ಮುಂಗಾರಿಗೆ ತುರ್ತು, ಹಿಂಗಾರಿಗೆ ಮುತ್ತು: ಸಿರವಾರ ಬೀರಲಿಂಗೇಶ್ವರ ಕಾರಣಿಕ
‘ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು ಪಕ್ಷಿ ಕಲಕಲ ಮಾಡಿತು’ ಎಂದು ಅರ್ಚಕರು ಕಾರಣಿಕ ನುಡಿದರು.
ರಾಯಚೂರು: ಮುಂದಿನ ಮಳೆ, ಬೆಳೆ ಬಗ್ಗೆ ಕಾರಣಿಕ ಹೇಳುವ ಮೂಲಕ ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕು ಹಳ್ಳಿಹೊಸೂರು ಗ್ರಾಮದ ಘನ ಗುರು ಬೀರಲಿಂಗೇಶ್ವರ ಜಾತ್ರೆಯು ಗುರುವಾರ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಬೀರಪ್ಪ ಪೂಜಾರಿ ‘ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು ಪಕ್ಷಿ ಕಲಕಲ ಮಾಡಿತು’ ಎಂದು ಕಾರಣಿಕ ನುಡಿದರು. ಜಾತ್ರೆಗೆ ಸೇರಿದ್ದ ಸಾವಿರಾರು ಭಕ್ತರು ‘ಹೋ’ ಎಂದು ದೊಡ್ಡ ಧ್ವನಿ ಮಾಡುತ್ತಾ ಕಾರಣಿಕವನ್ನು ಸ್ವಾಗತಿಸಿದರು.
ಮೈಲಾರಲಿಂಗೇಶ್ವರ ಕಾರಣಿಕ
ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಬೀರೂರು ಮೈಲಾರಲಿಂಗ ಸ್ವಾಮಿಯ ಕಾರಣಿಕ ಗುರುವಾರ (ಅ 6) ನಡೆಯಿತು. ವಿಜಯದಶಮಿ ಮಾರನೇ ದಿನ ನುಡಿಯುವ ಕಾರಣಿಕವನ್ನು ಜನರು ಆಸ್ಥೆಯಿಂದ ನಂಬುತ್ತಾರೆ. ನಸುಕಿನಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನ್ನು ಏರಿದ ಪೂಜಾರಿ ‘ಭೂಮಿಗೆ ವರುಣ ಸಿಂಚನವಾಯಿತು, ಕುರುಪಾಂಡವರ ಕಾದಾಡಿದರು, ಧರ್ಮದ ಜ್ಯೋತಿ ಬೆಳಗಿದರು’ ಎಂದು ಕಾರಣಿಕ ನುಡಿದರು.
ಮುಂದಿನ ವರ್ಷವೂ ಅತಿಯಾದ ಮಳೆಯಾಗಬಹುದು ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳ ಮಧ್ಯೆ ಸ್ಪರ್ಧೆ ಹೆಚ್ಚಾಗಬಹುದು ಎಂಬ ಸುಳಿವನ್ನು ಈ ಕಾರಣಿಕ ವಾಣಿ ನೀಡಿದೆ. ಆದರೆ ಅಂತ್ಯುವು ಮಂಗಳವಾಗಿರುತ್ತದೆ ಎನ್ನುವ ಮೂಲಕ ಹೊಸ ಭರವಸೆಯನ್ನೂ ಈ ಕಾರಣಿಕ ನುಡಿ ಮೂಡಿಸಿದೆ.
ಮಲತೇಶ ದೇವರ ಕಾರಣಿಕ
ಹಾವೇರಿ: ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರಣಿಕೋತ್ಸವದಲ್ಲಿ ಗೊರವಪ್ಪ ನಾಗಪ್ಪ ಉರ್ಮಿ ಕಾರಣಿಕ ನುಡಿದರು. ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎಂಬ ಅವರ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಯಿತು. ಕಾರಣಿಕವನ್ನು ವಿವರಿಸಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್, ‘ಮುಂದಿನ ವರ್ಷಗಳಲ್ಲಿ ಸಣ್ಣ ರೈತರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನೊಬ್ಬನಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ’ ಎಂದು ಹೇಳಿದರು.
Published On - 8:25 am, Fri, 7 October 22