ಹೈದರಾಬಾದ್, ಮಾರ್ಚ್ 3: ಮೊನ್ನೆ ಬೆಂಗಳೂರಿನ ಬ್ರೂಕ್ಫೀಲ್ಡ್ನ ರಾಮೇಶ್ವರಂ ಕೆಫೆ ಹೋಟೆಲ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ (Rameshwaram Cafe bomb blast) ಘಟನೆಯನ್ನು ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಅವರು ಹೇಡಿತನದ ಕೃತ್ಯ ಎಂದು ಹೇಳಿ ಖಂಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಫೆ ಮೇಲಿನ ದಾಳಿಯು ಹೇಡಿತನದ ಕೃತ್ಯವಾಗಿದೆ. ಮತ್ತು ಭಾರತೀಯ ಮೌಲ್ಯದ ಮೇಲಿನ ಆಕ್ರಮಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ರಾಮೇಶ್ವರಂ ಕೆಫೆ ಹೋಟೆಲ್ಗೆ ಭೇಟಿ ನೀಡಿ ಬಂದ ನಂತರ ಒವೈಸಿ ಈ ಟ್ವೀಟ್ ಮಾಡಿದ್ದಾರೆ.
‘ಹೈದರಾಬಾದ್ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದೆ. ಆಹಾರ ಅಮೋಘವಾಗಿತ್ತು. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಕೆಫೆಗೆ ಇಡಲಾಗಿದೆ. ಇದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಈ ಬಾಂಬ್ ಬ್ಲಾಸ್ಟ್ ಭಾರತೀಯ ಮೌಲ್ಯಗಳ ಮೇಲೆ ಆದ ದಾಳಿ,’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರೂ ಆದ ಅವರು ಹೇಳಿದ್ದಾರೆ.
ಒವೈಸಿ ಮಾಡಿದ ಟ್ವೀಟ್ ಇದು..
Visited Hyderabad’s @RameshwaramCafe in solidarity. The food was lovely & it’s very important to remember that the Cafe is named after APJ Abdul Kalam’s birth place. #RameshwaramCafeBlast is an act of cowardice and an attack on India’s values. pic.twitter.com/qwrslYkyZK
— Asaduddin Owaisi (@asadowaisi) March 2, 2024
ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಸಾಕಷ್ಟು ಕಡೆ ಶಾಖೆಗಳನ್ನು ವಿಸ್ತರಿಸಿದೆ. ಅಬ್ದುಲ್ ಕಲಾಂ ಅವರ ಅಭಿಮಾನಿಗಳಾದ ಸಂಸ್ಥಾಪಕರು, ಮಾಜಿ ರಾಷ್ಟ್ರಪತಿಗಳ ಹುಟ್ಟಿದೂರಾದ ರಾಮೇಶ್ವರಂ ಹೆಸರನ್ನು ತಮ್ಮ ಕೆಫೆಗೆ ಇಟ್ಟಿದ್ದಾರೆ.
ಕೆಫೆಯ ಬ್ರೂಕ್ಫೀಲ್ಡ್ ಬ್ರ್ಯಾಂಚ್ನಲ್ಲಿ ಶುಕ್ರವಾರ ಬಾಂಬ್ ಸ್ಫೋಟಿಸಿ, ಹತ್ತಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದೆ. ಇದು ಐಇಡಿ ಬಾಂಬ್ ಆಗಿದ್ದು, ಹೆಚ್ಚು ತೀವ್ರತೆ ಹೊಂದಿರಲಿಲ್ಲ. ಬಾಂಬ್ ಸ್ಫೋಟಿಸಿದ ವ್ಯಕ್ತಿಯ ಚಹರೆ ಮತ್ತು ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಗ್ ಹಿಡಿದು ಬರುವ ಆತ ಹೋಟೆಲ್ನಲ್ಲಿ ರವೆ ಇಡ್ಲಿ ತಿಂದು ಬಳಿಕ ಬ್ಯಾಗನ್ನು ಅಲ್ಲೇ ಬಿಟ್ಟು ತರಾತುರಿಯಲ್ಲಿ ಹೋಗಿದ್ದ. ಬಳಿಕ ಬಾಂಬ್ ಸ್ಫೋಟ ಸಂಭವಿಸಿದೆ.
ಸರ್ಕಾರ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಭಯೋತ್ಪಾದಕ ಕೃತ್ಯದ ಸಾಧ್ಯತೆ ಇರುವುದರಿಂದ ಎನ್ಐಎ ಮತ್ತು ಎನ್ಎಸ್ಜಿ ತಂಡಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Sun, 3 March 24