
ಜೈಪುರ, ಆಗಸ್ಟ್ 18: ಮನೆಯ ತಾರಸಿ ಮೇಲೆ ಡ್ರಮ್ನಲ್ಲಿ ಮನೆ ಮಾಲೀಕನ ಶವ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಕಿಶನ್ಗಢಬಾಸ್ನಲ್ಲಿ ನಡೆದಿದೆ. ಮನೆಯ ತಾರಸಿ ಮೇಲೆ ಇರಿಸಲಾಗಿದ್ದ ಡ್ರಮ್ನಲ್ಲಿ ಶವ ಪತ್ತೆಯಾಗಿದ್ದು, ಪತ್ನಿ ಹಾಗೂ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮೃತನನ್ನು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನಿವಾಸಿ ಹಂಸರಾಮ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆಗಸ್ಟ್ 17 ರಂದು ಬೆಳಕಿಗೆ ಬಂದ ಈ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದ್ದು, ಪೊಲೀಸರು ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಅಕ್ಕಪಕ್ಕದ ಮನೆಯವರಿಗೆ ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೂಡಲೇ ಬಂದು ಮನೆಯ ಮೇಲೆ ಇರಿಸಲಾಗಿದ್ದ ಡ್ರಮ್ ತೆರೆದು ನೋಡಿದಾಗ ಅಲ್ಲಿ ಶವವಿತ್ತು.ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, ದೇಹವು ಬೇಗ ಕೊಳೆಯುವಂತೆ ಮಾಡಲು ಉಪ್ಪು ಸಿಂಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹಂಸರಾಮ್ ಕಳೆದ ಒಂದೂವರೆ ತಿಂಗಳಿನಿಂದ ಆದರ್ಶ ಕಾಲೋನಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದು, ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ನಂತರ, ಅವರ ಪತ್ನಿ ಸುನೀತಾ, 3 ಮಕ್ಕಳು ಮತ್ತು ಮನೆ ಮಾಲೀಕರ ಮಗ ಜಿತೇಂದ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಇದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ.
ಮತ್ತಷ್ಟು ಓದಿ: ಪ್ರೇಯಸಿ ಒತ್ತಡಕ್ಕೆ ಪತ್ನಿಯನ್ನು ಕೊಲೆಗೈದ ಬಿಜೆಪಿ ನಾಯಕ ರೋಹಿತ್ ಸೈನಿ
ಪ್ರಾಥಮಿಕ ತನಿಖೆಯಲ್ಲಿ ಹಂಸರಾಮ್ ಮದ್ಯದ ಚಟ ಹೊಂದಿದ್ದ ಮನೆ ಮಾಲೀಕರ ಮಗ ಜಿತೇಂದ್ರನೊಂದಿಗೆ ಆಗಾಗ್ಗೆ ಮದ್ಯಪಾನ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಹಂಸರಾಮ್ ಕುಟುಂಬವೂ ಪತ್ತೆಯಾಗಿಲ್ಲ ಅಥವಾ ಜಿತೇಂದ್ರನ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ.ಪೊಲೀಸರು ಈಗ ಕರೆ ವಿವರಗಳು, ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರಸ್ತುತ, ಕಾಣೆಯಾದ ಕುಟುಂಬ ಸದಸ್ಯರು ಮತ್ತು ಜಿತೇಂದ್ರ ಅವರ ಹುಡುಕಾಟವನ್ನು ತೀವ್ರಗೊಳಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಬಗೆಹರಿಸಲು ಪೊಲೀಸರು ಹಲವು ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ಕೊಲೆಯ ಹಿಂದೆ ವೈಯಕ್ತಿಕ ದ್ವೇಷ ಅಥವಾ ಕೌಟುಂಬಿಕ ವಿವಾದದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ. ಆದಾಗ್ಯೂ, ಕಾಣೆಯಾದ ಕುಟುಂಬ ಮತ್ತು ಜಿತೇಂದ್ರ ಪತ್ತೆಯಾಗುವವರೆಗೂ, ಈ ನಿಗೂಢತೆಯು ಇನ್ನಷ್ಟು ಆಳವಾಗುತ್ತಾ ಹೋಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ