Rain Updates: ಈ ವೀಕೆಂಡ್ನಲ್ಲಿ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ; ಮುಂಬೈನಲ್ಲಿ ಹಳದಿ ಅಲರ್ಟ್ ಘೋಷಣೆ
Weather Forecast: ಮುಂಬೈನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನದಿಂದ ನಿರಂತರ ಮಳೆಯಾಗುತ್ತಿದೆ. ಮುಂಬೈನ ಕೆಲವು ಭಾಗಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗಲಿದೆ.
ಮುಂಬೈ: ಮುಂದಿನ 4ರಿಂದ 5 ದಿನಗಳಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೂಡ ಮುಂದಿನ 2 ದಿನ ಭಾರೀ ಮಳೆಯಾಗಲಿದೆ. ಇನ್ನೆರಡು ದಿನಗಳ ಕಾಲ ಮುಂಬೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಮತ್ತು ಕೊಂಕಣ ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.
ಇನ್ನೆರಡು ದಿನ ಈ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಮುಂಬೈನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನದಿಂದ ನಿರಂತರ ಮಳೆಯಾಗುತ್ತಿದೆ. ಮುಂಬೈನ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅ. 11ರವರೆಗೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅ. 8 ಮತ್ತು 9ರಂದು ಹರಿಯಾಣದಲ್ಲಿ ಭಾರೀ ಮಳೆಯಾಗಲಿದೆ. ಅ. 9ರವರೆಗೆ ರಾಜಸ್ಥಾನದಲ್ಲಿ ಮತ್ತು ಅ. 10ರವರೆಗೆ ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: Karnataka Rain: ನಿಲ್ಲದ ಮಳೆರಾಯನ ಅಬ್ಬರ, ಈ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿ
ಅಕ್ಟೋಬರ್ 9ರವರೆಗೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅ. 8 ಮತ್ತು 9ರಂದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮಳೆಯಾಗಲಿದೆ. ಅ. 9 ಮತ್ತು 10ರಂದು ಒಡಿಶಾದಲ್ಲಿ ಮಳೆಯಾಗಲಿದೆ. ಅಕ್ಟೋಬರ್ 11ರಂದು ಬಿಹಾರದಲ್ಲಿ ಮಳೆಯಾಗಲಿದೆ. ಅ. 11ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆ ಸುರಿಯಲಿದೆ. ಅಕ್ಟೋಬರ್ 10 ಮತ್ತು 11ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಾಕಷ್ಟು ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ.
ಶನಿವಾರ ಮಳೆಯಾಗುವ ಪ್ರದೇಶಗಳು: ನಾಳೆ (ಅ. 8) ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಈಶಾನ್ಯ ಭಾರತದಲ್ಲಿ ಕೂಡ ಭಾರೀ ಮಳೆಯಾಗಬಹುದು. ಉತ್ತರಾಖಂಡದಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಯಲಸೀಮಾದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಒಡಿಶಾ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಮರಾಠವಾಡ, ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ತೆಲಂಗಾಣದಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಜಾರ್ಖಂಡ್, ಬಿಹಾರ, ಹರಿಯಾಣ, ಚಂಡೀಗಢ, ದೆಹಲಿ, ಗುಜರಾತ್, ಗೋವಾ, ಮಧ್ಯ ಮಹಾರಾಷ್ಟ್ರ, ವಿದರ್ಭ, ಛತ್ತೀಸ್‌ಗಢ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.