AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.31ಕ್ಕೆ ರಜನಿಕಾಂತ್ ಹೊಸ ಪಕ್ಷ ಘೋಷಣೆ: ಜನವರಿಗೆ ಚಾಲನೆ

ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಸೂಪರ್​ಸ್ಟಾರ್ ರಜನಿಕಾಂತ್​ ರಾಜಕೀಯ ಪ್ರವೇಶ ವಿಚಾರಕ್ಕೆ ಇಂದು (ಡಿ.3) ನಿರ್ಣಾಯಕ ಹಂತಕ್ಕೆ ಬಂದಿದೆ. ಡಿ.31ರಂದು ಪಕ್ಷವನ್ನು ಘೋಷಿಸುವುದಾಗಿ ಹೇಳಿದ ರಜನಿಕಾಂತ್, ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ಡಿ.31ಕ್ಕೆ ರಜನಿಕಾಂತ್ ಹೊಸ ಪಕ್ಷ ಘೋಷಣೆ: ಜನವರಿಗೆ ಚಾಲನೆ
ರಜನಿಕಾಂತ್
Ghanashyam D M | ಡಿ.ಎಂ.ಘನಶ್ಯಾಮ
| Updated By: sandhya thejappa|

Updated on:Dec 07, 2020 | 11:52 AM

Share

ಚೆನ್ನೈ: ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಸೂಪರ್​ಸ್ಟಾರ್ ರಜನಿಕಾಂತ್​ ರಾಜಕೀಯ ಪ್ರವೇಶ ವಿಚಾರ ಇಂದು (ಡಿ.3) ನಿರ್ಣಾಯಕ ಹಂತಕ್ಕೆ ಬಂದಿದೆ. ಡಿಸೆಂಬರ್​ 31ರಂದು ಪಕ್ಷವನ್ನು ಘೋಷಿಸುವುದಾಗಿ ಹೇಳಿದ ರಜನಿಕಾಂತ್, ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

‘ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ. ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರರಹಿತ, ಆಧ್ಯಾತ್ಮದ ರಾಜಕಾರಣವನ್ನು ನಾವು ಮಾಡುತ್ತೇವೆ. ಜಾತಿ ಮತ್ತು ಪಂಥವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಅದ್ಭುತ ಮತ್ತು ಪವಾಡ ಖಂಡಿತ ನಡೆಯಲಿದೆ’ ಎಂದು ರಜನಿಕಾಂತ್​ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. It’s now or never ಮತ್ತು We will change, we will change everything ಹ್ಯಾಷ್​ಟ್ಯಾಗ್​ಗಳನ್ನು ಅವರು ಬಳಸಿದ್ದಾರೆ.

ರಜನಿ ಮಕ್ಕಳ್ ಮಂದ್ರಂ ಸಂಘಟನೆಯ ಹಿರಿಯ ಪದಾಧಿಕಾರಿಗಳನ್ನು ನಿನ್ನೆಯಷ್ಟೇ ಭೇಟಿಯಾಗಿ ರಜನಿಕಾಂತ್ ಚರ್ಚಿಸಿದ್ದರು. ‘ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಎಂದು ವಿವಿಧ ಜಿಲ್ಲೆಗಳಿಂದ ಬಂದಿದ್ದ ಪದಾಧಿಕಾರಿಗಳು ತಿಳಿಸಿದ್ದಾರೆ. ನನ್ನ ನಿರ್ಧಾರ ಶೀಘ್ರ ಪ್ರಕಟಿಸುವೆ’ ಎಂದು ರಜನಿ ಹೇಳಿದ್ದರು.

ಕಳೆದ ಅಕ್ಟೋಬರ್​ ತಿಂಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ರಜನಿ ಅವರ ಆರೋಗ್ಯ ಪರಿಸ್ಥಿತಿ ಬಗೆಗಿನ ಪತ್ರವೊಂದು ವೈರಲ್ ಆಗಿತ್ತು. ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರಜನಿಗೆ ಕೋವಿಡ್-19ರ ಅಪಾಯವೂ ಹೆಚ್ಚು. ಒಂದು ವೇಳೆ ಲಸಿಕೆ ಬಂದರೂ, ಅದು ರಜನಿ ಅವರ ದೇಹಕ್ಕೆ ಒಗ್ಗುವ ಸಾಧ್ಯತೆಯ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದ ಮಾಹಿತಿ ಈ ಪತ್ರದಲ್ಲಿತ್ತು.

ಈ ಪತ್ರದ ಬಗ್ಗೆ ನಂತರದ ದಿನಗಳಲ್ಲಿ ಸ್ಪಷ್ಟನೆ ನೀಡಿದ್ದ ರಜನಿ, ಆ ಪತ್ರವು ನನ್ನದಲ್ಲ, ಆದರೆ ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ ಎಂದು ಹೇಳಿದ್ದರು.

ಇನ್ನು 6 ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಚುನಾವಣೆ ಫಲಿತಾಂಶಗಳನ್ನು ರಜನಿಕಾಂತ್ ಮತ್ತು ಚಿತ್ರರಂಗದ ಹಿನ್ನೆಲೆಯಿಂದಲೇ ಬಂದ ಮತ್ತೋರ್ವ ರಾಜಕಾರಿಣಿ ಪ್ರಭಾವಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಮತ್ತು ಡಿಎಂಕೆ ನಾಯಕ ಎಂ.ಕೆ.ಕರುಣಾನಿಧಿ ನಿಧನದ ನಂತರ ತಮಿಳುನಾಡು ರಾಜಕಾರಣದಲ್ಲಿ ಜನಮಾನಸ ಆವರಿಸಬಲ್ಲ ಪ್ರಭಾವಿ ರಾಜಕಾರಿಣಿಗಳ ಕೊರತೆ ಕಾಣಿಸಿಕೊಂಡಿದೆ. ದೇಶವ್ಯಾಪಿ ಅಭಿಮಾನಿಗಳನ್ನು ಹೊಂದಿರುವ ರಜನಿ, ತಮಿಳುನಾಡಿನಲ್ಲಿ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಪ್ರಭಾವಿಯೂ ಹೌದು.

1996ರಲ್ಲಿ ಜಯಲಲಿತಾ ಮತ್ತು ಅವರ ಎಐಎಡಿಎಂಕೆ ಪಕ್ಷ ಚುನಾವಣೆಯಲ್ಲಿ ಸೋಲು ಅನುಭವಿಸಲು ರಜನಿಕಾಂತ್ ಮುಖ್ಯ ಕಾರಣ ಎಂದು ಹೇಳಲಾಗಿತ್ತು. ‘ಜಯಲಲಿತಾರನ್ನು ಮತ್ತೆ ಅಧಿಕಾರಕ್ಕೆ ತಂದರೆ ದೇವರು ಸಹ ತಮಿಳುನಾಡನ್ನು ರಕ್ಷಿಸಲಾರ’ ಎಂದು ರಜನಿ ಹೇಳಿಕೆ ನೀಡಿದ್ದರು.

ಕಳೆದ ಹಲವು ವರ್ಷಗಳಿಂದ ರಜನಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹೇಳಿಕೆಗಳನ್ನು ತಳ್ಳಿ ಹಾಕಿದ್ದರು.

ಗೆಲ್ಲುವ ವಿಶ್ವಾಸವಿದೆ: ರಜನಿ ರಾಜಕೀಯಕ್ಕೆ ಬರುವುದಾಗಿ ಈ ಮೊದಲೇ ಹೇಳಿದ್ದೆ. ಆದರೆ, ಕೊರೊನಾ ಬಗ್ಗೆ ಎಚ್ಚರವಹಿಸಬೇಕಿದ್ದ ಹಿನ್ನೆಲೆಯಲ್ಲಿ ಪಕ್ಷದ ಘೋಷಣೆ ವಿಳಂಬವಾಯಿತು. ಇದು ತಮಿಳುನಾಡಿನ ಹಣೆಬರಹ ಬದಲಿಸುವ ಸಮಯ. ನಾನು ನಡೆದು ಬಂದ ದಾರಿ ಮೇಲೆ ನನಗೆ ನಂಬಿಕೆ ಇದೆ. ಹೀಗಾಗಿ ನಾನು ಗೆಲ್ಲುತ್ತೇನೆಂಬ ವಿಶ್ವಾಸವಿದೆ ಎಂದು ರಜನಿಕಾಂತ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಹೊಸ ಪಕ್ಷ ಕಟ್ಟಿ ನಾನು ಸ್ಪರ್ಧಿಸಬೇಕಿತ್ತು ಎಂದು ನೆನಪಿಸಿಕೊಂಡ ರಜನಿ, ಸಿಂಗಾಪುರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದೆ. ಅಭಿಮಾನಿಗಳ ಪ್ರಾರ್ಥನೆಯಿಂದ ನನ್ನ ಜೀವ ಉಳಿಯಿತು. ಈಗ ಈಗ ಅಭಿಮಾನಿಗಳಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಭಾವುಕರಾಗಿ ಹೇಳಿದರು.

ಈಗ ಬದಲಾವಣೆ ಆಗದಿದ್ದರೆ ಮುಂದೆ ಎಂದೂ ಆಗಲ್ಲ. ಚುನಾವಣೆಯಲ್ಲಿ ನಾನು ಗೆದ್ದರೆ ಅದು ನಿಮ್ಮ ಗೆಲುವು ಎಂದು ಅಭಿಮಾನಿಗಳಲ್ಲಿ ಹುರುಪು ತುಂಬಲು ಯತ್ನಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ಅಗತ್ಯವಿದ್ದರೆ ಒಂದಾಗೋದು ಪಕ್ಕಾ, ಸಿನಿ ಸ್ಟಾರ್ಸ್ ಪಾಲಿಟಿಕ್ಸ್ ಪರ್ವ!

Published On - 1:48 pm, Thu, 3 December 20