Karnataka Rain: ನಿಲ್ಲದ ಮಳೆರಾಯನ ಅಬ್ಬರ, ಈ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿ
ಸತತ ಮಳೆಯಿಂದಾಗಿ ಅಲ್ಲಲ್ಲಿ ಜಲ ಅವಾಂತರಗಳು ಸೃಷ್ಟಿಯಾಗುತ್ತಿದೆ. ಕಲಬುರಗಿಯಲ್ಲಿ ಕಾಗಿಣ ನದಿ ತುಂಬಿ ಹರಿಯುತ್ತಿದೆ. ಇನ್ನೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ರೈತರು ಕಂಗಾಲಾಗಿದ್ದಾರೆ.
ಕಲಬುರಗಿ: ರಾಜ್ಯದಲ್ಲಿ ಮಳೆರಾಯನ ಆರ್ಭಟ (Karnataka Rain) ನಿಲ್ಲುವಂತೆ ಕಾಣುತ್ತಿಲ್ಲ. ಕೆಲವೊಂದು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು (Bengaluru Rains) ಸೇರಿದಂತೆ 8 ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಸೇಡಂ ತಾಲೂಕಿನಲ್ಲಿರುವ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮವಾಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಳಖೇಡ ಸೇತುವೆ ಜಲಾವೃತಗೊಂಡು ಕಲಬುರಗಿ-ಸೇಡಂ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸತತ ಮಳೆಗೆ ಕಂಗಾಲಾದ ರೈತರು
ಯಾದಗಿರಿ: ಜಿಲ್ಲೆಯಾದ್ಯಂತ ಬಾರಿ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಸತತ ಮಳೆಗೆ ಸಾವಿರಾರು ಎಕರೆ ಪ್ರದೇಶ ಜಮೀನು ಜಲಾವೃತಗೊಂಡ ಪರಿಣಾಮ ಜಿಲ್ಲೆಯ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿ ವರೆಗೆ ಸುರಿದ ಮಳೆಯಿಂದ ಯಾದಗಿರಿ ತಾಲೂಕಿನ ಅಬ್ಬೆತುಮಕುರ ರೈತರ ಜಮೀನಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಕಾಯಿ ಕಟ್ಟಿ ಹೂವು ಬಿಡುವ ಹಂತದಲ್ಲಿರುವ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ಇನ್ನೇನು 15 ದಿನ ಕಳೆದರೆ ಬೆಳೆ ರಾಶಿ ಆಗಬೇಕಿತ್ತು. ಈ ನಡುವೆ ಜಮೀನಿನಲ್ಲಿ ಎರಡು ಅಡಿಯಷ್ಟು ಮಳೆ ನೀರು ಆವರಿಸಿಕೊಂಡಿದೆ. ಇದರಿಂದಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 am, Fri, 7 October 22