ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ವಿವಾಹಕ್ಕೆ ವರನಿಗೆ ಗಡಿಯಲ್ಲಿ ನೋ ಎಂಟ್ರಿ; ಮದುವೆಯೇ ಕ್ಯಾನ್ಸಲ್!

ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಎರಡೂ ದೇಶಗಳವರಿಗೆ ಪರಸ್ಪರ ಪ್ರವೇಶ ನಿಷೇಧಿಸಲಾಗಿದೆ. ಅಟ್ಟಾರಿ-ವಾಘಾ ಗಡಿ ಬಂದ್ ಆಗಿರುವುದರಿಂದ ಕೆಲವು ನಾಗರಿಕರಿಗೆ ಬಹಳ ತೊಂದರೆಯಾಗಿದೆ. ಇದೀಗ ರಾಜಸ್ಥಾನದ ವರನೊಬ್ಬನಿಗೆ ಎರಡೂ ದೇಶಗಳ ನಡುವಿನ ಈ ನಿರ್ಧಾರದಿಂದ ಮದುವೆಯೇ ಕ್ಯಾನ್ಸಲ್ ಆಗಿದೆ. ಪಾಕಿಸ್ತಾನದ ವಧುವಿನ ಜೊತೆ ಮದುವೆಯಾಗಬೇಕಿದ್ದ ಬಾರ್ಮರ್ ಯುವಕ ಬರಾತ್ ಜೊತೆ ವಾಘಾ ಗಡಿಗೆ ತೆರಳಿದಾಗ ಆತನಿಗೆ ಪ್ರವೇಶ ನಿರಾಕರಿಸಲಾಗಿದೆ. ಆತನನ್ನು ವಾಪಾಸ್ ಕಳುಹಿಸಲಾಗಿದೆ.

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ವಿವಾಹಕ್ಕೆ ವರನಿಗೆ ಗಡಿಯಲ್ಲಿ ನೋ ಎಂಟ್ರಿ; ಮದುವೆಯೇ ಕ್ಯಾನ್ಸಲ್!
Barmer Groom

Updated on: Apr 25, 2025 | 7:27 PM

ನವದೆಹಲಿ, ಏಪ್ರಿಲ್ 25: ಭಾರತ-ಪಾಕಿಸ್ತಾನದ ಸಂಬಂಧಗಳನ್ನು ಹದಗೆಡಿಸಿರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ (Terrorist Attack) ನಂತರ, ಭಾರತ- ಪಾಕಿಸ್ತಾನದ ವಧು-ವರರ ನಡುವೆ ನಡೆಯಬೇಕಿದ್ದ ಮದುವೆಯೇ ಮುರಿದುಬಿದ್ದಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕುಟುಂಬವೊಂದರ ವರ ಪಾಕಿಸ್ತಾನದ ಯುವತಿಯ ಜೊತೆ ಮದುವೆಯಾಗಲು ಅಟ್ಟಾರಿ ಗಡಿ ದಾಟಲು ಬರಾತ್​ನೊಂದಿಗೆ ಹೋಗಿದ್ದರು. ಆದರೆ, ಗಡಿಯನ್ನು ಬಂದ್ ಮಾಡಿರುವುದರಿಂದ ಅವರನ್ನು ವಾಪಾಸ್ ಮನೆಗೆ ಕಳುಹಿಸಲಾಗಿದೆ. ಇದರಿಂದ ಅವರ ಮದುವೆ ಮುರಿದುಬಿದ್ದಿದೆ.

ಏಪ್ರಿಲ್ 30ರಂದು ನಿಗದಿಯಾಗಿದ್ದ ವಿವಾಹ ಮುರಿದುಬಿದ್ದಿದೆ. ಇಂದು ಅವರು ವಾಘಾ-ಅಟ್ಟಾರಿ ಗಡಿಗೆ ಬಂದಾಗ ಪಾಕಿಸ್ತಾನಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದಾಗಿ ಅವರು ಮನೆಗೆ ಮರಳಬೇಕಾಯಿತು. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಬಾರ್ಮರ್‌ನ 25 ವರ್ಷದ ವರ ಶೈತಾನ್ ಸಿಂಗ್, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಮರ್‌ಕೋಟ್‌ನ ನಿವಾಸಿ ಕೇಸರ್ ಕನ್ವರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗಡಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ನಿಶ್ಚಿತಾರ್ಥವನ್ನು ಏರ್ಪಡಿಸಲಾಗಿತ್ತು. ಏಪ್ರಿಲ್ 30ರಂದು ಮದುವೆಗೆ ದಿನ ನಿಗದಿಯಾಗಿತ್ತು. ಆದರೆ, ಗಡಿಯಲ್ಲಿ ಪಾಕಿಸ್ತಾನದವರಿಗೆ ಭಾರತಕ್ಕೆ ಎಂಟ್ರಿ ಹಾಗೂ ಭಾರತದವರಿಗೆ ಪಾಕಿಸ್ತಾನಕ್ಕೆ ಎಂಟ್ರಿ ನಿಷೇಧಿಸಿರುವುದರಿಂದ ಅವರಿಗೆ ಹೋಗಲು ಅನುಮತಿ ಸಿಕ್ಕಿಲ್ಲ.

ಇದನ್ನೂ ಓದಿ: Viral : ಮದುವೆ ಮೆರವಣಿಗೆ ನಿಲ್ಲಿಸಿ, ಟ್ರಾಫಿಕ್ ಕ್ಲಿಯರ್ ಮಾಡಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಮದುಮಗ

4 ವರ್ಷದ ಹಿಂದೆಯೇ ಅವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಆದರೆ, ಮೂರು ವರ್ಷಗಳ ಕಾಲ ಅಧಿಕಾರಶಾಹಿ ವಿಳಂಬ ಮತ್ತು ರಾಜತಾಂತ್ರಿಕ ಅಡೆತಡೆಗಳನ್ನು ಎದುರಿಸಿದ ನಂತರ, ಫೆಬ್ರವರಿ 18ರಂದು ಅವರಿಗೆ ವೀಸಾ ಕ್ಲಿಯರೆನ್ಸ್ ನೀಡಲಾಗಿತ್ತು. ಅವರು ಮೇ 12ರಂದು ಮುಕ್ತಾಯಗೊಳ್ಳಲಿರುವ ವೀಸಾದ ಮಾನ್ಯತೆಯ ಅವಧಿಯೊಳಗೆ ಏಪ್ರಿಲ್ 30ಕ್ಕೆ ವಿವಾಹ ದಿನಾಂಕವನ್ನು ನಿಗದಿಪಡಿಸಿದ್ದರು. ಆದರೂ ಅನಿರೀಕ್ಷಿತವಾಗಿ ನಡೆದ ರಾಜತಾಂತ್ರಿಕ ನಿರ್ಧಾರದಿಂದಾಗಿ ಅವರ ವಿವಾಹ ಮೆರವಣಿಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಅವಕಾಶವೇ ಸಿಗಲಿಲ್ಲ. ಎರಡೂ ದೇಶಗಳಲ್ಲಿ ಪರಸ್ಪರ ವೀಸಾ ರದ್ದು ಮಾಡಿರುವುದರಿಂದ ಆ ವರನಿಗೆ ವೀಸಾ ಮಾನ್ಯತೆಯಿದ್ದರೂ ಪಾಕಿಸ್ತಾನ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ