ಸುಳ್ಳು ಹೇಳುವ ಅಗತ್ಯವಿಲ್ಲ: ತಮ್ಮನ್ನು ಮೋಸಗಾರ ಎಂದ ಅಶೋಕ್ ಗೆಹ್ಲೋಟ್​ಗೆ ಸಚಿನ್ ಪೈಲಟ್ ತಿರುಗೇಟು

‘ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಬೇಕಿರುವುದು ಈ ಕ್ಷಣದ ತುರ್ತು‘ ಎಂದು ಸಚಿನ್ ಪೈಲಟ್ ಹೇಳಿದರು.

ಸುಳ್ಳು ಹೇಳುವ ಅಗತ್ಯವಿಲ್ಲ: ತಮ್ಮನ್ನು ಮೋಸಗಾರ ಎಂದ ಅಶೋಕ್ ಗೆಹ್ಲೋಟ್​ಗೆ ಸಚಿನ್ ಪೈಲಟ್ ತಿರುಗೇಟು
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 25, 2022 | 9:01 AM

ಭೋಪಾಲ್: ತಮ್ಮ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ತಮ್ಮ ಬಗ್ಗೆ ಮಾಡಿರುವ ಆರೋಪಗಳ ಬಗ್ಗೆ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದಾರೆ. ‘ಇವೆಲ್ಲ ಸುಳ್ಳು ಮತ್ತು ಆಧಾರರಹಿತ ಆರೋಪಗಳು. ಇಂಥ ಹೇಳಿಕೆಗಳನ್ನು ಕೊಡುವ ಅಗತ್ಯವೇ ಇರಲಿಲ್ಲ’ ಎಂದು ಅವರು ಎಎನ್​ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ‘ನನ್ನ ವಿರುದ್ಧ ಹೀಗೆ ಬೇಕಾಬಿಟ್ಟಿ ಆರೋಪಗಳನ್ನು ಮಾಡುವ ಬದಲು ಗುಜರಾತ್ ಚುನಾವಣೆಯ ಬಗ್ಗೆ ಗೆಹ್ಲೋಟ್ ಗಮನಹರಿಸಲಿ. ಗುಜರಾತ್ ಚುನಾವಣೆಯ ನಂತರ ಕೆಲವೇ ದಿನಗಳಲ್ಲಿ ರಾಜಸ್ಥಾನದಲ್ಲಿಯೂ ಚುನಾವಣೆಗಳು ನಡೆಯಲಿವೆ’ ಎಂದು ಸಲಹೆ ಮಾಡಿದ್ದಾರೆ.

‘ನನ್ನನ್ನು ಅಸಮರ್ಥ, ಸಂಚುಕೋರ ಎಂದು ಗೆಹ್ಲೋಟ್ ಕರೆದಿದ್ದಾರೆ. ಹಲವು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಹಾಗೂ ಅನಪೇಕ್ಷಣೀಯ’ ಎಂದು ಅವರು ಹೇಳಿದ್ದಾರೆ. ‘ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಬೇಕಿರುವುದು ಈ ಕ್ಷಣದ ತುರ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿಸುವುದು ಹೇಗೆ ಎಂಬ ಬಗ್ಗೆ ನಾವು ಯೋಚಿಸಬೇಕಿದೆ. ಅದು ಈ ಕ್ಷಣದ ತುರ್ತು. ಇಡೀ ದೇಶಕ್ಕೆ ಇಂಥ ಪ್ರಯತ್ನಗಳ ಅಗತ್ಯವಿದೆ’ ಎಂದು ಅವರು ನುಡಿದರು. ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲೆಂದು ಪೈಲಟ್ ಇದೀಗ ಮಧ್ಯ ಪ್ರದೇಶಕ್ಕೆ ಬಂದಿದ್ದಾರೆ.

‘ಬಿಜೆಪಿಗೆ ದೇಶದಲ್ಲಿ ಕಾಂಗ್ರೆಸ್ ಮಾತ್ರ ಸವಾಲು ಹಾಕಬಹುದು. ಅಶೋಕ್ ಗೆಹ್ಲೋಟ್ ಅವರು ಉಸ್ತುವಾರಿಯಾಗಿರುವ ರಾಜಸ್ಥಾನದಲ್ಲಿ ಇದೀಗ ಚುನಾವಣೆಗಳು ನಡೆಯುತ್ತಿವೆ. ಬಿಜೆಪಿಯನ್ನು ಸೋಲಿಸಲು ನಾವು ಒಗ್ಗೂಡಿ ಶ್ರಮಿಸಬೇಕಿದೆ. ‘ನಾವು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ಎರಡು ಬಾರಿ ಸರ್ಕಾರ ರಚಿಸಿದ್ದೇವೆ. ನಂತರ ಎರಡೂ ಚುನಾವಣೆಗಳಲ್ಲಿ ಸೋತೆವು. ಇದಾದ ನಂತರವೂ ಪಕ್ಷದ ಹೈಕಮಾಂಡ್​ ಗೆಹ್ಲೋಟ್ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು. ನಾವು ಅದನ್ನು ಒಪ್ಪಿಕೊಂಡೆವು. ಈಗ ನಾವು ಮುಂದಿನ ಚುನಾವಣೆ ಗೆಲ್ಲುವ ಬಗ್ಗೆಯಷ್ಟೇ ಯೋಚಿಸಬೇಕಿದೆ’ ಎಂದು ಅವರು ತಿಳಿಸಿದರು. ‘ಇಷ್ಟು ದೊಡ್ಡಮಟ್ಟದ ನಾಯಕ ಈ ಹಂತದಲ್ಲಿ ಹೀಗೆಲ್ಲಾ ಅಂಥ ವಿಚಾರಗಳ ಬಗ್ಗೆ ಮಾತನಾಡುವ ಅಗತ್ಯ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಎನ್​ಡಿಟಿವಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿನ್ ಪೈಲಟ್ ಅವರನ್ನು ‘ವಿಶ್ರಾಸದ್ರೋಹಿ’ ಎಂದು ನಿಂದಿಸಿದ್ದರು. ‘ವಿಶ್ವಾಸದ್ರೋಹಿಯು (ಗದ್ದರ್) ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಹೈಕಮಾಂಡ್ ಎಂದಿಗೂ ಸಚಿನ್ ಪೈಲಟ್​ರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ತಮ್ಮ ಜೊತೆಗೆ 10 ಶಾಸಕರೂ ಇಲ್ಲದ ವ್ಯಕ್ತಿ ಬಂಡಾಯವೆದ್ದಿದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿದ್ದರು, ಅವನೊಬ್ಬ ಸಂಚುಕೋರ’ ಎಂದು ಗೆಹ್ಲೋಟ್ ಹರಿಹಾಯ್ದಿದ್ದರು.

ಇದನ್ನೂ ಓದಿ: Ashok Gehlot: ಸಚಿನ್ ಪೈಲಟ್​ನಂತಹ ದೇಶದ್ರೋಹಿ ಸಿಎಂ ಆಗಲು ಅಸಾಧ್ಯ; ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada