸಂಸದೀಯ ಎನಿಸುವಂತಹ ಹೇಳಿಕೆಗಳನ್ನು ಪ್ರಧಾನಿಗಳ ಮೇಲೆ ಬಳಕೆ ಮಾಡಿದ್ದರೆನ್ನಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ನಾಯಕ ನಿಶಿಕಾಂತ್ ದುಬೇ ಇಬ್ಬರೂ ರಾಹುಲ್ ಗಾಂಧಿಯಿಂದ ಹಕ್ಕುಚ್ಯುತಿ ಆಗಿದೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: BBC Tax Survey: ಬಿಬಿಸಿ ಕಚೇರಿಯಲ್ಲಿ ಐಟಿ ಇಲಾಖೆ ಪರಿಶೀಲನೆ; ಇದು ನಿರೀಕ್ಷಿತ ಎಂದ ವಿಪಕ್ಷ
ನಿಶಿಕಾಂತ್ ದುಬೇ ಅವರು ರಾಹುಲ್ ಗಾಂಧಿಗೆ ಹಕ್ಕು ಚ್ಯುತಿ ನೋಟೀಸ್ ಕೊಟ್ಟರೆ, ಪ್ರಹ್ಲಾದ್ ಜೋಶಿ ಲೋಕಸಭಾಧ್ಯಕ್ಷರಿಗೆ ಪತ್ರ ಬರೆದು, ರಾಹುಲ್ ಗಾಂಧಿ ಮಾಡಿದ ಆರೋಪಗಳನ್ನು ಸಂಸತ್ನ ಕಲಾಪಗಳ ಕಡತದಿಂದ ತೆಗೆದುಹಾಕಬೇಕೆಂದು ಕೇಳಿಕೊಂಡಿದ್ದರು. ಈ ಸಂಬಂಧ ಫೆಬ್ರುವರಿ 15ರೊಳಗೆ ಉತ್ತರಿಸಬೇಕೆಂದು ರಾಹುಲ್ ಗಾಂಧಿಗೆ ಲೋಕಸಭಾ ಕಾರ್ಯಾಲಯದಿಂದ ನೋಟೀಸ್ ಜಾರಿಯಾಗಿದೆ. ಇವತ್ತಿನ ಅಧಿವೇಶನದ ವೇಳೆ ರಾಹುಲ್ ಗಾಂಧಿ ಈ ನೋಟೀಸ್ಗೆ ಉತ್ತರಿಸುವ ಸಾಧ್ಯತೆ ಇದೆ.
ಪ್ರಧಾನಿ ಕೈ ನಡುಗುತ್ತಿದ್ದುದು ನೋಡಿದಿರಾ?
ಸಂಸತ್ ಕಲಾಪದ ವೇಳೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಹೆಸರಲ್ಲಿ ನೆಹರೂ ಯಾಕಿಲ್ಲ ಎಂದು ಪ್ರಶ್ನಿಸಿದ್ದರು. ಕೇರಳದ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಈ ವಿಚಾರವನ್ನು ಕೆದಕಿ ಪ್ರಧಾನಿಯನ್ನು ಕುಟುಕಿದ್ದರು.
ಇದನ್ನೂ ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ
ನಾನು ಅದಾನಿ ವಿಚಾರ ಪ್ರಸ್ತಾಪ ಮಾಡಿದರೆ ಮೋದಿ ಅವರು ನನ್ನ ಉಪನಾಮ ಪ್ರಸ್ತಾಪ ಮಾಡುತ್ತಾರೆ. ನಿಮ್ಮ ಹೆಸರು ಗಾಂಧಿ ಅಂತಿದೆ, ನೆಹರೂ ಅಂತ ಯಾಕಿಲ್ಲ ಎನ್ನುತ್ತಾರೆ. ನನ್ನನ್ನು ಅವರು ನೇರವಾಗಿ ಅವಹೇಳನ ಮಾಡುತ್ತಾರೆ. ಆದರೆ ಅವರ ಮಾತುಗಳನ್ನು ಕಡತದಿಂದ ತೆಗೆದುಹಾಕಿಲ್ಲ. ನಾವು ಬಹಳ ಸಭ್ಯವಾಗಿಯೇ ಅದಾನಿ ವಿಚಾರ ಕೇಳಿದ್ದೆ. ಆದರೂ ಕೂಡ ಹೇಳಿಕೆಯನ್ನು ಕಡತದಿಂದ ತೆಗೆದಿದ್ದಾರೆ. ಅದೇನೇ ಇರಲಿ ಸತ್ಯವನ್ನು ಮುಚ್ಚಿಡಲು ಯಾವತ್ತೂ ಆಗೋದಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದರು.
ಇನ್ನು, ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ಕೈ ನಡುಗುತ್ತಿತ್ತು ಎಂದೂ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು.
Published On - 8:41 am, Wed, 15 February 23