ರಾಜಸ್ಥಾನದ ಬಿಕಾನೇರ್‌ನಲ್ಲಿ ತರಬೇತಿ ವೇಳೆ ಸ್ಫೋಟ; ಇಬ್ಬರು ಯೋಧರ ಸಾವು
ರಾಜಸ್ಥಾನದಲ್ಲಿ ತರಬೇತಿ ವೇಳೆ ಟ್ಯಾಂಕರ್‌ನಲ್ಲಿ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ತುಂಬಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಅಶುತೋಶ್ ಮಿಶ್ರಾ ಉತ್ತರ ಪ್ರದೇಶದ ಡಿಯೋರಿಯಾದವರು. ಜಿತೇಂದ್ರ ರಾಜಸ್ಥಾನದ ದೌಸಾದ ನಿವಾಸಿಯಾಗಿದ್ದಾರೆ. ಈ ವಾರ ಗುಂಡಿನ ಚಕಮಕಿಯಲ್ಲಿ ನಡೆದ ಎರಡನೇ ಮಾರಣಾಂತಿಕ ಘಟನೆ ಇದಾಗಿದೆ.
ಜೈಪುರ: ತರಬೇತಿ ಅಭ್ಯಾಸದ ವೇಳೆ ಇಂದು ಟ್ಯಾಂಕ್‌ನಲ್ಲಿ ಮದ್ದುಗುಂಡುಗಳನ್ನು ತುಂಬುತ್ತಿದ್ದಾಗ ರಾಜಸ್ಥಾನದ ಬಿಕಾನೇರ್‌ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಇದು ಈ ವಾರ ಈ ವ್ಯಾಪ್ತಿಯಲ್ಲಿ ನಡೆದ ಎರಡನೇ ಮಾರಣಾಂತಿಕ ಘಟನೆಯಾಗಿದೆ. ಅವರು ಮದ್ದುಗುಂಡುಗಳನ್ನು ಲೋಡ್ ಮಾಡುವಾಗ ಚಾರ್ಜರ್ ಸ್ಫೋಟಗೊಂಡಿದೆ ಎಂದು ಭಾರತೀಯ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.
ಈ ಸ್ಫೋಟದ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. “ಮೂರು ಸೈನಿಕರು ಟ್ಯಾಂಕ್‌ನೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಸ್ಫೋಟದಲ್ಲಿ ಅಶುತೋಷ್ ಮಿಶ್ರಾ ಮತ್ತು ಜಿತೇಂದ್ರ ಎಂಬ ಯೋಧರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಯೋಧನನ್ನು ಹೆಲಿಕಾಪ್ಟರ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ” ಎಂದು ಬಿಕಾನೇರ್ ಸರ್ಕಲ್ ಆಫೀಸರ್ ನರೇಂದ್ರ ಕುಮಾರ್ ಪೂನಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಅತುಲ್ ಸಂತ್ರಸ್ತ ಅಲ್ಲ, ನಾನೇ ನಿಜವಾದ ಸಂತ್ರಸ್ತೆ: ಪೊಲೀಸರ ಮುಂದೆ ಸ್ಫೋಟಕ ಅಂಶ ಬಿಚ್ಚಿಟ್ಟ ಪತ್ನಿ
ಮೃತಪಟ್ಟಿರುವ ಅಶುತೋಶ್ ಮಿಶ್ರಾ ಉತ್ತರ ಪ್ರದೇಶದ ಡಿಯೋರಿಯಾದವರು. ಜಿತೇಂದ್ರ ರಾಜಸ್ಥಾನದ ದೌಸಾದ ನಿವಾಸಿಯಾಗಿದ್ದಾರೆ. ಅವರ ಮೃತದೇಹಗಳನ್ನು ಸೂರತ್‌ಗಢ ಸೇನಾ ಠಾಣೆಗೆ ಕೊಂಡೊಯ್ಯಲಾಯಿತು.
ಇದೇ ರೀತಿ ಭಾನುವಾರ ಗನ್ ಟೋಯಿಂಗ್ ವಾಹನಕ್ಕೆ ಬಂದೂಕಿಗೆ ಕೊಕ್ಕೆ ಹಾಕುತ್ತಿದ್ದಾಗ ಗನ್ನರ್ ಚಂದ್ರಪ್ರಕಾಶ್ ಪಟೇಲ್ ಮೃತಪಟ್ಟಿದ್ದರು. ವಾಹನ ಇದ್ದಕ್ಕಿದ್ದಂತೆ ಹಿಂದಕ್ಕೆ ಜಾರಿದ್ದರಿಂದ ಚಂದ್ರಪ್ರಕಾಶ್ ಪಟೇಲ್ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ