Fact Check: ಇವರೇ ನೋಡಿ ಹಿಂದೂಗಳನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕರು ಎಂದು ಖಜಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ಸ್ ವಿಡಿಯೋ ವೈರಲ್
Pahalgam Terrorists Attack: ಐದು ಜನ ಯುವಕರು ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಯುವಕರು ಅಸ್ಸಲಾಂ ಅಲೈಕುಮ್ ಎಂದು ಹೇಳುವುದನ್ನು ಕೇಳಬಹುದು. ಈ ಐದು ಜನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.

ಬೆಂಗಳೂರು (ಏ. 25): ಪಹಲ್ಗಾಮ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ (Pahalgam Terrorists Attack) ಕನಿಷ್ಠ 26 ಪ್ರವಾಸಿಗರು ಸಾವನ್ನಪ್ಪಿದ ದುರಂತ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ಹರಿದಾಡುತ್ತಿವೆ. ಇದೀಗ ಐದು ಜನ ಯುವಕರು ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಯುವಕರು ಅಸ್ಸಲಾಂ ಅಲೈಕುಮ್ ಎಂದು ಹೇಳುವುದನ್ನು ಕೇಳಬಹುದು. ಈ ಐದು ಜನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇವರೇ ನೋಡಿ ನಮ್ಮ ಹಿಂದೂಗಳನ್ನ ಬಲಿ ಪಡೆದ ಸೂ**. ಶಿವನೇ ಇವರ ಬಲಿ ಯಾವಾಗ ಆಗೋದು, ಆದಷ್ಟು ಬೇಗ ಇವರನ್ನ ಮೇಲೆ ಕರ್ಕೋಳಪ್ಪಾ’’ ಎಂದು ಒಂದು ವಿಡಿಯೋಕ್ಕೆ ಕ್ಯಾಪ್ಶನ್ ಬರೆದಿದ್ದರೆ, ಮತ್ತೊಂದು ವಿಡಿಯೋಕ್ಕೆ, ‘‘30 ಹಿಂದೂ ಅಮಾಯಕರನ್ನು ಕೊಂದ ಜಿಹಾದಿಗಳು’’ ಎಂದು ಬರೆದುಕೊಂಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕರು ಇವರಲ್ಲ:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ಸ್ಕ್ರೀನ್ ಶಾಟ್ ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಆಗ ಈ ವಿಡಿಯೋದೊಂದಿಗೆ ಪತ್ರಕರ್ತ ಸಚಿನ್ ಗುಪ್ತಾ ಅವರ ಟ್ವೀಟ್ ನಮಗೆ ಸಿಕ್ಕಿದೆ. ಈ ಟ್ವೀಟ್‌ನಲ್ಲಿ ಸಚಿನ್ ಗುಪ್ತಾ ಹೀಗೆ ಬರೆದಿದ್ದಾರೆ, ‘‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿದವರು ಇವರು ಎಂದು ಆರೋಪಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಇವರೆಲ್ಲರೂ ಖಜಾಕಿಸ್ತಾನದ ಸಾಮಾಜಿಕ ಮಾಧ್ಯಮದ ಕಂಟೆಂಟ್ ಕ್ರಿಯೇಟರ್ಸ್. ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ’’ ಎಂದು ಹೇಳಿದ್ದಾರೆ.
सोशल मीडिया पर दावा किया जा रहा कि ये पहलगाम में आतंकी हमला करने के आरोपी हैं।
जबकि ये सभी कज़ाकिस्तान के सोशल मीडिया इन्फ्लुएंसर्स हैं। लाखों में फैन फॉलोइंग है।
Insta ID : https://t.co/isUmGjT5ct pic.twitter.com/VpBjjtNTqf
— Sachin Gupta (@SachinGuptaUP) April 24, 2025
ಈ ಪೋಸ್ಟ್ ಜೊತೆಗೆ, ಸಚಿನ್ ಗುಪ್ತಾ ಅವರು ಸಾದಿಕ್ ಎಂಬ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಖಾತೆ ಐಡಿಯನ್ನು ಸಹ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋವನ್ನು ಏಪ್ರಿಲ್ 11 ರಂದು ಪೋಸ್ಟ್ ಮಾಡಿರುವುದನ್ನು ಸಾದಿಕ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಬಹುದು. ಈ ಪೋಸ್ಟ್ ಅನ್ನು ಸಾದಿಕ್ ರಷ್ಯನ್ ಭಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇದಲ್ಲದೆ, ಸಾದಿಕ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಈ 4 ಜನ ಸ್ನೇಹಿತರೊಂದಿಗೆ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇವರು ವಿಡಿಯೋ ಕ್ರಿಯೇಟರ್ ಆಗಿದ್ದಾರೆ.
View this post on Instagram
ಈ ಗುಂಪಿನಲ್ಲಿರುವ ಮತ್ತೋರ್ವನ ಇನ್‌ಸ್ಟಾಗ್ರಾಮ್ ಖಾತೆ ಕೂಡ ನಮಗೆ ಸಿಕ್ಕಿದೆ. ಇವರು ಭಯೋತ್ಪಾದಕರು ಎಂದು ವಿಡಿಯೋ ವೈರಲ್ ಆಗುವುದನ್ನು ಗಮನಿಸಿ ತಮ್ಮ ಇನ್ಸ್ಟಾದಲ್ಲಿ ಸ್ಟೋರಿ ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ. ‘‘ನಾನು ಭಯೋತ್ಪಾದಕನಲ್ಲ. ಖಜಾಕಿಸ್ತಾನದ ಬಾಕ್ಸರ್. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ಜನರನ್ನು ನಾನು ತುಂಬಾ ಪ್ರೀತಿಸುತ್ತೇನೆ’’ ಎಂದು ಬರೆದುಕೊಂಡಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ಕೆಳಗೆ ನೋಡಬಹುದು.

ಖಜಾಕಿಸ್ತಾನದ ಕಂಟೆಂಟ್ ಕ್ರಿಯೇಟರ್
ನಾವು ಪಹಲ್ಗಾಮ್ ದಾಳಿಯ ಶಂಕಿತರ ಬಗ್ಗೆ ಗೂಗಲ್‌ನಲ್ಲಿಯೂ ಹುಡುಕಿದೆವು. ವರದಿಯ ಪ್ರಕಾರ, ದಾಳಿಯಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರು ಮತ್ತು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಬಗ್ಗೆ ಮಾಹಿತಿ ಸಿಕ್ಕಿದೆ. ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಬಸ್ರಾನ್ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಗುರುತಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಆಗಿದೆ. ಈ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಕೂಡ ಭಾಗಿಯಾಗಿದ್ದಾರೆ. ಈ ಭಯೋತ್ಪಾದಕರು 15 ರಿಂದ 20 ನಿಮಿಷಗಳ ಕಾಲ ಎಕೆ-47 ನಿಂದ ನಿರಂತರವಾಗಿ ಗುಂಡು ಹಾರಿಸಿದರು. ದಾಳಿ ಮಾಡಿದ ಇಬ್ಬರು ಭಯೋತ್ಪಾದಕರು ಪಶ್ತೂನ್ ಭಾಷೆಯಲ್ಲಿ ಮಾತನಾಡುತ್ತಿದ್ದರು, ಇದು ಅವರು ಪಾಕಿಸ್ತಾನಿ ನಾಗರಿಕರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಸಹ ಗುರುತಿಸಲಾಗಿದೆ. ಅವರ ಹೆಸರುಗಳು ಆದಿಲ್ ಅಹ್ಮದ್ ಠಾಕೂರ್ ಮತ್ತು ಆಸಿಫ್ ಶೇಖ್ ಎಂದು ಹೇಳಲಾಗಿದೆ.
Fact Check: Pahalgam Terrorists Attack- ಬೈಸರನ್ ಕಣಿವೆಯಲ್ಲಿ ಶವಗಳಿರುವ ವೈರಲ್ ಫೋಟೋದ ನಿಜಾಂಶ ಏನು?
ಈ ಮೂಲಕ ವೈರಲ್ ಆಗುತ್ತಿರುವ ವಿಡಿಯೋ ಖಜಾಕಿಸ್ತಾನದ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್ಗಳದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಪಹಲ್ಗಾಮ್ ದಾಳಿಯ ಭಯೋತ್ಪಾದಕರ ವಿಡಿಯೋ ಅಲ್ಲ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Fri, 25 April 25