ಜೈಪುರ, ಜನವರಿ 30: ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸರಸ್ವತಿ ಮೂರ್ತಿಯನ್ನು (Saraswati Idol) ಕಡ್ಡಾಯವಾಗಿ ಪ್ರತಿಷ್ಠಾಪಿಸುವಂತೆ ರಾಜಸ್ಥಾನದ (Rajasthan) ಶಿಕ್ಷಣ ಸಚಿವ ಮದನ್ ದಿಲಾವರ ಅವರು ಆದೇಶ ಹೊರಡಿಸಿದ್ದಾರೆ. ಶಾಲೆಯ ಮುಖ್ಯದ್ವಾರದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಸರಸ್ವತಿಯ ಭಾವಚಿತ್ರ ಅಥವಾ ಮೂರ್ತಿ ಇಲ್ಲದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಗೆ ಶಾಲೆಗಳಲ್ಲಿ ವಸ್ತ್ರ ಸಂಹಿತೆಯನ್ನು ಕೂಡ ಜಾರಿಗೊಳಿಸಲಾಗುವುದು ಎಂದಿದ್ದಾರೆ. ವಿದ್ಯಾರ್ಥಿಗಳ ವಯಸ್ಸು ಮತ್ತು ಲಿಂಗವನ್ನು ಆಧರಿಸಿ ವಸ್ತ್ರ ಸಂಹಿತೆ ನಿರ್ಧರಿಸಲಾಗುತ್ತದೆ. ಇನ್ನು ಶಾಲೆಗಳಲ್ಲಿ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಲೂ ಹಿಜಾಬ್ ವಿವಾದ ಭುಗಿಲೆದ್ದಿದೆ. ರಾಜಸ್ಥಾನದಲ್ಲಿ ಬಿಜೆಪಿಯ ಭಜನ್ಲಾಲ್ ಶರ್ಮಾ ಅಧಿಕಾರಕ್ಕೇರಿದ ಬಳಿಕ ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಶಾಲೆಗಳು ಮತ್ತು ಮದರಸಾಗಳಲ್ಲಿಯೂ ಹಿಜಾಬ್‌ನ್ನು ನಿಷೇಧಿಸಬೇಕು ಎಂದು ರಾಜಸ್ಥಾನದ ಹಿರಿಯ ಸಚಿವ ಕಿರೋರಿ ಲಾಲ್ ಮೀನಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಧರ್ಮ ಜಾಗೃತಿ ಸಭೆ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆಗೆ ನಿರ್ಧಾರ, ಸರ್ಕಾರಕ್ಕೆ 8 ಅಂಶಗಳ ಪತ್ರ
ಜೈಪುರದ ಶಾಲೆಯೊಂದರಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸ್ತ್ರ ಸಂಹಿತೆ ಜಾರಿ ಮಾಡುವಂತೆ ರಾಜಸ್ಥಾನ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗಳಿಗೆ ಬರಬೇಕು, ಈ ಮೂಲಕ ಶಿಸ್ತು ಕಲಿಯಬೇಕು. ವಸ್ತ್ರ ಸಂಹಿತೆ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ ಎಂದರು.
“ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಬರದೇ ‘ಪೈಜಾಮ’ ಹಾಕಿಕೊಂಡು ಬಂದರೆ ಚೆನ್ನಾಗಿ ಕಾಣಿಸುತ್ತದೆಯೇ? ಜನ ಅವರ ಮಾತು ಕೇಳುತ್ತಾರಾ? ಟೆಡ್ಡಿ, ಕ್ಯಾಪ್ ಹಾಕಿಕೊಂಡು ಬರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಈ ಹಿಂದೆ ನೋಡಿದ್ದೇವೆ. ವಸ್ತ್ರ ಸಂಹಿತೆ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ, ಸೂಚನೆಗಳನ್ನು ನೀಡಲಾಗಿದೆ ಮತ್ತು ಅವುಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Tue, 30 January 24