Fact Check: ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಗುಂಡಿನ ದಾಳಿ?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ
Pahalgam Terrorists Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ಸೇನಾ ಸಿಬ್ಬಂದಿಗಳು ಫಿರಂಗಿ ಮೂಲಕ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ಇತ್ತೀಚಿನದಲ್ಲ, ಇದು ಸುಮಾರು ಐದು ವರ್ಷಗಳಷ್ಟು ಹಳೆಯದ್ದಾಗಿದೆ.

ಬೆಂಗಳೂರು (ಏ. 25): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorists Attack) ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಒಳಗೊಂಡಂತೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ಸೇನಾ ಸಿಬ್ಬಂದಿಗಳು ಫಿರಂಗಿ ಮೂಲಕ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು , ಭಾರತೀಯ ಸೈನಿಕರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘LOC ನಿಯಂತ್ರಣ ರೇಖೆಯ ತಟ್ಟಪಾನಿ ಸೆಕ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಗುಂಡಿನ ದಾಳಿ’’ ಎಂದು ಬರೆದುಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಗುಂಡಿನ ದಾಳಿ ನಡೆದಿರುವುದು ನಿಜವೇ?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ಇತ್ತೀಚಿನದಲ್ಲ, ಇದು ಸುಮಾರು ಐದು ವರ್ಷಗಳಷ್ಟು ಹಳೆಯದ್ದಾಗಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆಗ ಈ ವಿಡಿಯೋವನ್ನು ಏಪ್ರಿಲ್ 15, 2020 ರಂದು ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ನಮಗೆ ಕಂಡುಬಂದಿದೆ. ಆದರೆ, ಈ ವಿಡಿಯೋದ ಜೊತೆಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ಆ ವಿಡಿಯೋ ಇತ್ತೀಚಿನದಲ್ಲ, ಬದಲಾಗಿ ಏಪ್ರಿಲ್ 2020 ರದ್ದು ಎಂಬುದು ಸ್ಪಷ್ಟವಾಯಿತು.
ಹುಡುಕಾಟದ ಸಮಯದಲ್ಲಿ ಜೂನ್ 14, 2020 ರಂದು ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡು ಖಾಸಗಿ ಸುದ್ದಿ ವಾಹಿನಿಯೊಂದು ವೀಡಿಯೊ ವರದಿ ಮಾಡಿರುವುದು ಸಿಕ್ಕಿದೆ. ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ಸೂಕ್ತ ಉತ್ತರವನ್ನು ನೀಡುತ್ತಿದೆ. ವರದಿಯಲ್ಲಿ ವಿಡಿಯೋದ ಮೂಲ ಅಥವಾ ಸ್ಥಳವನ್ನು ಉಲ್ಲೇಖಿಸದಿದ್ದರೂ, ಘಟನೆ ಹಳೆಯದು ಎಂಬುದು ಸ್ಪಷ್ಟವಾಗಿದೆ.
ಇನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳಿಗೆ ಪ್ರತೀಕಾರದ ಕ್ರಮ ಕೈಗೊಳ್ಳಲು ಮುಕ್ತ ಹಸ್ತ ನೀಡಲಾಗಿದೆ. ಏಪ್ರಿಲ್ 23, 2025 ರ ವರದಿ ಮಾಡಿದ ಪ್ರಕಾರ, ಪೂಂಚ್‌ನ ತಟ್ಟಪಾನಿ ಪ್ರದೇಶದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿದೆ.
ತರುವಾಯ, ವೈರಲ್ ವಿಡಿಯೋ 2020 ರ ಹಿಂದಿನದು ಎಂದು ನಾವು ತೀರ್ಮಾನಿಸುತ್ತೇವೆ. ಆ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ನಂತರ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುತ್ತಿತ್ತು. ಇದು ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿಲ್ಲ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯ ಪ್ರಮುಖ ಆರೋಪಿಗಳಿಗಾಗಿ ಭಾರತೀಯ ಸೇನೆಯು ಹಗಲು-ರಾತ್ರಿ ಹುಡುಕಾಟ ನಡೆಸುತ್ತಿದೆ. ಆರೋಪಿಗಳಲ್ಲಿ ಒಬ್ಬನನ್ನು ಪಾಕಿಸ್ತಾನಿ ಪ್ರಜೆ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಎಂದು ಗುರುತಿಸಲಾಗಿದೆ. ಎನ್ಐಎ ಅಧಿಕಾರಿಗಳನ್ನು ಉಲ್ಲೇಖಿಸಿ ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮೂಸಾ ಕಳೆದ ಒಂದು ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ. ಮತ್ತು ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಮಾಡಿದ ಹಿಂದಿನ ಕನಿಷ್ಠ ಮೂರು ದಾಳಿಗಳಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ