#DelhiNeedsOxygen: ದೆಹಲಿಯ ಕುಸಿದ ಆರೋಗ್ಯ ವ್ಯವಸ್ಥೆ ಪಂಡಿತ್ ರಾಜನ್ ಮಿಶ್ರಾರ ಬಲಿ ಪಡೆಯಿತೇ?
‘ರಾಜನ್ ಮಿಶ್ರಾರಿಗೆ ವೆಂಟಿಲೇಟರ್ ಒದಗಿಸಲು ಆಸ್ಪತ್ರೆಯವರಿಗೆ ಆಗುತ್ತಿಲ್ಲ. ಅಲ್ಲಿರುವ ಎಲ್ಲ ವೆಂಟಿಲೇಟರ್ಗಳನ್ನೂ ರೋಗಿಗಳಿಗೆ ಅಳವಡಿಸಲಾಗಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’ ಎಂದು ಕುಟುಂಬದ ಆಪ್ತರು ಟ್ವಿಟರ್ನಲ್ಲಿ ಕೇಳಿಕೊಂಡಿದ್ದರು.
ಬೆಂಗಳೂರು: ‘ಮ್ಯೂಸಿಕ್ ಈಸ್ ವರ್ಷಿಪ್ ಫಾರ್ ಅಸ್’ (ಸಂಗೀತವೆಂದರೆ ನಮ್ಮ ಪಾಲಿಗೆ ಪೂಜೆ) ಎಂದೇ ಕಛೇರಿಗಳನ್ನು ಆರಂಭಿಸುತ್ತಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ ಜೋಡಿ ರಾಜನ್-ಸಾಜನ್ ಮಿಶ್ರಾ ಬೆಂಗಳೂರಿನಲ್ಲಿಯೂ ಹಲವು ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಈ ಜೋಡಿಯ ಮೊದಲ ಹೆಸರಾದ ರಾಜನ್ ಮಿಶ್ರಾ ದೆಹಲಿಯಲ್ಲಿ ಭಾನುವಾರ (ಏಪ್ರಿಲ್ 25) ನಿಧನರಾದರು. ರಾಜನ್ ಮಿಶ್ರಾ ನಿಧನರಾಗುವ ಕೆಲವೇ ಗಂಟೆಗಳಿಗೆ ಮೊದಲು #DelhiNeedsOxygen ಹ್ಯಾಷ್ಟ್ಯಾಗ್ನೊಂದಿಗೆ ಹಲವಾರು ಅಭಿಮಾನಿಗಳು ರಾಜನ್ ಮಿಶ್ರಾ ದೇಹಸ್ಥಿತಿಯ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಕೊರೊನಾ ಪಿಡುಗಿನ 2ನೇ ಅಲೆಯ ಬಿಗಿ ಹಿಡಿತಕ್ಕೆ ಸಿಲುಕಿರುವ ದೇಶದ ರಾಜಧಾನಿಯಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ಸತತವಾಗಿ ವರದಿಯಾಗುತ್ತಿದ್ದ ಸುದ್ದಿಯ ಮುಂದುವರಿದ ಭಾಗವೆನ್ನುವಂತೆ ದೇಶವೀಗ ತನ್ನ ಹೆಮ್ಮೆಯ ಸಂಗೀತ ವಿದ್ವಾಂಸನನ್ನು ಕಳೆದುಕೊಂಡಿದೆ. ನಗರ ಸೇರಿದಂತೆ ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಹೊಂದಿರುವ ಈ ಖ್ಯಾತ ಕಲಾವಿದರಿಗೆ ಹಲವು ನೇರ ಶಿಷ್ಯರೂ ನಗರದಲ್ಲಿದ್ದಾರೆ. ಕರ್ನಾಟಕದೊಂದಿಗೆ ಹತ್ತಿರದ ನಂಟು ಹೊಂದಿದ್ದ ಈ ಸರಸ್ವತಿನ ಪುತ್ರ ಸಾವಿಗೆ ಹಲವು ಹಿರಿಯ ಕಲಾವಿದರು ಶೋಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ರಾಜನ್ ಮಿಶ್ರಾ ನಿಧನ
ರಾಜನ್ ಮಿಶ್ರಾ ನಿಧನದ ಸುದ್ದಿ ಹೊರಬೀಳುವ ಕೆಲವೇ ಗಂಟೆಗಳ ಮೊದಲು ಟ್ವೀಟ್ ಮಾಡಿದ್ದ ಉದ್ಯಮಿ, ಈಸ್ಮೈ ಟ್ರಿಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಶಾಂತ್ ಪಿಟ್ಟಿ, ‘ಹಿಂದೂಸ್ತಾನಿ ಸಂಗೀತದ ದಂತಕಥೆ ಪಂಡಿತ್ ರಾಜನ್ ಮಿಶ್ರಾ ಅವರಿಗೆ ತಕ್ಷಣ ವೆಂಟಿಲೇಟರ್ ಬೇಕಿದೆ. ಅವರೀಗ ದೆಹಲಿಯ ತೀಸ್ ಹಜಾರಿಯಲ್ಲಿರುವ ಸೇಂಟ್ ಸ್ಟೀಫನ್ ಆಸ್ಪತ್ರೆಯಲ್ಲಿದ್ದಾರೆ. ನಾವು ಇವರನ್ನು ಉಳಿಸಿಕೊಳ್ಳಲೇಬೇಕು’ ಎಂದು #DelhiNeedsOxygen ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದರು.
Indian classical music legend Padma Bhushan Pandit Rajan Mishra urgently need #Ventilator. At present he in St. Stephen hospital, Tees hazari, Delhi. Urgent need of an ICU bed with Ventilator. A music legend, who we can’t loose. Pls help… #COVIDIOTS #DelhiNeedsOxygen pic.twitter.com/6Uc47i2LZc
— Nishant Pitti (@nishantpitti) April 25, 2021
ರಾಜನ್ ಮಿಶ್ರಾ ನಿಧನದ ನಂತರ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸಂತಾಪದ ಟ್ವೀಟ್ ಸಹ ಕೆಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಮಾನ್ಯ ಪ್ರಧಾನಿಗಳೇ ವೆಂಟಿಲೇಟರ್ ಸಿಗದ ಕಾರಣ ಪದ್ಮಭೂಷಣ ರಾಜನ್ ಮಿಶ್ರಾ ನಿಧನರಾದರು’ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜನ್ ಮಿಶ್ರಾ ಆರೋಗ್ಯ ಸ್ಥಿತಿಯ ಬಗ್ಗೆ ಸಂಜೆ ಆತಂಕದಿಂದ ಟ್ವೀಟ್ ಮಾಡಿದ್ದ ಸಂಗೀತ ಕಲಾವಿದ ಪವನ್ ಝಾ, ‘ಕೊರೊನಾ ಮತ್ತು ಹೃದಯಾಘಾತದಿಂದ ಪಂಡಿತ್ ರಾಜನ್ ಮಿಶ್ರಾರ ದೇಹಸ್ಥಿತಿ ಗಂಭೀರವಾಗಿದೆ. ಅವರಿಗೆ ಸೇಂಟ್ ಸ್ಟೀಫನ್ ಆಸ್ಪತ್ರೆಯ ವೈದ್ಯರು ಆಕ್ಸಿಜನ್ ಸೌಲಭ್ಯದ ಬೆಡ್ ಕಲ್ಪಿಸಿದ್ದಾರೆ. ಆದರೆ ಮಿಶ್ರಾರಿಗೆ ವೆಂಟಿಲೇಟರ್ ಒದಗಿಸಲು ಆಸ್ಪತ್ರೆಯವರಿಗೆ ಆಗುತ್ತಿಲ್ಲ. ಅಲ್ಲಿರುವ ಎಲ್ಲ ವೆಂಟಿಲೇಟರ್ಗಳನ್ನೂ ರೋಗಿಗಳಿಗೆ ಅಳವಡಿಸಲಾಗಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’ ಎಂದು ಆತಂಕದಲ್ಲಿ ಟ್ವೀಟ್ ಮಾಡಿದ್ದರು. ಇದನ್ನು ಸುಮಾರು 376 ಮಂದಿ ರಿಟ್ವೀಟ್ ಮಾಡಿದ್ದರು, 43 ಮಂದಿ ಇದೇ ಟ್ವೀಟ್ ಕೋಟ್ ಮಾಡಿ ಸಹಾಯಕ್ಕಾಗಿ ವಿನಂತಿಸಿದ್ದರು. ಪಂಡಿತ್ ವಿಶ್ವಮೋಹನ್ ಭಟ್ ಸೇರಿ ಹಲವರು ರಾಜನ್ ಮಿಶ್ರಾರನ್ನು ಉಳಿಸಿಕೊಳ್ಳಬೇಕೆಂದು ಟ್ವೀಟ್ ಮಾಡಿ ಒತ್ತಾಯಿಸಿದ್ದರು.
Padma Bhushan Pandit Rajan Mishra (Classical singer) urgently need Ventilator. At present he in St. Stephen hospital, Tees hazari, Delhi.. Please help immediately..
— Vishwa Mohan Bhatt (@VishwaMBhatt1) April 25, 2021
ಪವನ್ ಝಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಗೃಹ ಇಲಾಖೆ ಕಾರ್ಯದರ್ಶಿ ಸಂಜೀವ್ ಗುಪ್ತ, ‘ಸಾಜನ್ ಮಿಶ್ರಾರೊಂದಿಗೆ ಮಾತನಾಡಿದ್ದೇನೆ. ದೆಹಲಿ ಸರ್ಕಾರದೊಂದಿಗೆ ಅಗತ್ಯ ಸೌಲಭ್ಯ ಒದಗಿಸಲು ವಿನಂತಿಸಿದ್ದೇನೆ’ ಎಂದು ಹೇಳಿದ್ದರು. ಆ್ಯಂಬುಲೆನ್ಸ್ ವ್ಯವಸ್ಥೆಯಾಗಿ, ಬೇರೊಂದು ಆಸ್ಪತ್ರೆಗೆ ರಾಜನ್ ಮಿಶ್ರಾರನ್ನು ಸ್ಥಳಾಂತರಿಸಲು ವ್ಯವಸ್ಥೆ ರೂಪುಗೊಳ್ಳುವ ಹೊತ್ತಿಗೆ ರಾಜನ್ರ ದೇಹಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ವಿಧಿಯ ನಿರ್ಧಾರದ ಎದುರು ಎಲ್ಲರೂ ಅಸಹಾಯಕರಾದರು.
Dr John briefed me. The patient’s condition is extremely critical. With maximum Inotropic and Oxygen support, he was maintaining BP of 90/60 and that’s rather dangerous as per the doctors. He is in no condition of being shifted but has been taken to CTS ICU. Next 1 hr is critical
— Sanjeev Gupta (@sanjg2k1) April 25, 2021
ಆದರೆ ಇಷ್ಟೆಲ್ಲಾ ತುರ್ತು ಪ್ರಯತ್ನಗಳ ನಂತರವೂ ನಮ್ಮ ತಲೆಮಾರಿನ ಮಹಾನ್ ಸಾಧಕನನ್ನು ದೇಶ ಕಳೆದುಕೊಳ್ಳಬೇಕಾಯಿತು. ಕೊರೊನಾ ಸೋಂಕು, ಹೃದಯಾಘಾತದಿಂದ ರಾಜನ್ ಮಿಶ್ರಾ ನಿಧನರಾಗಿದ್ದು ನಿಜ. ಆದರೆ ಸಕಾಲದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ದೊರೆತಿದ್ದರೆ ರಾಜನ್ ಮಿಶ್ರಾ ಉಳಿಯುತ್ತಿದ್ದರು ಎಂದೇ ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
Such a devastating news..
sorry everyone, Pt Rajan Mishra could not be saved.
Hope Panditji finds himself in a better space then our world #RestinHustory Pt. Ji Thank You for Your Music. ???? https://t.co/fqjJXs907D pic.twitter.com/aScnH4HV5O
— Pavan Jha (@p1j) April 25, 2021
ರಾಜನ್ ಮಿಶ್ರಾರ ಆರೋಗ್ಯದ ಬಗ್ಗೆ ಸತತ ಅಪ್ಡೇಟ್ ನೀಡುತ್ತಿದ್ದ ಪವನ್ ಝಾ ಅವರ ಕೊನೆಯ ಟ್ವೀಟ್ ಸಹ ಇದನ್ನೇ ಧ್ವನಿಸುತ್ತದೆ. ‘ಪಂಡಿತ್ ರಾಜನ್ ಮಿಶ್ರಾರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಂಡಿತರು ನಮ್ಮ ಜಗತ್ತಿಗಿಂತಲೂ ಉತ್ತಮ ಸ್ಥಳಕ್ಕೆ ಹೋಗಿದ್ದಾರೆ. ಪಂಡಿತ್ ಜಿ ನೀವು ಹರಿಸಿದ ನಾದಸುಧೆಗೆ ನಾವು ಋಣಿ’ ಎಂದು ಅವರ ಟ್ವೀಟ್ ಕೊನೆಯಾಗುತ್ತದೆ.
(Rajan mishra death netizens tweets using Delhi needs oxygen hashtag as Delhi faces lack of Oxygen)
ಇದನ್ನೂ ಓದಿ: ಕುಂಭಮೇಳಕ್ಕೆ ಹೋಗಿದ್ದೇ ತಪ್ಪಾಯ್ತು; ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಸಾವಿನ ನಿಜವಾದ ಕಾರಣ ಬಯಲು
Published On - 10:25 pm, Sun, 25 April 21