Fact Check: Pahalgam Terrorists Attack- ಬೈಸರನ್ ಕಣಿವೆಯಲ್ಲಿ ಶವಗಳಿರುವ ವೈರಲ್ ಫೋಟೋದ ನಿಜಾಂಶ ಏನು?
Pahalgam Terrorists Attack: ಬೈಸರನ್ ಕಣಿವೆಯಲ್ಲಿ ಶವಗಳು ಬಿದ್ದಿರುವುದನ್ನು ಮತ್ತು ಪೊಲೀಸ್ ಅಧಿಕಾರಿಗಳು ಅವುಗಳನ್ನು ನೋಡಿಕೊಳ್ಳುತ್ತಿರುವುದನ್ನು ವೈರಲ್ ಫೋಟೋದಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ಚಿತ್ರವನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಕೃತಕ ಬುದ್ದಿಮತ್ತೆಯಿಂದ (AI) ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.

ಬೆಂಗಳೂರು (ಏ. 25): ಕಳೆದ ಮಂಗಳವಾರ (ಏಪ್ರಿಲ್ 22) ರಾಜಧಾನಿ ಶ್ರೀನಗರದಿಂದ 100 ಕಿ.ಮೀ. ದಕ್ಷಿಣಕ್ಕೆ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ (Pahalgam Terrorists Attack) ಇಪ್ಪತ್ತಾರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. 40 ಭಾರತೀಯ ಸೇನಾ ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ನಂತರ, ಏಪ್ರಿಲ್ 22 ರಂದು ನಡೆದ ದಾಳಿ ಇದಾಗಿದೆ. ಈ ಬೆಳವಣಿಗೆಗಳ ಮಧ್ಯೆ, ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ಸನ್ನಿವೇಶ ಎಂದು ಹೇಳಿಕೊಳ್ಳುವ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಬೈಸರನ್ ಕಣಿವೆಯಲ್ಲಿ ಶವಗಳು ಬಿದ್ದಿರುವುದನ್ನು ಮತ್ತು ಪೊಲೀಸ್ ಅಧಿಕಾರಿಗಳು ಅವುಗಳನ್ನು ನೋಡಿಕೊಳ್ಳುತ್ತಿರುವುದನ್ನು ವೈರಲ್ ಫೋಟೋದಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ಚಿತ್ರವನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಟೆರರಿಸ್ತಾನ್‌ನ ದೊಡ್ಡ ಶಕ್ತಿ ಅದರ ಪರಮಾಣು ಬಾಂಬ್ ಅಲ್ಲ, ಬದಲಿಗೆ ಇಲ್ಲಿ ಬೆಳೆಯುತ್ತಿರುವ ಸೂಕ್ಷ್ಮ ಬಾಂಬ್. ಪಾಕಿಸ್ತಾನ ಎಂಬ ವೈರಸ್ ಅನ್ನು ಒಮ್ಮೆ ಅಳಿಸಲು ಪ್ರಯತ್ನಿಸಿ, ಭಾರತ ಸರ್ಕಾರ, ಬಹುಶಃ ಮಾನವೀಯತೆಯನ್ನು ಉಳಿಸಬಹುದು’’ ಎಂದು ಬರೆದುಕೊಂಡಿದ್ದಾರೆ.
ಶವಗಳಿರುವ ವೈರಲ್ ಫೋಟೋದ ನಿಜಾಂಶ ಏನು?:
ಟಿವಿ9 ಕನ್ನಡ ಈ ವೈರಲ್ ಪೋಸ್ಟ್ ಬಗ್ಗೆ ತನಿಖೆ ನಡೆಸಿದ್ದು, ಇದು ಕೃತಕ ಬುದ್ದಿಮತ್ತೆಯಿಂದ (AI) ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ. ಇದನ್ನು ಮೆಟಾ AI ಉಪಕರಣದ ಸಹಾಯದಿಂದ ರಚಿಸಲಾಗಿದೆ. ವಾಟರ್‌ಮಾರ್ಕ್ ಇದ್ದರೂ, ಜನರು ಈ ಫೋಟೋವನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ನಾವು ಮೆಟಾ AI ನ ವಾಟರ್‌ಮಾರ್ಕ್ ಅನ್ನು ಕಂಡೆವು. ಇದರಿಂದ ಚಿತ್ರವನ್ನು ಮೆಟಾ AI ಉಪಕರಣವನ್ನು ಬಳಸಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಯಿತು. ತನಿಖೆಯನ್ನು ಮತ್ತಷ್ಟು ಮುಂದುವರಿಸಿ, sightengine ಎಂಬ AI ಪರಿಶೀಲನಾ ಉಪಕರಣವನ್ನು ಬಳಸಿಕೊಂಡು ಚಿತ್ರವನ್ನು ಹುಡುಕಿದ್ದೇವೆ. ಇದು ಚಿತ್ರವು ಶೇಕಡಾ 99 ರಷ್ಟು AI ಎಂದು ದೃಢಪಡಿಸಿತು. ಹಾಗೆಯೆ Wadit AI ಎಂಬ ಉಪಕರಣವನ್ನು ಬಳಸಲಾಯಿತು. ಇದು ಕೂಡ ವೈರಲ್ ಆಗಿರುವ ಚಿತ್ರವು AI ಮೂಲಕ ರಚಿಸಲ್ಪಟ್ಟಿದೆ ಎಂದು ಹೇಳಿದೆ.
Fact Check: ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಗುಂಡಿನ ದಾಳಿ?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ
ಈ ಮೂಲಕ ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ಚಿತ್ರವು AI ಮೂಲಕ ರಚಿಸಲ್ಪಟ್ಟಿದೆ ಎಂದು ಟಿವಿ ಕನ್ನಡ ತನಿಖೆಯಿಂದ ತಿಳಿದುಬಂದಿದೆ. ಅದನ್ನು ನಿಜವೆಂದು ಪರಿಗಣಿಸಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅನೇಕ ಸುಳ್ಳು ಮಾಹಿತಿಗಳು, ವಿಡಿಯೋಗಳು, ಫೋಟೋ ಹರಿದಾಡುತ್ತಿದ್ದು ಯಾವುದೇ ಪೋಸ್ಟ್ ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇನ್ನು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬೆನ್ನಲ್ಲೇ ಭಾರತೀಯ ಸೇನೆ ಅಲರ್ಟ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೆದೆ ಬಡಿದಿದ್ದಾರೆ. ಪಹಲ್ಗಾಮ್ ದಾಳಿ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಹೊತ್ತುಕೊಂಡಿತ್ತು. ಇದೀಗ ಭಾರತೀಯ ಸೇನೆ ಬಹುದೊಡ್ಡ ಬೇಟೆಯನ್ನೇ ಆಡಿದ್ದು, ಟಾಪ್ ಕಮಾಂಡರ್ ಅಲ್ತಾಫ್ನನ್ನು ಹತ್ಯೆ ಮಾಡಿವೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ